*  ಸೂಕ್ಷ್ಮ ವಿಚಾರಗಳಲ್ಲಿ ಕಾಂಗ್ರೆಸ್‌ ರಾಜಕೀಯ ಮಾಡುವುದನ್ನು ಬಿಡಬೇಕು. *  ಇಬ್ಬರಿಗೂ ಓಟು ಪಡೆಯುವ ಹಾಗೂ ಸಿಎಂ ಆಗುವ ಹುಚ್ಚುತನ ಹತ್ತಿಕೊಂಡಿದೆ *  ಬಿಜೆಪಿಯವರಿಗೆ ಕೂಡ ಮತ ಪಡೆಯುವ ಹುಚ್ಚು ಬಂದಿದೆ

ಬೆಂಗಳೂರು(ಫೆ.06): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar) ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರಿಬ್ಬರಿಗೂ ಮುಖ್ಯಮಂತ್ರಿಯಾಗುವ ಹುಚ್ಚು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ಕಿಡಿಕಾರಿದ್ದಾರೆ. 

ಶನಿವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸೂಕ್ಷ್ಮ ವಿಚಾರಗಳಲ್ಲಿ ಕಾಂಗ್ರೆಸ್‌(Congress) ಪಕ್ಷ ರಾಜಕೀಯ(Politics) ಮಾಡುವುದನ್ನು ಬಿಡಬೇಕು. ಇಬ್ಬರಿಗೂ ಓಟು ಪಡೆಯುವ ಹಾಗೂ ಸಿಎಂ ಆಗುವ ಹುಚ್ಚುತನ ಹತ್ತಿಕೊಂಡಿದೆ. ಸಮಾಜಕ್ಕೆ ಒಳ್ಳೆಯದಾಗಲಿ ಎನ್ನುವುದು ಅವರಿಗಿಲ್ಲ. ಬಿಜೆಪಿಯವರಿಗೆ ಕೂಡ ಮತ ಪಡೆಯುವ ಹುಚ್ಚು ಬಂದಿದೆ ಎಂದು ಟೀಕಾ ಪ್ರಹಾರ ನಡೆಸಿದರು.

JDS Politics: ಶಿವರಾಮೇಗೌಡ ಕ್ಷಮೆ ಕೇಳಿದರೆ ಮತ್ತೆ ಪಕ್ಷ ಸೇರ್ಪಡೆ ಕುರಿತು ಯೋಚನೆ: ಎಚ್‌ಡಿಕೆ

ಕಾಂಗ್ರೆಸ್‌ ಪಕ್ಷದಲ್ಲಿ ಒಬ್ಬೊಬ್ಬರು ಒಂದೊಂದು ಮಾತು ಹೇಳುತ್ತಾರೆ. ಸಿದ್ದರಾಮಯ್ಯ ಒಂದು ಮಾತು ಹೇಳಿದೆ, ಡಿ.ಕೆ.ಶಿವಕುಮಾರ್‌ ಒಂದು ಮಾತು ಹೇಳುತ್ತಾರೆ. ಇವರಲ್ಲಿ ಒಬ್ಬರಿಗೆ ಮುಸ್ಲಿಮರ(Muslim) ಮತಗಳನ್ನು ಪಡೆಯುವ ಉಮೇದು. ಮತ್ತೊಬ್ಬರಿಗೆ ಮುಸ್ಲಿಮರ ಪರ ಮಾತಾಡಿದರೆ ಏನು ಹೆಚ್ಚು ಕಡಿಮೆಯಗುತ್ತದೋ ಎಂಬ ಭಯ ಎಂದು ವಾಗ್ದಾಳಿ ನಡೆಸಿದರು.

ಮಹದಾಯಿ ಬಗ್ಗೆ ಎರಡು ನಾಲಿಗೆ:

ಮಹದಾಯಿ(Mahadayi) ನದಿ ನೀರಿನ ವಿವಾದ ಬಗ್ಗೆ ಕಾಂಗ್ರೆಸ್‌ ಎರಡು ನಾಲಿಗೆ ನೀತಿ ಅನುಸರಿಸುತ್ತಿದೆ. ಮಹದಾಯಿ ಬಗ್ಗೆ ಆ ಪಕ್ಷದ ನಾಯಕ ಸತೀಶ್‌ ಜಾರಕಿಹೊಳಿ ಪಾದಯಾತ್ರೆ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ, ಕಾಂಗ್ರೆಸ್‌ನ ವರಿಷ್ಠ ರಾಹುಲ್‌ ಗಾಂಧಿ ಅವರು ಬಿಡುಗಡೆ ಮಾಡಿದ ಗೋವಾ ಚುನಾವಣೆ ಪ್ರಣಾಳಿಕೆಯಲ್ಲಿ ಯಾವುದೇ ಕಾರಣಕ್ಕೂ ಮಹದಾಯಿ ನೀರನ್ನು ಗೋವಾದಿಂದ ಬಿಟ್ಟುಕೊಡಲ್ಲ ಎಂದು ಹೇಳಿಕೊಂಡಿದ್ದಾರೆ. ಇದು ಅವರ ದ್ವಿಮುಖ ನೀತಿ ತೋರಿಸುತ್ತದೆ ಎಂದು ಹೇಳಿದರು.

ಕಾಂಗ್ರೆಸ್‌ ತೊರೆಯಲು ಮುಂದಾಗಿರುವ ವಿಧಾನಪರಿಷತ್‌ ಸದಸ್ಯ ಸಿ.ಎಂ.ಇಬ್ರಾಹಿಂ(CM Ibrahim) ಅವರು ಒಳ್ಳೆಯ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ. ಇಬ್ರಾಹಿಂ ಮೊದಲಿನಿಂದಲೂ ಜೆಡಿಎಸ್‌ ಜತೆ ಗುರುತಿಸಿಕೊಂಡವರು. ನಡುವೆ ಕೆಲ ವ್ಯತ್ಯಾಸಗಳಾಗಿದ್ದವು. ಈಗ ಮತ್ತೆ ಜೆಡಿಎಸ್‌ ಜತೆ ಸೇರಿ ಮತ್ತೊಂದು ರಂಗ ರಚನೆ ಬಗ್ಗೆ ಅವರು ಮುಂದಾದರೆ ಸ್ವಾಗತ ಮಾಡುತ್ತೇನೆ ಎಂದರು.

ಬೇಟಿ ಪಢಾವೋ ಈಗ ಬೇಟಿ ಹಠಾವೋ ಆಗಿದೆ: 

ರಾಜ್ಯದಲ್ಲಿ(Karnataka) ಮೊದಲಿನಿಂದಲೂ ಕೆಲವು ಶಾಲೆಯಲ್ಲಿ ‘ಹಿಜಾಬ್‌ಗೆ(Hijab) ಅವಕಾಶ ನೀಡಿದ್ದು, ಕೆಲವು ಶಾಲೆಯಲ್ಲಿ ಅನುಮತಿ ನೀಡಿಲ್ಲ, ಹಾಗಾಗಿ ಹಿಂದಿನಿಂದ ಶಾಲೆಗಳು ಯಾವ ರೀತಿ ನಡೆಯುತ್ತಿದ್ದವೋ, ಅದೇ ರೀತಿ ನಡೆಸುವ ಮೂಲಕ ಯಥಾಸ್ಥಿತಿ ಕಾಪಾಡಬೇಕು, ಇರುವ ಉತ್ತಮ ವ್ಯವಸ್ಥೆ ಹಾಳು ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

Karnataka Politics: 31 ಜಿಲ್ಲೆಯ ಅಲ್ಪಸಂಖ್ಯಾತ ನಾಯಕರ ಜತೆ ಎಚ್‌ಡಿಕೆ ಸಭೆ, ಜೆಪಿ ಭವನದ ಸಂದೇಶ

ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಕ್ಕಳಲ್ಲಿ ಯಾವುದೇ ಅಸೂಯೆ, ದ್ವೇಷ ಇಲ್ಲ. ನಿರ್ಮಲ ಮನಸ್ಸಿನ ಮಕ್ಕಳಲ್ಲಿ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ವಿಷ ತುಂಬುವುದು ಬೇಡ. ಕಳೆದ 15 ದಿನಗಳಿಂದ ಕೇಳಿ ಬರುತ್ತಿರುವ ಈ ವಿಷಯವನ್ನು ಇಲ್ಲಿಗೆ ಬಿಡುವುದು ಉತ್ತಮ. ಮುಖ್ಯಮಂತ್ರಿಗಳು ಇಂತಹ ಸೂಕ್ಷ್ಮ ವಿಷಯಗಳನ್ನು ಬೆಳೆಯಲು ಬಿಡದೆ ಸರಿಯಾಗಿ ನಿಭಾಯಿಸಬೇಕು. ಯಾವುದೇ ಕಾರಣಕ್ಕೂ ಸಮಾಜದ ವಾತಾವರಣ ಕಲುಷಿತ ಆಗದ ರೀತಿ ನೋಡಿಕೊಳ್ಳಬೇಕು ಎಂದರು.

‘ಬೇಟಿ ಹಠಾವೋ’:

ರಾಜ್ಯ ಸರ್ಕಾರ(Government of Karnataka) ‘ಹಿಜಾಬ್‌’ ವಿಷಯವನ್ನು ವಿವಾದ ಮಾಡುವ ಮೂಲಕ ಕೇಂದ್ರದ ‘ಬೇಟಿ ಬಚಾವೋ, ಬೇಟಿ ಪಢಾವೋ’ ಘೋಷಣೆ ಈಗ ‘ಬೇಟಿ ಹಠಾವೋ’ ಆಗಿ ಬದಲಾಗುತ್ತಿದೆ ಎಂದು ಟೀಕಿಸಿದ ಅವರು, ಕೋವಿಡ್‌ ಸಂಕಷ್ಟದಲ್ಲಿ ಸಮಯದಲ್ಲಿ ಸರಿಯಾಗಿ ಶಾಲೆ ಕಾಲೇಜುಗಳು ನಡೆಯದೇ ವಿದ್ಯಾರ್ಥಿಗಳು ಮತ್ತು ಪೋಷಕರು ಒದ್ದಾಡುತ್ತಿರುವ ಇಂತಹ ಕಷ್ಟದ ಸಮಯದಲ್ಲಿ ‘ಹಿಜಾಬ್‌’ ವಿವಾದ ಸೃಷ್ಟಿಮಾಡಿರುವುದು ಅನಗತ್ಯ ಎಂದು ಹೇಳಿದರು.