ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಪಕ್ಷದ ವರಿಷ್ಠರಿಗೆ ಮನವಿ ಮಾಡುವೆ. ಅಲ್ಲದೇ ಈಗಾಗಲೇ ಪಕ್ಷದ ವರಿಷ್ಠರು ಸಹ ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸವಿದೆ. ಈ ಬಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅರ್ಜಿ ಸಲ್ಲಿಸುತ್ತೇನೆ ಎಂದ ಮಾಜಿ ಸಚಿವ ಅಜಯಕುಮಾರ ಸರನಾಯಕ
ಬಾಗಲಕೋಟೆ(ಆ.26): ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ಈ ಬಾರಿ ನಾನು ಪ್ರಬಲ ಆಕಾಂಕ್ಷಿ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಸಚಿವ ಅಜಯಕುಮಾರ ಸರನಾಯಕ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಪಕ್ಷದ ವರಿಷ್ಠರಿಗೆ ಮನವಿ ಮಾಡುವೆ. ಅಲ್ಲದೇ ಈಗಾಗಲೇ ಪಕ್ಷದ ವರಿಷ್ಠರು ಸಹ ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸವಿದೆ. ಈ ಬಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅರ್ಜಿ ಸಲ್ಲಿಸುತ್ತೇನೆ ಎಂದರು.
ಆಪರೇಶನ್ ಹಸ್ತ: ಯಾರು ಬೇಕು, ಬೇಡ ಅನ್ನೋದು ಪಕ್ಷ ತೀರ್ಮಾನಿಸುತ್ತೆ, ಸಚಿವ ರಾಜಣ್ಣ
ಚುನಾವಣಾ ರಾಜಕೀಯದಿಂದ ದೂರ ಇದ್ದೀರಲ್ಲ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಜಯಕುಮಾರ ಸರನಾಯಕ, ಆಗ ರಾಜಕೀಯ ಬೇಡವಾಗಿತ್ತು, ಅದಕ್ಕಾಗಿ ವಿಶ್ರಾಂತಿ ಪಡೆಯಲು ದೂರ ಇದ್ದೆ, ಈಗ ಸ್ಪರ್ಧಿಸಬೇಕೆಂಬ ಮನಸ್ಸು ಬಂದಿದೆ. ಅದಕ್ಕಾರಿ ಪುನಃ ಮರಳಿರುವೆ. ರಾಜಕೀಯ ನಿಂತ ನೀರಲ್ಲ, ಅದು ಹರಿಯುವ ನೀರು ಎಂದು ಮಾರ್ಮಿಕವಾಗಿ ಹೇಳಿದರು.
ಯಾವ ಪಕ್ಷದ ಕದವನ್ನು ನಾನು ತಟ್ಟಿಲ್ಲ. ಯಾರೂ ತಮ್ಮನ್ನು ಭೇಟಿಯೂ ಆಗಿಲ್ಲ ಎಂದು ಪ್ರತಿಕ್ರಿಯಿಸಿ, ಈಗ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಉತ್ಸುಕನಾಗಿದ್ದೇನೆ. ಅದಕ್ಕಾಗಿ ಟಿಕೇಟ್ ಕೋರಿ ಪಕ್ಷಕ್ಕೆ ಅರ್ಜಿ ಸಲ್ಲಿಸುತ್ತೇನೆ. ಚುನಾವಣೆಯನ್ನು ಸಮರ್ಥವಾಗಿ ಎದುರಿಸುವ ಹಾಗೂ ಕ್ರಿಯಾಶೀಲತೆ ಇದೆ. ಅದಕ್ಕೂ ಮಿಗಿಲಾಗಿ ಪಕ್ಷ ಗೆಲ್ಲುವ ಕುದುರೆಗೆ ಟಿಕೇಟ್ ಕೊಟ್ಟೇ ಕೊಡುತ್ತದೆ. ಜಿಲ್ಲೆಯಲ್ಲಿ ತಮ್ಮ ಪ್ರಭಾವ ಹಾಗೂ ಜನ ಬೆಂಬಲವಿದೆ. ಗೆಲ್ಲುವ ಸಾಮರ್ಥ್ಯವಿದೆ. ಆ ಕಾರಣಕ್ಕಾಗಿ ಪಕ್ಷ ತಮಗೆ ಅವಕಾಶ ಕಲ್ಪಿಸುವ ವಿಶ್ವಾಸವಿದೆ ಹೇಳಿದರು.
