ಮುಂದಿನ ದಿನಗಳಲ್ಲಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗುತ್ತಾರೆ. ಅದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಜೆಡಿಎಸ್‌ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭವಿಷ್ಯ ನುಡಿದ್ದಾರೆ.

ಶಿರಾ (ಜೂ.20): ಮುಂದಿನ ದಿನಗಳಲ್ಲಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗುತ್ತಾರೆ. ಅದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಜೆಡಿಎಸ್‌ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭವಿಷ್ಯ ನುಡಿದ್ದಾರೆ. ನಗರದಲ್ಲಿ ಹಮ್ಮಿಕೊಂಡಿದ್ದ ಪಕ್ಷದ ಸದಸ್ಯತ್ವ ಅಭಿಯಾನ ಉದ್ಘಾಟಿಸಿ ಮಾತನಾಡಿ, ಈ ಹಿಂದೆ ಕುಮಾರಸ್ವಾಮಿ ಸಿಎಂ ಆಗಿದ್ದಾಗ ರೈತರ, ದೀನ ದಲಿತರ ಪರವಾಗಿ ಕೆಲಸ ಮಾಡುವ ಮೂಲಕ ಸಾಕಷ್ಟು ಅಭಿವೃದ್ಧಿ ಮಾಡಿದ್ದರು. ಅದೇ ರೀತಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ರಾಜ್ಯದ ಪ್ರತಿ ಹಳ್ಳಿಗಳನ್ನು ಭೇಟಿ ಮಾಡಿದ್ದಾರೆ.

ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾನೂ ಸಹ ನಡೆಯುತ್ತೇನೆ. ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರನ್ನು ವೈಯಕ್ತಿವಾಗಿ ಭೇಟಿ ಮಾಡಿ ಅವರೊಂದಿಗೆ ಕೆಲ ಕಾಲ ಕಳೆಯಬೇಕು ಎಂಬ ಉದ್ದೇಶದಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದೇನೆ ಎಂದರು. ಒಳ್ಳೆಯ ಉದ್ದೇಶ ಇಟ್ಟುಕೊಂಡು ದೃಢ ಸಂಕಲ್ಪದೊಂದಿಗೆ ಸದಸ್ಯತ್ವ ಅಭಿಯಾನ ಪ್ರಾರಂಭಿಸಿದ್ದು, ಯಶಸ್ವಿಯಾಗಬೇಕು. ಹೆಚ್ಚು ಹೆಚ್ಚು ಮಂದಿ ನೊಂದಣಿಯಾಗುವಂತೆ ಮಾಡಬೇಕು ಎಂದರು.

ಕಾಂಗ್ರೆಸ್‌ ಹೈಕಮಾಂಡ್‌ ಡಮ್ಮಿಯಾಗಿದೆ: ರಾಜ್ಯ ಕಾಂಗ್ರೆಸ್‌ ಮೇಲೆ ಹಿಡಿತ ಇಲ್ಲದ ಕಾರಣ ಆ ಪಕ್ಷದ ಹೈಕಮಾಂಡ್‌ ಡಮ್ಮಿ ಹೈಕಮಾಂಡ್‌ ಎಂಬುದನ್ನು ಜನತೆ ತೀರ್ಮಾನಿಸಿದ್ದಾರೆ ಎಂದು ಜೆಡಿಎಸ್‌ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಟೀಕಿಸಿದ್ದಾರೆ. ಜೆಡಿಎಸ್‌ ಕಚೇರಿ ಜೆ.ಪಿ.ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳನ್ನು ಗಮನಿಸಿದರೆ ಹೈಕಮಾಂಡ್‌ಗೆ ರಾಜ್ಯ ಕಾಂಗ್ರೆಸ್‌ ಮೇಲೆ ಹಿಡಿತ ಇಲ್ಲವಾಗಿದೆ ಎಂಬುದು ಅರ್ಥವಾಗುತ್ತದೆ. ಸರ್ಕಾರದ ಮೇಲೂ ನಿಯಂತ್ರಣ ಇಲ್ಲವಾಗಿದೆ. ಜಾತಿ ಗಣತಿಯ ಗದ್ದಲಗಳನ್ನು ಗಮನಿಸಿದರೆ ಕಾಂಗ್ರೆಸ್‌ ಪರಿಸ್ಥಿತಿ ಅರ್ಥವಾಗುತ್ತದೆ ಎಂದರು. ಕಾಂಗ್ರೆಸ್‌ ಹೈಕಮಾಂಡ್‌ ಡಮ್ಮಿ ಹೈಕಮಾಂಡ್‌ ಆಗಿದೆ ಎಂಬುದು ಜನರ ನಿರ್ಧಾರವಾಗಿದೆ. ಆದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಡಮ್ಮಿ ಎಂದು ಹೇಳುವುದಿಲ್ಲ. ಅವರ ಬಗ್ಗೆ ನನಗೆ ಗೌರವ ಇದೆ ಎಂದು ಸ್ಪಷ್ಟಪಡಿಸಿದರು.

ಪಶ್ಚಾತ್ತಾಪ ಯಾತ್ರೆ ದೂರ ಇಲ್ಲ: ಗಾಂಧಿ ಕುಟುಂಬದ ಕುಡಿ ರಾಹುಲ್ ಗಾಂಧಿ ದೇಶದಲ್ಲಿ ಭಾರತ್ ಜೋಡೋ ಮಾಡಿದರು. ಸಮೀಕ್ಷೆ ಹೆಸರಿನಲ್ಲಿ ಜಾತಿ, ಜಾತಿಗಳನ್ನು ಒಡೆದು ರಾಜ್ಯಕ್ಕೆ ಯಾವ ಸಂದೇಶ ಕೊಡಲಾಗುತ್ತಿದೆ. ರಾಹುಲ್ ಗಾಂಧಿ ಸಮುದಾಯಗಳ ನಡುವೆ ವಿಷಬೀಜ ಬಿತ್ತಿದ್ದಾರೆ. ಜನ ಬೀದಿಯಲ್ಲಿ ಹೊಡೆದಾಡಬೇಕಾ? ಇದೇನಾ ಅವರ ಜೋಡೋ ಯಾತ್ರೆ?. ಅವರು ಮಾಡಿದ ಪಾಪಕ್ಕೆ ಪಶ್ಚಾತ್ತಾಪ ಯಾತ್ರೆ ಮಾಡುವ ದಿನ ದೂರವಿಲ್ಲ ಎಂದು ಟಾಂಗ್‌ ಕೊಟ್ಟರು. ಜಾತಿ ಗಣತಿಯನ್ನು ಮುನ್ನೆಲೆಗೆ ತಂದು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಮಾಜ-ಸಮಾಜಗಳ ನಡುವೆ ವಿಷ ಹಿಂಡಲಾಗುತ್ತಿದೆ ಎಂದು ಇದೇ ವೇಳೆ ವಾಗ್ದಾಳಿ ನಡೆಸಿದರು.