ಸಚಿವ ರಾಜಣ್ಣ ಹಲೋ ಅಂದ್ರೆ ವಾಟ್ ಅಂತಾರೆ ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ. ಹನಿಟ್ರ್ಯಾಪ್ ಬಗ್ಗೆ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಹನಿಟ್ರ್ಯಾಪ್ ತನಿಖೆಗೆ ಆಗ್ರಹಿಸಿದ್ದಾರೆ.

ಬೆಂಗಳೂರು : ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರಿಗೆ ಯಾರೇ ಹಲೋ ಎಂದರೂ ಅವರು ಹಲೋ ಎನ್ನುವುದಿಲ್ಲ. ಬದಲಿಗೆ ವಾಟ್‌ (ಏನು) ಎನ್ನುತ್ತಾರೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದರು. ಹನಿಟ್ರ್ಯಾಪ್‌ ವಿಚಾರವಾಗಿ ಡಿ.ಕೆ. ಶಿವಕುಮಾರ್‌ ನೀಡಿದ ಹೇಳಿಕೆಗೆ ತಿರುಗೇಟು ನೀಡಿದ ಎಂ.ಬಿ. ಪಾಟೀಲ್‌, ರಾಜಣ್ಣ ಅವರಿಗೆ ಯಾರಾದರೂ ಹಾಯ್‌ ಎಂದರೆ ಹಲೋ ಎನ್ನುವುದಿಲ್ಲ. ಬದಲಿಗೆ ವಾಟ್‌ ಎಂದು ಕೇಳುತ್ತಾರೆ. ಕೆಲವರಿಗೆ ಸುಮ್ಮನೇ ಟ್ರ್ಯಾಪ್‌ ಮಾಡೋ ಉದ್ದೇಶ ಇರುತ್ತದೆ. ರಾಜಣ್ಣ ಅವರು ಹಿರಿಯ ಸದಸ್ಯರು. ಅವರ ಸ್ವಭಾವ ನನಗೆ ಗೊತ್ತಿದೆ. ಅವರ ಬಳಿ ಕಮ್‌, ಬಾ, ಹಲೋ, ಗಿಲೋ ನಡೆಯುವುದಿಲ್ಲ. ಹಂಗೆಲ್ಲ ರಾಜಣ್ಣ ಮಾಡೋಕೆ ಸಾಧ್ಯವಿಲ್ಲ ಎಂದರು.

ಹನಿಟ್ರ್ಯಾಪ್‌ ಯಾರ ಮೇಲೆಯಾದರೂ ಆದರೂ ಅದು ತಪ್ಪು. ಅದು ಬಿಜೆಪಿಯವರ ಮೇಲೆ ಆದರೂ ಮಾಡಿದವರ ವಿರುದ್ಧ ಕ್ರಮವಾಗಬೇಕು. ಹನಿಟ್ರ್ಯಾಪ್‌ ವಿಚಾರದಲ್ಲಿ ಯಾರೇ ಓನರ್‌ ಆಗಿರಲಿ, ಪ್ರೊಡ್ಯೂಸರ್‌, ಡೈರೆಕ್ಟರ್‌, ಕ್ಯಾಮೆರಾಮೆನ್‌, ಆ್ಯಕ್ಟರ್‌ ಆಗಿರಲಿ ಅವರ ವಿರುದ್ಧ ಕ್ರಮವಾಗಬೇಕು ಎಂದು ತಿಳಿಸಿದರು.

ಇದನ್ನೂ ಓದಿ: ಕೊರೋನಾದಲ್ಲಿ ಹೆಣದಿಂದ ಬಿಜೆಪಿ ಹಣ ಮಾಡಿರುವುದು ಬಯಲು: ಸಚಿವ ಪ್ರಿಯಾಂಕ್‌ ಖರ್ಗೆ

ಶನಿವಾರ ಸಿಎಂ ಭೇಟಿಯಾದ ರಾಜಣ್ಣ ಪುತ್ರ
ಹನಿಟ್ರ್ಯಾಪ್‌ ವಿಚಾರ ಕುರಿತು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರ ಪುತ್ರ ವಿಧಾನಪರಿಷತ್‌ ಸದಸ್ಯ ರಾಜೇಂದ್ರ ಅವರು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿ ನೀಡಿ ಇಡೀ ಬೆಳವಣಿಗೆಯ ವಿವರ ನೀಡಿದ್ದಾರೆ.

ಸಿಬಿಐ ತನಿಖೆಗೆ ಆಗ್ರಹ
ಸಚಿವರು ಸೇರಿ ಪ್ರಮುಖರ ಹನಿಟ್ರ್ಯಾಪ್ ವಿಚಾರದ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ. . 48-49 ಜನರ ಮೇಲೆ ಹನಿಟ್ರ್ಯಾಪ್ ಆಗಿದೆ ಎಂಬ ಅರ್ಥದಲ್ಲಿ ಹೇಳಿಕೆ ಕೊಟ್ಟಿದ್ದು ಬಹಳ ನೋವಿನಿಂದ ಮಾತನಾಡಿದ್ದಾರೆ. ಇದರ ಬಗ್ಗೆ ಸೂಕ್ತ ತನಿಖೆ ಆಗಬೇಕೆಂದು ರಾಜಣ್ಣನವರೇ ಹೇಳಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಅವರು ಬೆಳಗ್ಗೆ ಅದನ್ನು ಪುಷ್ಟೀಕರಿಸುವ ಹೇಳಿಕೆ ಕೊಟ್ಟಿದ್ದಾರೆ ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ.

ಇದನ್ನೂ ಓದಿ : ತೀವ್ರ ವಿರೋಧದ ನಡುವೇ ಮುಸ್ಲಿಮರಿಗೆ 4% ಗುತ್ತಿಗೆ ಮೀಸಲು ಮಸೂದೆ ಪಾಸ್‌, ಗೌರ್ನರ್‌ ಒಪ್ಪಿದರೆ ಜಾರಿ!