ಲಾಕ್‌ಡೌನ್ ಉಲ್ಲಂಘನೆ ಆರೋಪ: ವಚನದ ಮೂಲಕ ವಿರೋಧಿಗಳಿಗೆ HDK ಟಾಂಗ್
ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ವಿವಾಹ ಸಮಾರಂಭದಲ್ಲಿ ಸಾಮಾಜಿಕ ಅಂತರ ಕಾಪಾಡಿಲ್ಲ ಎಂಬ ಆರೋಪಗಳಿಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಉತ್ತರ ನೀಡಿದ್ದಾರೆ.
ಬೆಂಗಳೂರು, (ಏ.19) : ತಮ್ಮ ಪುತ್ರ ನಿಖಿಲ್ ಮದುವೆ ಸಮಾರಂಭದಲ್ಲೂ ರಾಜಕೀಯ ಹುಡುಕಲಾಯಿತು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿಯವರು, ನನ್ನ ಪುತ್ರ ನಿಖಿಲ್ ವಿವಾಹದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡರೂ, ನಿಯಮ ಪಾಲಿಸಿದರೂ ಇದ್ಯಾವುದೂ ಪಾಲನೆ ಆಗಿಲ್ಲ ಎಂಬ ಚರ್ಚೆಗಳು ನಡೆದವು. ರಾಜಕೀಯ ದ್ವೇಷಕ್ಕಾಗಿ ಶುಭ ಸಮಾರಂಭದ ವಿಷಯದಲ್ಲೂ ವಿಷ ಕಾರುವ ಮನಸ್ಥಿತಿಗಳು ರಾರಾಜಿಸಿದವು. ಆದರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇವೆಲ್ಲವನ್ನೂ ನಿರಾಕರಿಸುವ ಮೂಲಕ ಸತ್ಯದ ಪರ ನಿಂತಿದ್ದಾರೆ ಎಂದಿದ್ದಾರೆ.
ನಿಖಿಲ್ ಮದ್ವೆಯಲ್ಲಿ ಲಾಕ್‌ಡೌನ್ ಉಲ್ಲಂಘನೆಯಾಗಿದೆ ಎಂದವರ ಬಾಯಿಗೆ ಸಿಎಂ ಬೀಗ
ರಾಜ್ಯ ರಾಜಕಾರಣದ ದೊಡ್ಡ ಕುಟುಂಬ ಸರಳವಾಗಿ ವಿವಾಹ ಸಮಾರಂಭ ಮಾಡಿದೆ ಎಂದು ಯಡಿಯೂರಪ್ಪ ಸಹೃದಯದ ಮಾತುಗಳನ್ನಾಡಿದ್ದಾರೆ. ಅವರಿಗೆ ನನ್ನ ಮನದಾಳದ ಧನ್ಯವಾದಗಳು ಅಂತ ಕುಮಾರಸ್ವಾಮಿ ಸಿಎಂ ಯಡಿಯೂರಪ್ಪರನ್ನ ಹಾಡಿ ಹೊಗಳಿದ್ದಾರೆ.
ಸಿಎಂ ಹೇಳಿದ್ದೇನು..?
ಕೊರೋನಾ ಲಾಕ್‌ಡೌನ್ ನಡುವೆಯೂ ರಾಮನಗರ ಜಿಲ್ಲೆಯ ಕೇತಗಾನಹಳ್ಳಿಯಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ಮದುವೆ ನೆರವೇರಿತು. ಆದರೆ ಮದುವೆ ಸಮಾರಂಭದಲ್ಲಿ ಕೊರೋನಾ ಲಾಕ್‌ಡೌನ್ ಮಾರ್ಗಸೂಚಿಯನ್ನು ಉಲ್ಲಂಘನೆ ಮಾಡಿರುವ ಆರೋಪ ಕೇಳಿಬರುತ್ತಿದೆ.
ಇದರ ನಡುವೆ ಸ್ವತಃ ಸಿಎಂ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು, ಕುಮಾರಸ್ವಾಮಿ ಪುತ್ರನ ಮದುವೆಗೆ ಅನುಮತಿ ಕೊಡಲಾಗಿತ್ತು. ಅವರು ಸರಳವಾಗಿ ಮದುವೆ ಮಾಡಿದ್ದಾರೆ. ಅವರ ಕುಟುಂಬ ದೊಡ್ಡದಿದ್ರು ಹೆಚ್ಚು ಜನ ಸೇರಿಸದೆ ಮದುವೆ ಕಾರ್ಯ ಮುಗಿಸಿರುವುದಕ್ಕೆ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದರು.