ಬಿಜೆಪಿಯ ಒಬಿಸಿ ಸಮಾವೇಶ ಯಾವ ಪುರುಷಾರ್ಥಕ್ಕಾಗಿ: ಎಚ್‌ಎಂ ರೇವಣ್ಣ
ಬಿಜೆಪಿ ಪಕ್ಷ ಸ್ಥಾಪನೆಯಾದಾಗಿನಿಂದ ಹಿಂದುಳಿದ ವರ್ಗಗಳಿಗೆ ಮೋಸ ಮಾಡುತ್ತಲೇ ಬಂದಿದೆ ಆದರೆ ಚುನಾವಣೆ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಬಿಜೆಪಿಗರಿಗೆ ನೆನಪಾಗಿರುವುದು ಹಾಸ್ಯಾಸ್ಪದ: ಎಚ್‌ಎಂ ರೇವಣ್ಣ
ಬೀದರ್(ನ.01): ನಿರಂತರವಾಗಿ ಹಿಂದುಳಿದ ವರ್ಗಗಳಿಗೆ ತುಳಿಯುತ್ತಲೇ ಬಂದಿರುವ ಬಿಜೆಪಿ ಈಗ ರಾಜ್ಯದಲ್ಲಿ ಒಬಿಸಿ ಸಮಾವೇಶ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕಾಗಿ ಎಂದು ಮಾಜಿ ಸಚಿವ ಎಚ್‌ಎಂ ರೇವಣ್ಣ ಪ್ರಶ್ನಿಸಿದರು.
ಅವರು ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಪಕ್ಷ ಸ್ಥಾಪನೆಯಾದಾಗಿನಿಂದ ಹಿಂದುಳಿದ ವರ್ಗಗಳಿಗೆ ಮೋಸ ಮಾಡುತ್ತಲೇ ಬಂದಿದೆ ಆದರೆ ಚುನಾವಣೆ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಬಿಜೆಪಿಗರಿಗೆ ನೆನಪಾಗಿರುವುದು ಹಾಸ್ಯಾಸ್ಪದ ಎಂದರು. ಬಿಜೆಪಿಗರು ಬರೀ ಭಾವನಾತ್ಮಕವಾಗಿ ಮಾತನಾಡಿ, ಜನತೆಗೆ ಮರುಳು ಮಾಡಲು ಹೊರಟಿದ್ದಾರೆ ಕಾಗಿನೆಲೆ ಪೀಠ ಸ್ಥಾಪನೆ ಮಾಡಿ ಸಂಗೊಳ್ಳಿ ರಾಯಣ್ಣ ಪ್ರಾಧಿಕಾರ ಮಾಡಿ, ಕೋಟಿ ಕೋಟಿ ಅನುದಾನ ನೀಡಿದ್ದು ಸಿದ್ಧರಾಮಯ್ಯ ಆದರೆ ಬಿಜೆಪಿಗರು ಇದನ್ನು ನಾವು ಮಾಡಿದ್ದೇವೆ ಎಂದು ಹೇಳಲು ಇವರಿಗೆ ನಾಚಿಯಾಗಬೇಕೆಂದರು.
ಖರ್ಗೆ ತವರು ನೆಲ ಕಲಬುರಗಿಯಲ್ಲಿ ಮೊಳಗಿದ ಕೇಸರಿ ಪಾಂಚಜನ್ಯ
ಸಿಎಂ ಬೊಮ್ಮಾಯಿಗೆ ಸವಾಲ್:
ಹಿಂದುಳಿದ ವರ್ಗಗಳಿಗೆ ಕಾಂಗ್ರೆಸ್ ಏನೂ ಮಾಡಿಲ್ಲ ಎಂದು ಹೇಳುವ ಮುಖ್ಯಮಂತ್ರಿಗಳು ತಾಕತ್ತಿದ್ದರೆ ಚರ್ಚೆಗೆ ಬರಲಿ ಎಂದು ಸವಾಲ್ ಎಸೆದರು. ಎಸ್‌ಸಿ, ಎಸ್‌ಟಿ ಜನರಿಗೆ ಗುತ್ತಿಗೆಯಲ್ಲಿ 50 ಲಕ್ಷದವರೆಗೆ ಮೀಸಲಾತಿ ನೀಡಿದ್ದು ಕಾಂಗ್ರೆಸ್ ಸರ್ಕಾರ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಡುವ ಮಂಡಲ ಸಮಿತಿ ವಿರುದ್ಧ ಕಮಂಡಲ ಯಾತ್ರೆ ಮಾಡಿದ್ದು ಬಿಜೆಪಿ ಸರ್ಕಾರ. ಭಾರತ ಜೋಡೋ ಬಿಜೆಪಿಗರ ನಿದ್ದೆಗೆಡಿಸಿದೆ. ಹೀಗಾಗಿ ಹತಾಶ ಮನೋಭಾವದಿಂದ ಬೂಟಾಟಿಕೆಯ ಮಾತನಾಡುತ್ತಿದ್ದಾರೆ ಎಂದರು.
ಬಿಜೆಪಿಗರ ಮುಖವಾಡ ಬಯಲು:
ಚುನಾವಣೆ ಸಂದರ್ಭದಲ್ಲಿ ಒಬಿಸಿ ಸಮಾವೇಶ ಮಾಡುತ್ತಿರುವ ಬಿಜೆಪಿ ಮುಖಂಡರ ಬಣ್ಣ ಬಯಲಾಗಲಿದೆ. ಇದೊಂದು ಚುನಾವಣಾ ಗಿಮಿಕ್ ಎಂದರಲ್ಲದೆ ಹಾವಾಡಿಗನಂತೆ ಹಾವು ತೋರಿಸುತ್ತೇನೆಂದು ಕಾಯಿಸುವ ಬಿಜೆಪಿಗರು ಸುಳ್ಳು ಭರವಸೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಇದೊಂದು ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿಸಿದಂತಿದೆ ಎಂದು ವಾಗ್ದಾಳಿ ನಡೆಸಿದರು. ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಇದ್ದಾಗ ಕುರಿ ಸತ್ತರೆ ಪರಿಹಾರ ನೀಡುವ ಯೋಜನೆ ಜಾರಿಗೆ ತಂದಿದ್ದರು. ಆದರೆ ಬಿಜೆಪಿ ಸರ್ಕಾರ ಅದನ್ನೂ ರದ್ದುಗೊಳಿಸಿತ್ತು. ಮತ್ತೆ ಪಂಡಿತ್ ಚಿದ್ರಿಯವರು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದಾಗ ಹೋರಾಟದ ಮೂಲಕ ಮರಳಿ ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದರು ಎಂದು ಎಚ್‌ಎಂ ರೇವಣ್ಣ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪಂಡಿತರಾವ್ ಚಿದ್ರಿ, ಗೀತಾ ಚಿದ್ರಿ, ಮಾಳಪ್ಪ ಅಡಸಾರೆ, ಎಂಎಸ್ ಕಟಗಿ, ಮಲ್ಲಿಕಾರ್ಜುನ ಬಿರಾದಾರ, ಬಸವರಾಜ ಹೇಡೆ, ಪಿ.ಎಸ್ ಇಟಕಂಪಳ್ಳಿ ಸೇರಿದಂತೆ ಇತರರಿದ್ದರು.