Karnataka Politics: ಬಿಜೆಪಿ ತೊರೆದು ಅಪಾರ ಬೆಂಬಲಿಗರೊಂದಿಗೆ ಗವಿಯಪ್ಪ ಕಾಂಗ್ರೆಸ್ ಸೇರ್ಪಡೆ
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೆವಾಲಾ ಸಮ್ಮುಖದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಗವಿಯಪ್ಪಗೆ ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಬರ ಮಾಡಿಕೊಂಡರು.
ಬೆಂಗಳೂರು(ಸೆ.10): ಹೊಸಪೇಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಚ್.ಆರ್. ಗವಿಯಪ್ಪ ಅವರು ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ತಮ್ಮ ಅಪಾರ ಬೆಂಬಲಿಗರೊಂದಿಗೆ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೆವಾಲಾ ಸಮ್ಮುಖದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಬರ ಮಾಡಿಕೊಂಡರು. ಆನಂದ್‌ಸಿಂಗ್ ಅವರು 2018ರಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರಿಂದ, ಅದುವರೆಗೂ ಕಾಂಗ್ರೆಸ್‌ನಲ್ಲಿದ್ದ ಗವಿಯಪ್ಪ ಅವರಿಗೆ ಟಿಕೆಟ್ ಕೈ ತಪ್ಪಿತ್ತು. ಈ ವೇಳೆ ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡು ಬಿಜೆಪಿ ಸೇರಿದ್ದ ಗವಿಯಪ್ಪ 2018ರಲ್ಲಿ ಆನಂದ್‌ಸಿಂಗ್ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದರು.
ಪ್ರಸ್ತುತ ಆನಂದ್‌ಸಿಂಗ್ ಬಿಜೆಪಿಗೆ ವಾಪಸಾಗಿ ಗೆದ್ದು ಸಚಿವರೂ ಆಗಿದ್ದಾರೆ. ಹೀಗಾಗಿ ಬಿಜೆಪಿಯಲ್ಲಿ ಸ್ಥಾನವಿಲ್ಲದೆ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದ ಗವಿಯಪ್ಪ ಇದೀಗ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮರಳಿದ್ದಾರೆ. ಈ ವೇಳೆ ಮಾತನಾಡಿದ ಡಿ.ಕೆ. ಶಿವಕುಮಾರ್, ಗವಿಯಪ್ಪ ಅವರು ನಮ್ಮ ಪಕ್ಷದ ಸಿದ್ಧಾಂತಗಳನ್ನು ಒಪ್ಪಿ ಪಕ್ಷ ಸೇರ್ಪಡೆಗೊಂಡಿದ್ದಾರೆ. ಅವರ ಜತೆಗೆ ತಮ್ಮ ಬೆಂಬಲಿಗರನ್ನೂ ಕರೆತಂದಿದ್ದಾರೆ. ಇವರ ಆಗಮನದಿಂದ ಹೊಸಪೇಟೆ ಕ್ಷೇತ್ರದಲ್ಲಿ ಪಕ್ಷಕ್ಕೆ ಬಲ ಬಂದಿದೆ ಎಂದು ಹೇಳಿದರು. ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಸೇರಿದಂತೆ ಹಲವರು ಹಾಜರಿದ್ದರು.
ಕಾಂಗ್ರೆಸ್ ಪಾಳಯದತ್ತ ಬಿಜೆಪಿ ಮುಖಂಡನ ಚಿತ್ತ..!
ಕಂಸಾಳೆ ಬಾರಿಸಿದ ಸಿದ್ದರಾಮಯ್ಯ!
ಬೆಂಗಳೂರು: ಗವಿಯಪ್ಪ ಕಾಂಗ್ರೆಸ್ ಸೇರ್ಪಡೆ ಹಿನ್ನೆಲೆಯಲ್ಲಿ ಬೆಂಬಲಿಗರ ಜೊತೆ ಕೆಪಿಸಿಸಿಗೆ ಆಗಮಿಸಿದ ಗವಿಯಪ್ಪ ಅವರಿಗೆ ಜಾನಪದ ವಾದ್ಯಗಳಿಂದ ಸ್ವಾಗತ ಕೋರಲಾಯಿತು. ಕೆಪಿಸಿಸಿ ಕಚೇರಿ ಮುಂದೆ ಡೊಳ್ಳು ಕುಣಿತ, ಕಂಸಾಳೆ ನೃತ್ಯವನ್ನೂ ಮಾಡುತ್ತಿದ್ದರು. ಇದೇ ವೇಳೆ ಆಗಮಿಸಿದ ಸಿದ್ದರಾಮಯ್ಯ ಅವರನ್ನು ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು. ಕಾರ್ಯಕರ್ತರ ಒತ್ತಾಯದ ಮೇರೆಗೆ ಕಂಸಾಳೆ ಬಾರಿಸುವ ಮೂಲಕ ಸಿದ್ದರಾಮಯ್ಯ ಗಮನ ಸೆಳೆದರು. ಜಂಟಿ ಸುದ್ದಿಗೋಷ್ಠಿ ಬಳಿಕ ತರಾತುರಿಯಲ್ಲಿ ತೆರಳಿದ್ದರಿಂದ ಗವಿಯಪ್ಪ ಪಕ್ಷ ಸೇರ್ಪಡೆ ವೇಳೆ ಸಿದ್ದರಾಮಯ್ಯ ಉಪಸ್ಥಿತರಿರಲಿಲ್ಲ.