ಬೆಂಗಳೂರು(ಫೆ.21):  ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಬಿ.ಎನ್‌.ಬಚ್ಚೇಗೌಡ ಅವರ ಪುತ್ರ ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್‌ ಬಚ್ಚೇಗೌಡ ಅವರ ಕಾಂಗ್ರೆಸ್‌ ಸೇರ್ಪಡೆಯ ದಿನಾಂಕ ಕೊನೆಗೂ ನಿಗದಿಯಾಗಿದೆ. ಫೆ.25ರಂದು ಅವರು ಪಕ್ಷದ ಸದಸ್ಯತ್ವ ಪಡೆಯುವುದರೊಂದಿಗೆ ಅಧಿಕೃತವಾಗಿ ಕಾಂಗ್ರೆಸ್‌ ಸೇರಲಿದ್ದಾರೆ.

ನಗರದ ಕ್ವೀನ್ಸ್‌ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಅಂದು ನಡೆಯುವ ಸರಳ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ವಿವಿಧ ನಾಯಕರ ಸಮ್ಮುಖದಲ್ಲಿ ಅವರು ಕಾಂಗ್ರೆಸ್‌ ಸೇರಲಿದ್ದಾರೆ. ಇವರು ಶರತ್‌ ಬಚ್ಚೇಗೌಡಗೆ ಪಕ್ಷದ ಬಾವುಟ ನೀಡಿ ನಾಯಕರು ಬರಮಾಡಿಕೊಳ್ಳುವರು.

ಕರ್ನಾಟಕ ಬಿಜೆಪಿ ಸಂಸದ ಪುತ್ರ ಕಾಂಗ್ರೆಸ್‌ನತ್ತ: ಅನಿವಾರ್ಯ ಎಂದ ತಂದೆ

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲ ಅವರನ್ನು ಭೇಟಿ ಮಾಡಿ ಪಕ್ಷ ಸೇರ್ಪಡೆ ಬಗ್ಗೆ ಶರತ್‌ ಮಾತುಕತೆ ನಡೆಸಿದ್ದರು. ಹೈಕಮಾಂಡ್‌ ಒಪ್ಪಿಗೆ ಬಳಿಕ ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಅವರ ಪಕ್ಷ ಸೇರ್ಪಡೆಗೆ ದಿನಾಂಕ ನಿಗದಿಪಡಿಸಲಾಗಿದೆ.

ಇನ್ನು, ಅಧಿಕೃತ ಪಕ್ಷ ಸೇರ್ಪಡೆ ಬಳಿಕ ಹೊಸಕೋಟೆಯಲ್ಲಿ ಮಾರ್ಚ್‌ ಮೊದಲ ವಾರ ಅಥವಾ ಎರಡನೇ ವಾರದಲ್ಲಿ ಬೃಹತ್‌ ಸಮಾವೇಶ ನಡೆಸುವ ಮೂಲಕ ಶರತ್‌ ಬಚ್ಚೇಗೌಡ ತಮ್ಮ ಶಕ್ತಿ ಪ್ರದರ್ಶನಕ್ಕೆ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.