Asianet Suvarna News Asianet Suvarna News

ಬಿಜೆಪಿಗೆ ನಾನು ರೆಬೆಲ್‌ ಅಲ್ಲ, ಲಾಯಲ್‌: ಪ್ರತಾಪ್ ಸಿಂಹ

ಮೈಸೂರಿನ ಮುಡಾ ಹಗರಣ ಮೈಸೂರು ಜಿಲ್ಲೆಗೆ ಮಾತ್ರ ಸೀಮಿತ. ಇದರಲ್ಲಿ ಮುಖ್ಯಮಂತ್ರಿ ಸಿದರಾಮಯ್ಯ ಅವರು ನೈತಿಕವಾಗಿ ತಪ್ಪೆಸಗಿದ್ದಾರೆ. ಕಾನೂನಾತ್ಮಕ ವಿಷಯಕ್ಕೆ ಹೋದರೆ ಅದು ತನಿಖೆ ಮೂಲಕ ಹೊರ ಬರಬೇಕಾಗುತ್ತದೆ: ಮೈಸೂರು- ಕೊಡಗು ಮಾಜಿ ಸಂಸದ ಪ್ರತಾಪ್ ಸಿಂಹ 
 

I am not a rebel but loyal to BJP says former mysuru kodagu mp pratap simha grg
Author
First Published Aug 22, 2024, 12:13 PM IST | Last Updated Aug 22, 2024, 12:13 PM IST

ಮೈಸೂರು(ಆ.22):  ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಿಂದ ಹತ್ತು 3ವರ್ಷಗಳ ಕಾಲ ಸಂಸದರಾಗಿದ್ದ ಪ್ರತಾಪ್ ಸಿಂಹ ಅವರಿಗೆ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡಲಿಲ್ಲ. ಬದಲಿಗೆ ರಾಜವಂಶಸ್ಥ ಯದುವೀರ್‌ಕೃಷ್ಣದತ್ತ ಚಾಮರಾಜ ಒಡೆಯ‌ರ್ ಅವರಿಗೆ ನೀಡಿತು. ಇದಾದ ನಂತರ ಪ್ರತಾಪ್ ಸಿಂಹ ಅವರು ಬಿಜೆಪಿಯಲ್ಲಿ ಗಟ್ಟಿ ಹಾಗೂ ಭಿನ್ನಧ್ವನಿಯಲ್ಲಿ ಮಾತನಾಡುತ್ತಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗುವ ಮುನ್ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ವಾರ ಅವರೊಂದಿಗೆ ಕನ್ನಡಪ್ರಭದ ಮುಖಾಮುಖಿ

* ಶಿಸ್ತಿನ ಸಿಪಾಯಿಯಂತೆ ಇದ್ದ ನೀವು ಏಕಾಏಕಿ ರೆಬೆಲ್ ಆಗ್ತಿರೋದು ಯಾಕೆ? 

ಮೊದಲು ನಾವು ರೆಬೆಲ್ ಮತ್ತು ಲಾಯಲ್ (ನಿಷ್ಠಾವಂತ) ನಡುವಿನ ವ್ಯತ್ಯಾಸ ತಿಳಿಯಬೇಕು. 2012ರ ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದ ನಂತರ ಯಡಿಯೂರಪ್ಪ ಅವರು ಕೆಜಿಪಿ ಕಟ್ಟಿ 2013ರ ಚುನಾವಣೆಯಲ್ಲಿ ಸ್ಪರ್ಧಿಸಿದರು. ಅದೇ ವೇಳೆ ಬಳ್ಳಾರಿಯ ಜನಾರ್ಧನ ರೆಡ್ಡಿ ಅವರು ಬಿಎಸ್ ಆರ್‌ಪಕ್ಷ ಕಟ್ಟಿ ಬೇರೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರು. 2023ರಲ್ಲಿ ಟಿಕೆಟ್‌ ಕೊಡಲಿಲ್ಲ ಎಂದು ಲಕ್ಷ್ಮಣ ಸವದಿ, ಜಗದೀಶ್‌ ಶೆಟ್ಟರ್‌ ಕಾಂಗ್ರೆಸ್ ನಿಂದ ಸ್ಪರ್ಧಿಸಿದರು. ಲೋಕಸಭಾ ಚುನಾವಣೆಯಲ್ಲಿ ಈಶ್ವರಪ್ಪ ಪಕ್ಷೇತರರಾಗಿ ಸ್ಪರ್ಧಿಸಿದರು. ನನಗೂ ವಿನಾಕಾರಣ ಟಿಕೆಟ್ ನಿರಾಕರಿಸಿದರು. ಆದರೆ ಟಿಕೆಟ್ ಘೋಷಣೆಯಾದ ನಂತರ ನಾನು ಅಭ್ಯರ್ಥಿ ವಿರುದ್ಧ ಒಂದೇ ಒಂದು ಹೇಳಿಕೆ ನೀಡಲಿಲ್ಲ, ಪಕ್ಷ ದೊಡ್ಡದು, ಮೋದಿ ಅವರು ಪ್ರಧಾನಿಯಾಗಬೇಕು ಎಂದು ಪ್ರಚಾರ ಮಾಡಿದ್ದೇನೆ. ಹಾಗಿದ್ದರೆ ರೆಬಲ್ ಯಾರು ಲಾಯಲ್ ಯಾರು ಎಂದು ಈ ಘಟನೆಗಳಿಂದ ಜನರೇ ಅರ್ಥ ಮಾಡಿಕೊಳ್ಳಬಹುದು. ಪಕ್ಷದ ಲಾಯಲ್ ಸೋಲ್ಡರ್ (ನಿಷ್ಠಾವಂತ ಸೈನಿಕ) ನಾನು.

ನನ್ನ ಕಾಳಜಿ ಅರ್ಥಮಾಡಿಕೊಳ್ಳದೆ ಸಿದ್ದರಾಮಯ್ಯ ಗಂಡಾಂತರ ಎಳೆದುಕೊಂಡರು: ಪ್ರತಾಪ ಸಿಂಹ

* ಲೋಕಸಭಾ ಚುನಾವಣೆ ಟಿಕೆಟ್ ತಪ್ಪಿದ್ದು ಇದಕ್ಕೆ ಕಾರಣವೇ?

 ಟಿಕೆಟ್ ನಿರಾಕರಿಸುವ ವೇಳೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡಾ ಕರೆ ಮಾಡಿ ಬೇರೊಬ್ಬರಿಗೆ ಟಿಕೆಟ್ ನೀಡುವುದಾಗಿ ಹೇಳಿದರು. ಏನು ಕಾರಣ ಎಂದಾಗ, ಇದೊಂದು ಕಾರ್ಯತಂತ್ರ ಎಂದಿದ್ದರು, ಒಬಿಸಿಗೆ ಟಿಕೆಟ್ ಕೊಡಬೇಕು ಎಂಬ ಉದ್ದೇಶವಿದೆ ಎಂದು ಗೊತ್ತಾಯಿತು. ಯದುವೀರ್ ಅವರಿಗೆ ಟಿಕೆಟ್ ಕೊಟ್ಟರೆ ಹಳೇ ಮೈಸೂರು ಭಾಗದಲ್ಲಿ ಅಂದರೆ ತುಂಗಾಭದ್ರ ನದಿವರೆಗೂ ಮಹಾರಾಜರ ಪ್ರಭಾವ ಇದೆ. ಇದರಿಂದ ಪಕ್ಷಕ್ಕೆ ಅನುಕೂಲವಾಗಲಿದೆ ಎಂದು ಕೇಂದ್ರ ನಾಯಕರಿಗೆ ರಾಜ್ಯದ ನಾಯಕರು ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದರು. ಹಳೇ ಮೈಸೂರು ಭಾಗದ ಎಲ್ಲರೂ ಬಿಜೆಪಿಗೆ ವೋಟ್ ಹಾಕುತ್ತಾರೆಂಬುದು ಅವರ ಉದ್ದೇಶವಾಗಿತ್ತು. ಈ ವಾದದ ಹಿಂದೆ ದುರುದ್ದೇಶ ಇದೆ, ಸತ್ಯಾಸತ್ಯತೆ ಇಲ್ಲ ಎಂಬುದು ಆಗಲೇ ಗೊತ್ತಾಯಿತು. ಮಹಾರಾಜರನ್ನು 1991 ಮತ್ತು 2004ರಲ್ಲಿ ಮೈಸೂರಿನವರು 2 ಬಾರಿ ಸೋಲಿಸಿದ್ದಾರೆ. ಅವರ ಹೆಸರಲ್ಲಿ ಗೆಲ್ಲುತ್ತಾರೆ ಎನ್ನುವುದಾದರೆ 2004ರಲ್ಲಿ ಅವರೇ ಮೂರನೇ ಸ್ಥಾನಕ್ಕೆ ಹೋಗುವ ಸ್ಥಿತಿ ಬರುತ್ತಿರಲಿಲ್ಲ. 

* ಕಳೆದ ಬಾರಿ ಚಾಮರಾಜನಗರದವಲ್ಲಿ ಗೆದ್ದಿದೆವು. ಆದರೆ ಈ ಬಾರಿ ಒಂದೂವರೆ ಲಕ್ಷ ಮತಗಳಿಂದ ಸೋತಿದ್ದೇವೆ. ಮಂಡ್ಯದಲ್ಲಿ ಕುಮಾರಣ್ಣ, ರಾಮನಗರದಲ್ಲಿ ಡಾ. ಮಂಜುನಾಥ್ ಮಹಾರಾಜರ ಹೆಸರಿನಲ್ಲಿ ಗೆದ್ದಿದ್ದಾರೆ ಎಂದರೆ ಜನರ ಎದುರು ನಗೆಪಾಟಲಿಗೆ ಈಡಾಗುತ್ತೇವೆ. ಅಕ್ಕಪಕ್ಕದ ಚಾಮರಾಜನಗರ ಮತ್ತು ಹಾಸನದಲ್ಲಿ ಅವರ ಪ್ರಭಾವ ಬೀರಿತೆ?

ನಾನು ಇಂದು ಯಾಕೆ ಈ ವಿಷಯ ಮಾತನಾಡುತ್ತೇನೆಂದರೆ ಮುಂದಿನ ದಿನಗಳಲ್ಲಾದರೂ ಈ ರೀತಿ ಯಾರಿಗೂ ಅನ್ಯಾಯ ಆಗಬಾರದು. ಪಕ್ಷ ಸರಿದಾರಿಯಲ್ಲಿ ಹೋಗಬೇಕು. ವೈಯಕ್ತಿಕ ಮೇಲಾಟ, ದ್ವೇಷದ ರಾಜಕಾರಣ ಬಿಜೆಪಿ ಭವಿಷ್ಯಕ್ಕೆ ಒಳ್ಳೆಯದಲ್ಲ, ಫಲಿತಾಂಶದ ಮೂರು ತಿಂಗಳ ಬಳಿಕ ಮಾತನಾಡುತ್ತಿದ್ದೇನೆ. ಆ ಕ್ಷಣದಲ್ಲೇ ಮಾತನಾಡಿದ್ದರೆ ನಾನು ರೆಬಲ್ ಆಗುತ್ತಿದ್ದೆ. ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದೇನೆ. ನಾನು ರೆಬಲ್ ಅಲ್ಲ ಲಾಯಲ್,

* ಬೆಳಗಾವಿಯಲ್ಲಿ ನಡೆದ ಪಕ್ಷದ ಅತೃಪ್ತ ಮುಖಂಡರ ಸಭೆಯ ಉದ್ದೇಶ ಏನು? 

ಏನಾದರೂ ಸಿಕ್ಕಿಲ್ಲದೆ ಮುನಿಸಿಕೊಂಡಿದ್ದರೆ ಅತೃಪ್ತರಾಗುತ್ತಾರೆ. ಮೈಸೂರಿನ ಮುಡಾ ಹಗರಣ ಮೈಸೂರು ಜಿಲ್ಲೆಗೆ ಮಾತ್ರ ಸೀಮಿತ. ಇದರಲ್ಲಿ ಮುಖ್ಯಮಂತ್ರಿ ಸಿದರಾಮಯ್ಯ ಅವರು ನೈತಿಕವಾಗಿ ತಪ್ಪೆಸಗಿದ್ದಾರೆ. ಕಾನೂನಾತ್ಮಕ ವಿಷಯಕ್ಕೆ ಹೋದರೆ ಅದು ತನಿಖೆ ಮೂಲಕ ಹೊರ ಬರಬೇಕಾಗುತ್ತದೆ. ಆದರೆ ವಾಲ್ಮೀಕಿ ಅಭಿವೃದ್ಧಿ ನಿಗಮದ್ದು ಬಹಳ ದೊಡ್ಡ ಹಗರಣ. ಸಮಾಜ ಕಲ್ಯಾಣ ಇಲಾಖೆಯಲ್ಲಿ ನಡೆದಿರುವ ಈ ಹಗರಣದ ವ್ಯಾಪಕತೆ ಜಾಸ್ತಿ ಇದೆ. 182 ಕೋಟಿಯನ್ನು ಬಳ್ಳಾರಿ, ರಾಯಚೂರು ಭಾಗದಲ್ಲಿ ಚುನಾವಣಾ ಆಕ್ರಮ ಎಸಗಲು ಹೆಂಡ ಖರೀದಿಸಲು ದುರುಪಯೋಗ ಮಾಡಲು ಸಾಕ್ಷಾಧಾರ ಸಮೇತ ಸಿಕ್ಕಿ ಬಿದ್ದಿದ್ದಾರೆ. ಅಕ್ರಮವಾಗಿರುವುದು 182 ಅಲ್ಲ, 82 ಕೋಟಿ ಎಂದು ಸಿಎಂ ಸದನದಲ್ಲಿ ಒಪ್ಪಿಕೊಂಡಿದ್ದಾರೆ. ಹಣಕಾಸು ಖಾತೆ ಸಚಿವರು ಅವರೇ ಆಗಿರುವುದರಿಂದ ಸಿಎಂ ನೇರ ಹೊಣೆ ಆಗುತ್ತಾರೆ. ಸಿಎಂ ಸಿಲುಕಿಸಲು 82 ಕೋಟಿಗಿಂತ ಬೇರೆ ವಿಷಯ ಇಲ್ಲ.ಎಸ್ಪಿಸಮುದಾಯದವರುಹೈದರಾಬಾದ್ ಮತ್ತು ಈ ಭಾಗದಲ್ಲಿ ಹೆಚ್ಚಿದ್ದಾರೆ. ಈ ವಿಷಯ ಕೈಗೆತ್ತಿಕೊಳ್ಳಬೇಕೆಂದು ನಾಯಕರು ಹೇಳಿದ್ದರಿಂದ ಸಭೆ ನಡೆದಿದೆ. ಈ ವಿಷಯದ ಬಗ್ಗೆ ಅಧಿವೇಶನದಲ್ಲಿ ಸಣ್ಣ ಚರ್ಚೆಯೂ ಆಗಿಲ್ಲ ಎಂದು ಯತ್ನಾಳ್, ಜಾರಕಿಹೊಳಿ, ಲಿಂಬಾವಳಿ, ಕುಮಾರ ಬಂಗಾರಪ್ಪ ಅವರು ಪಾದಯಾತ್ರೆಗೆ ಮುಂದಾಗಿದ್ದಾರೆ. ಆ ಹಣದಲ್ಲಿ ಹೆಂಡ ಖರೀದಿಸಿದ್ದಕ್ಕೆ ದಾಖಲೆ ಸಿಕ್ಕಿದೆ. ಎರಡು ಚುನಾವಣೆ ರದುಪಡಿಸಲು ನಮ್ಮ ಬಳಿ ಎಲ್ಲಾ ಸಾಕ್ಷ್ಯಾಧಾರ ಇದೆ. ಇದಕ್ಕಿಂತ ದೊಡ್ಡ ವಿಚಾರ ಇದೆಯಾ ಹೇಳಿ? ಆದ್ದರಿಂದ ಹಿರಿಯ ನಾಯಕರು ಪಾದಯಾತ್ರೆ ಬಗ್ಗೆ . 2 118 4.2., ໑໖ 192 6.0. ಆಗುತ್ತದೆ. ಅಲ್ಲಿ ಏನು ಮಾಡಬಹುದು ಎಂಬ ಬಗ್ಗೆ ಚರ್ಚೆ ನಡೆಯಿತು. ಪಾದಯಾತ್ರೆ ಮಾಡುವುದಾದರೆ ವರಿಷ್ಠರ ಗಮನಕ್ಕೆ ತಂದೇ ಮಾಡುತ್ತೇವೆ. ಅದಕ್ಕೂ ಮುಂಚೆ ಸಭೆ ಮಾಡಿದರೆ ರೆಬೆಲ್‌ಗಳು, ಅತೃಪ್ತರು ಎನ್ನುವುದು ಸರಿಯೇ? 

* ಪಾದಯಾತ್ರೆ ನೆಪದಲ್ಲಿ ವಿಜಯೇಂದ್ರ ವಿರುದ್ಧ ರಣಕಹಳೆ ಮೊಳಗಿದೆಯಂತೆ? 

ಇಂಥ ಊಹಾಪೋಹಗಳಿಗೆ ಯಾರೂ ಉತ್ತರ ಕೊಡಲು. ಸಾಧ್ಯವಿಲ್ಲ. ನಾನು ಮೈಸೂರು ಪಾದಯಾತ್ರೆಯಲ್ಲೂ ಪಾಲ್ಗೊಂಡಿದ್ದೆ. ನಾವು ಪಕ್ಷದ ವಿರುದ್ದ ಇಲ್ಲ. ಈ ಹಿಂದೆ ಕಟೀಲ್ ಅವರ ಟಿಪ್ಪು ಜಯಂತಿ, ಮಹಿಷ ದಸರಾ ಹೋರಾಟದಲ್ಲಿ ಸ್ವತಂತ್ರವಾಗಿ ನಿರ್ಧಾರ ಕೈಗೊಂಡಿದ್ದೆ. ಯಾವುದೇ ಅನುಮತಿ ಪಡೆದಿರಲಿಲ್ಲ. ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವಾಗ ಅವರ ಗಮನಕ್ಕೆ ತರುತ್ತಿದ್ದೆವು. ಅವು ನಮ್ಮ ಸಿದ್ಧಾಂತಕ್ಕೆ ಸಂಬಂಧಿಸಿದ್ದು. ಯಾರದ್ದೋ ವಿರುದ್ಧ ಅಲ್ಲ, ಪಕ್ಷದ ಅಧ್ಯಕ್ಷರು ಎಂಬ ಕಾರಣಕ್ಕೆ ಪಕ್ಷ ಅವರ ಸ್ವತ್ತಾಗಿರುವುದಿಲ್ಲ, ಎಲ್ಲಾ ನಾಯಕರು ಒಂದೆಡೆ ಸೇರಿ ಹೊಸ ಯೋಚನೆ ಬಂದಾಗ ಚರ್ಚಿಸಿ ತೀರ್ಮಾನಿಸಿ, ನಂತರ ಮೇಲಿನವರ ಗಮನಕ್ಕೆ ತಂದು ಅವರಿಗೂ ಮನವರಿಕೆ ಮಾಡಿಕೊಟ್ಟು ಮುಂದಿನ ಹೋರಾಟ ಕೈಗೆತ್ತಿಕೊಳ್ಳುತ್ತೇವೆ. ಹಾಗಾಗಿ ಇದು ಯಾರದೋ ಖಾಸಗಿ ಸ್ವತ್ತು, ನಾವು ಅದನ್ನು ಕಬಳಿಸಲು ಬರುತ್ತಿದ್ದೇವೆ ಎಂಬ ತಪ್ಪು ಕಲ್ಪನೆ ಬೇಡ. ಇದು ಭಾರತೀಯ ಜನತಾ ಪಕ್ಷ ಇಲ್ಲಿ ಕಾರ್ಯಕರ್ತನಿಂದ ನಾಯಕರವರೆಗೆ ಎಲ್ಲರ ಪಾಲುದಾರಿಕೆ ಇರುತ್ತದೆ.

* ಈಗ ಕುಟುಂಬ ರಾಜಕಾರಣದ ಬಗ್ಗೆ ಬಿಜೆಪಿಯಲ್ಲಿ ಯಾಕೆ ಪ್ರಸ್ತಾಪವಾಗುತ್ತಿದೆ? 

ಇಂದು ಕರ್ನಾಟಕದ ರಾಜಕಾರಣ ಒಂದು ಡಜನ್ ಕುಟುಂಬದ ಕೈಯಲ್ಲಿದೆ. ಪ್ರತಿಯೊಬ್ಬ ಶಾಸಕ, ತನ್ನ ಮಗನನ್ನು ಶಾಸಕನ್ನಾಗಿ ಮಾಡಲು, ಸಂಸದ ತನ್ನ ಮಗನನ್ನು ಶಾಸಕನನ್ನಾಗಿಯೋ, ಸಂಸದನನ್ನಾಗಿಯೋ ಮಾಡಲು ಕ್ಷೇತ್ರ ಹುಡುಕುತ್ತಾರೆ. ಕಳೆದ ಲೋಕಸಭಾಚುನಾವಣೆಯಲ್ಲಿ ನಮ್ಮ ಪಕ್ಷದಲ್ಲಿಯೂ ಮಕ್ಕಳಿಗೆ ಟಿಕೆಟ್ ಕೊಟ್ಟಿದ್ದಾರೆ. ಮಕ್ಕಳಿಗೆ ಟಿಕೆಟ್ ಕೊಡಿ ಎಂದು ಹೋರಾಟ ಮಾಡಿದವರೂ ಇದ್ದಾರೆ. ಅದೇ ರೀತಿ ಕಾಂಗ್ರೆಸ್ ನಲ್ಲಿ ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ದಾವಣಗೆರೆ, ಶಿವಮೊಗ್ಗ ಮುಂತಾದ ಕಡೆ ಮಕ್ಕಳು, ಸಂಬಂಧಿಕರು, ಕುಟುಂಬದವರಿಗೆ ಟಿಕೆಟ್ ಕೊಟ್ಟಿದ್ದಾರೆ. ಇದೇ ರೀತಿ ಮುಂದುವರೆದರೆ ಕಂಡವರ ಮಕ್ಕಳಿಗೆ ಏನು ಭವಿಷ್ಯವಿದೆ? ಯಾರೋ ಕೈ ಹಿಡಿದು ಬೆಳೆಸಿದ್ದಕ್ಕೆ ಖರ್ಗೆ, ಸಿದ್ದರಾಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪ ಆಗಿದ್ದೀರಿ. ಕಂಡವರ ಮಕ್ಕಳ ಕೈ ಹಿಡಿದೂ ಕೂರಿಸಿ, ನಿಮ್ಮ ಮಕ್ಕಳನ್ನು ಮಾತ್ರ ದಂಡಿಗೆಗೆ ಕೂರಿಸಬೇಡಿ ಎಂದು ವಿಸ್ತ್ರತ ಉದ್ದೇಶ ಇಟ್ಟುಕೊಂಡು, ನಮ್ಮ ನಾಯಕರಲ್ಲಿ ಹೃದಯ ವೈಶಾಲ್ಯತೆ ಇರಬೇಕು. ಅವರು ಕಂಡವರ ಮಕ್ಕಳನ್ನು ಬೆಳೆಸಿದಂತಹ ದೇವ ರಾಜ ಅರಸು ಅವರ ಆದರ್ಶವನ್ನು ಇಟ್ಟುಕೊಂಡು ಹೋಗ ಬೇಕು ಎಂದಷ್ಟೇ ಹೇಳಿದ್ದೇನೆಯೇ ಹೊರತು ಯಾವುದೋ ವ್ಯಕ್ತಿಯನ್ನು ಉದ್ದೇಶವಾಗಿಟ್ಟುಕೊಂಡು ಹೇಳಿದ ಮಾತಲ್ಲ. 

* ಸಂಘ ಪರಿವಾರ ಮತ್ತು ಬಿಜೆಪಿ ನಡುವಿನ ಸಂಬಂಧ ತುಸು ಹದಗೆಟ್ಟಿದೆಯೇ? 

ಬಿಜೆಪಿ ಎಂಬುದು ಸಂಘದ ಹೊಕ್ಕಳು ಬಳ್ಳಿ. ಬಿಜೆಪಿಗೆ ದಾರಿ ದೀಪ ಎಂಬುದು ಸಂಘ, ನಾವೆಲ್ಲ ಒಟಿಸಿ ಕ್ಯಾಂಪಪ್ ಮಾಡಿ ಕೊಂಡು ಬಂದಿದ್ದೇವೆ. ಹೊರಗಿನವರೂ ಬಂದಿದ್ದಾರೆ. ಬಿಜೆಪಿಗೆ ಒಂದು ಸೈದ್ಧಾಂತಿಕ ಹಿನ್ನೆಲೆ, ತಳಹದಿ ಇದೆ. ಯಾವಾಗ ದಾರಿ ದೀಪ ಬಿಟ್ಟು ಬಿಜೆಪಿ ಮುನ್ನಡೆ ಇಟ್ಟರೆ, ಸಂಘದ ಹೊಕ್ಕಳು ಬಳ್ಳಿ ಬಿಜೆಪಿ ಆಗಿರದೆ ಬೇರೆ ಆಗುತ್ತದೆ. ರಾಜಕೀಯದಲ್ಲಿ ಇಂತಹ ಸಣ್ಣಪುಟ್ಟ ವ್ಯತ್ಯಾಸವಾದಾಗ ನಮ್ಮ ಮೂಲ ನೆನಪಿಸಿಕೊಂಡು ಸರಿ ದಾರಿಯಲ್ಲಿ ನಡೆಯಬೇಕಾದ ಜವಾಬ್ದಾರಿ, ಹೊಣೆಗಾರಿಕೆ ಬಿಜೆಪಿ ಮೇಲಿರುತ್ತದೆ. ಮೈ ಮರೆತರೆ ಕಿವಿಹಿಂಡಿ ಬುದ್ದಿ ಹೇಳುವ ಅಧಿಕಾರ, ಸ್ವಾತಂತ್ರ್ಯ ಆರೆಸ್ಸೆಸ್‌ಗಿದೆ. 

* ನೀವು ರಾಜ್ಯ ರಾಜಕಾರಣಕ್ಕೆ ಬರೋದು ಹಕ್ಕನಾ? 

ಲೋಕಸಭೆಗೆ ಹೋಗಬೇಡ ಎಂದರೆ ರಾಜ್ಯದಲ್ಲಿ ಇರು ಎಂದರ್ಥ. ಈಗ ಬಸವರಾಜ ಬೊಮ್ಮಾಯಿ ಅವರು ಕೇಂದ್ರಕ್ಕೆ ಹೋದರು, ಜಗದೀಶ್ ಶೆಟ್ಟರ್, ಸೋಮಣ್ಣ, ಕಾಗೇರಿ ಕೇಂದ್ರಕ್ಕೆ ಹೋದರು, ಯಡಿಯೂರಪ್ಪ ಅವರು ಸಕ್ರಿಯ ರಾಜಕೀಯ ದಿಂದ ನೇಪಥ್ಯಕ್ಕೆ ಸರಿಯುತ್ತಿದ್ದಾರೆ. ಈ ಸಂದರ್ಭದಲ್ಲಿ ಹೊಸ ತಲೆಮಾರಿನ ನಾಯಕತ್ವ ಬೇಕು. ಹಾಗಾಗಿ ನನಗೆ ಇಲ್ಲಿ ವಿಪುಲವಾದ ಅವಕಾಶವಿದೆ. ನಾನು ಸಂಘದ ಹಿನ್ನೆಲೆಯಿಂದ ಬಂದವನು. ಖಂಡಿತವಾಗಿಯೂ ಸೈದ್ಧಾಂತಿಕ ಹಿನ್ನೆಲೆ ಇಟ್ಟುಕೊಂಡಿರುವವರು, ಯೋಚನೆ, ಹೋರಾಟದಿಂದ ಬಂದವರ ಸಂಖ್ಯೆ ಎಲ್ಲಾ ಪಕ್ಷದಲ್ಲೂ ವಿರಳವಾಗಿದೆ. ಆದ್ದರಿಂದ ಇದೇ ನನ್ನ ಭವಿಷ್ಯ ಎಂದು ಭಾವಿಸಿದ್ದೇನೆ. 

* ಮೈಸೂರಿನ ಮುಡಾ ಹಗರಣ ಏನು? ಸಿದ್ದರಾಮಯ್ಯ ಪಾತ್ರ ಏನು? 

ಒಂದೂವರೆ ತಿಂಗಳ ಹಿಂದೆಯೇ ಹೇಳಿದೆ. ಕಳೆದ 20 ವರ್ಷ ಸಿಎಂಆದವರಿಗೆ ಹೋಲಿಸಿದರೆ, ಆರ್ಥಿಕಸ್ಥಿತಿಗತಿ ಪರಿಗಣಿಸಿದರೆ ಸಿದ್ದರಾಮಯ್ಯ ಅವರನ್ನು ಭ್ರಷ್ಟ ಎಂದು ಹೇಳಲು ಮನಸ್ಸು ಬರುವುದಿಲ್ಲ. ಈ 14 ನಿವೇಶನ ಪಡೆದದ್ದು ಕಾನೂನು ಬಾಹಿರ ಮತ್ತು ಆಕ್ರಮ.62 ಕೋಟಿ ಮೌಲ್ಯ ಇದೆ, ಅದನ್ನು ಕೊಡಬೇಕು ಎಂದು ಸಿದ್ದರಾಮಯ್ಯ ಅವರು ಹೇಳಿದಾಗ ಭ್ರಮನಿರಸನ ಆಯಿತು, ಅವರ ಬಗ್ಗೆ ಇದ್ದ ನಂಬಿಕೆ ಹೋಯಿತು. ರಾಜಕಾರಣಿಗಳು ಮತ್ತು ಅಧಿಕಾರಿಗಳು ದೋಚಿರುವುದನ್ನು ರಾಜಕಾರಣಿಗಳು ಮತ್ತು ಅಧಿಕಾರಿಗಳು ದೋಚಿರುವುದನ್ನು ಕೊಡಿಸಬೇಕು ಎಂದರೆ ಎನ್. ಕುಮಾರ್, ಸಂತೋಷ್ ಹೆಗೆ ಅವರಿಂದ ತನಿಖೆಗೆ ಆದೇಶಿಸಿ ಎಂದು ಕೇಳಿಕೊಂಡೆ, ಗಿಣಿಗೆ ಹೇಳಿದಂತೆ ಹೇಳಿದೆ. ಅವರು ಕೇಳಲಿಲ್ಲ. ಇಂದು ಗಂಡಾಂತರವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಕಳೆದ 41 ವರ್ಷದ ಚುನಾವಣಾ ರಾಜಕೀಯದಲ್ಲಿ ಇಂತಹ ಕಳಂಕ ಅವರು ಅಂಟಿಸಿಕೊಂಡಿರಲಿಲ್ಲ. 7600 ಸೈಟ್ ಇತ್ತು. ಸೋಮಣ್ಣ ಉಸ್ತುವಾರಿ ಮಂತ್ರಿಯಾಗಿದ್ದರು. ಕಾಂತರಾಜು ಮುಡಾ ಆಯುಕ್ತರಾಗಿದ್ದರು. ಈಗ ಅಡಕೆ ಕದ್ದು ಆನೆಕದ್ದಷ್ಟು ಮಾನ ಹೋಗುವ ಸ್ಥಿತಿ ನಿರ್ಮಾಣವಾಯಿತು. 

ರಾಜ್ಯ ರಾಜಕಾರಣಕ್ಕೆ ಬರುವ ಸುಳಿವು ಕೊಟ್ಟ ಯಂಗ್ ಫೈರ್‌ಬ್ರಾಂಡ್! ಪ್ರತಾಪ್ ಸಿಂಹ ಹೇಳಿದ್ದೇನು?

* ನಿವೇಶನ ಹಂಚಿಕೆಯಲ್ಲಿ ವ್ಯಾಪಕ ಅಕ್ರಮ ನಡೆದಿದೆಯಲ್ಲವೇ? 

ವಿ.ಸೋಮಣ್ಣ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಆಗ ಕಾಂತರಾಜು ಆಯುಕ್ತರಾಗಿದ್ದರು. ಕೋವಿಡ್ ಬಳಿಕ ಅವರಿಗೆ ಆದಾಯ ಬೇಕಾದರೆ ಎಷ್ಟು ನಿವೇಶನ ಇದೆ ನೋಡಿ ಹರಾಜು ಹಾಕಿ ಅಭಿವೃದ್ಧಿಗೆ ವಿನಿಯೋಗಿಸೋಣ ಎಂದು ಸೋಮಣ್ಣ ಹೇಳಿದ್ದರು. ಕಾಂತರಾಜು ಅವರು 7600 ಸೈಟ್ ತಂದು ಇಟ್ಟರು. ಹರಾಜಿಗೆ ತರುವಷ್ಟರಲ್ಲಿ ಸೋಮಣ್ಣ, ಕಾಂತರಾಜು ಇಬ್ಬರೂ ವರ್ಗಾವಣೆಯಾದರು. ಅಲ್ಲಿಂದ ಅಂಗಡಿ ಆರಂಭವಾಯಿತು. ರೈತರಿಂದ ಜಿಪಿಒ ಮಾಡಿಕೊಂಡು 50:50 ಅನುಪಾತದಡಿ ಮಾಡುವುದು, ಎಂಡಿಎಗೂ ನಷ್ಟ, ರೈತನಿಗೂ ನಷ್ಟವಾಯಿತು. ಮಧ್ಯದಲ್ಲಿದ್ದವರಿಗೆ ಲಾಭವಾಯಿತು. ಐದರಿಂದ ಆರು ಸಾವಿರ ನಿವೇಶನ ದುರುಪಯೋಗವಾಗಿದೆ. ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸೈಟು ಹಿಂದುರಿಗಿಸಿ ತನಿಖೆಗೆ ಆದೇಶಿಸಿದರೆ ಅನೇಕರಿಗೆ ಅನುಕೂಲವಾಗಲಿದೆ. 

* ಬಿಜೆಪಿ ಮತ್ತು ಜೆಡಿಎಸ್ ನವರೂ ಇದರ ಫಲಾನುಭವಿಗಳು ಅಂತ ಕಾಂಗ್ರೆಸ್ ಆರೋಪಿಸುತ್ತಿದೆಯಲ್ಲ? 

ಯಾವುದೇ ಪಕ್ಷವಿರಲಿ, ಎಲ್ಲರನ್ನೂ ಹೊರಗೆ ತರಬೇಕಾದರೆ ಆರೋಪಿ ಸ್ಥಾನದಲ್ಲಿರುವ ಕಾಂಗ್ರೆಸ್ ಮೊದಲು ಸೈಟ್ ಹಿಂತಿರುಗಿಸಬೇಕು. 62 ಕೋಟಿ ಕೊಡಬೇಕು ಎಂದು ಹೇಳಿದ ಮೇಲೆ ಬೇರೆಯವರ ಮೇಲೆ ಏಕೆ ಆರೋಪ ಮಾಡುತ್ತೀರಿ? ನೀವು ಮಾಡಿದ ತಪ್ಪು ಒಪ್ಪಿಕೊಂಡು ತನಿಖೆಗೆ ಆದೇಶ ಮಾಡಿ. ಆ ಕೆಲಸವನ್ನೇಕೆ ಕಾಂಗ್ರೆಸ್ ಮಾಡುವುದಿಲ್ಲ.

Latest Videos
Follow Us:
Download App:
  • android
  • ios