Asianet Suvarna News Asianet Suvarna News

ಜನಮತದಂತೆ ಕಾರ್ಯಕರ್ತಗೆ ಹಾಸನ ಟಿಕೆಟ್‌: ಕುಮಾರಸ್ವಾಮಿ

ಹಾಸನದಲ್ಲಿ ನಮ್ಮ ಕುಟುಂಬಕ್ಕೆ ಟಿಕೆಟ್‌ ನೀಡುವ ಪ್ರಶ್ನೆ ಇಲ್ಲ. ಕುಟುಂಬದ ಪ್ರತಿಷ್ಠೆಗಿಂತ ನಮಗೆ ಗೆಲುವು ಮುಖ್ಯ. ಅದಕ್ಕಾಗಿ ಜನಾಭಿಪ್ರಾಯ ಸಂಗ್ರಹಿಸಿದ್ದು, ಅದನ್ನು ಆಧರಿಸಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್‌ ನೀಡಲು ನಾನು ತೀರ್ಮಾನಿಸಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

HD Kumaraswamy Talks over Hassan JDS Ticket grg
Author
First Published Apr 12, 2023, 5:13 AM IST | Last Updated Apr 12, 2023, 5:13 AM IST

ಹುಬ್ಬಳ್ಳಿ(ಏ.12): ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಸೋದರ ಎಚ್‌.ಡಿ.ರೇವಣ್ಣ ಪತ್ನಿ ಭವಾನಿ ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಖಡಾಖಂಡಿತವಾಗಿ ಟಿಕೆಟ್‌ ನಿರಾಕರಿಸಿದ್ದಾರೆ. ಅಲ್ಲಿ ಸಾಮಾನ್ಯ ಕಾರ್ಯಕರ್ತನಿಗೇ ಟಿಕೆಟ್‌ ನೀಡಲಾಗುವುದು ಎಂದು ಅವರು ಪುನರುಚ್ಚರಿಸಿದ್ದಾರೆ.

ಇಲ್ಲಿನ ಸಿದ್ಧಾರೂಢ ಮಠದ ಆವರಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನದಲ್ಲಿ ನಮ್ಮ ಕುಟುಂಬಕ್ಕೆ ಟಿಕೆಟ್‌ ನೀಡುವ ಪ್ರಶ್ನೆ ಇಲ್ಲ. ಕುಟುಂಬದ ಪ್ರತಿಷ್ಠೆಗಿಂತ ನಮಗೆ ಗೆಲುವು ಮುಖ್ಯ. ಅದಕ್ಕಾಗಿ ಜನಾಭಿಪ್ರಾಯ ಸಂಗ್ರಹಿಸಿದ್ದು, ಅದನ್ನು ಆಧರಿಸಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್‌ ನೀಡಲು ನಾನು ತೀರ್ಮಾನಿಸಿದ್ದೇನೆ. ಇದು ನನ್ನ ಮತ್ತು ರೇವಣ್ಣ ಕುಟುಂಬದ ಪ್ರತಿಷ್ಠೆಯ ಪ್ರಶ್ನೆಯಲ್ಲ, ಪಕ್ಷದ ಗೆಲುವಿನ ಪ್ರಶ್ನೆಯಾಗಿದೆ. ಕ್ಷೇತ್ರದ ತಳಮಟ್ಟದ ವಾಸ್ತವ ಮತ್ತು ಜನಾಭಿಪ್ರಾಯ ಗಮನಿಸಿ ಹೇಳಿದ್ದೇನೆ ಎಂದರು.

ಬಿಜೆಪಿಯವರಿಗೆ ಮತ ಕೇಳಲು ಮುಖವಿಲ್ಲ: ಮಾಜಿ ಸಚಿವ ಸಂತೋಷ್‌ ಲಾಡ್‌

ಶಕುನಿಯಂತೆ ನಮ್ಮ ಕುಟುಂಬವನ್ನು ಮುಗಿಸಬೇಕೆಂದು ಕೆಲವರು ಕೆಲಸ ಮಾಡುತ್ತಿದ್ದಾರೆ. ಅವರ ಮಾತು ಕೇಳಿಕೊಂಡು ಭವಾನಿ ರೇವಣ್ಣ ಟಿಕೆಟ್‌ಗಾಗಿ ಪಟ್ಟು ಹಿಡಿದಿದ್ದಾರೆ. ಪಕ್ಷಕ್ಕಿಂತ ಸ್ವಾರ್ಥವೇ ಮುಖ್ಯ ಎನ್ನುವುದಾದರೆ ನಾನೇನೂ ಮಾಡಲು ಆಗಲ್ಲ. ಅವರಿಗೆ ಯಾರು ತಲೆ ತುಂಬುತ್ತಾರೆ ಎನ್ನುವುದು ಗೊತ್ತಿದೆ. ಆದರೆ, ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್‌ ನೀಡುವುದು ಖಚಿತ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.

ಅಲ್ಲಿ ಭವಾನಿ ಅವರಿಗೆ ಟಿಕೆಟ್‌ ನೀಡಿದರೆ ಸೋಲುತ್ತಾರೆಯೇ ಎಂಬ ಪ್ರಶ್ನೆಗೆ ಸ್ಪಷ್ಟವಾಗಿ ಉತ್ತರಿಸದ ಅವರು, ‘ನಥಿಂಗ್‌ ಡೂಯಿಂಗ್‌. ಯಾವ ಕಾರಣಕ್ಕೂ ಸಾಧ್ಯವಿಲ್ಲ, ನಾಳೆ ನೀವೇ ಬರೆಯುತ್ತೀರಿ. ಅಲ್ಲಿಯ ಗ್ರೌಂಡ್‌ ರಿಯಾಲಿಟಿ ನಮಗೆ ಗೊತ್ತಿದೆ. ಅಲ್ಲಿ ಪಕ್ಷ ಗೆಲ್ಲಬೇಕು. ಪಕ್ಷದ ಗೆಲುವು ತಮಗೆ ಮುಖ್ಯ ಎಂದರು. ಹಾಸನ ಕ್ಷೇತ್ರದ ಕುರಿತು ಈ ಹಿಂದೆಯೇ ನನ್ನ ನಿರ್ಧಾರ ಹೇಳಿದ್ದೆ. ಈಗಲೂ ಅದಕ್ಕೆ ಬದ್ಧನಾಗಿದ್ದೇನೆ. ನಮ್ಮ ಕುಟುಂಬದವರಿಗೆ ಒಂದು ವೇಳೆ ಟಿಕೆಟ್‌ ನೀಡಿದರೆ, ಮತ್ತೆ ಕುಟುಂಬದವರಿಗೆ ಮಣೆ ಹಾಕಲಾಗಿದೆ ಎಂಬುದಾಗಿ ಮಾಧ್ಯಮದವರು ಹೇಳುತ್ತಾರೆ. ನಾನ್ಯಾಕೆ ನಿಮಗೆ ಆಹಾರವಾಗಬೇಕು?’ ಎಂದು ತೀಕ್ಷ$್ಣವಾಗಿ ಪ್ರತಿಕ್ರಿಯಿಸಿದರು.

ರೇವಣ್ಣ ಅವರು ಹೊಳೆನರಸೀಪುರ ಮತ್ತು ಹಾಸನ ಎರಡು ಕ್ಷೇತ್ರಗಳ ಟಿಕೆಟ್‌ ಕೇಳಿರುವ ಕುರಿತು ಪಕ್ಷದಲ್ಲಿ ಚರ್ಚೆ ಆಗಿಲ್ಲ. ಇದೆಲ್ಲವೂ ಮಾಧ್ಯಮಗಳ ಸೃಷ್ಟಿ. ನಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಅಂದಿನ ಮಹಾಭಾರತದ ಕುರುಕ್ಷೇತ್ರ ಇಂದಿಗೂ ನಡೆಯುತ್ತಿದೆ. ಅದು ಈ ಮಣ್ಣಿನ ಗುಣವಾಗಿದೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Latest Videos
Follow Us:
Download App:
  • android
  • ios