ಅಪ್ಪ ಕಲೆಕ್ಷನ್ ಕಿಂಗ್, ಮಗ ಕಲೆಕ್ಷನ್ ಪ್ರಿನ್ಸ್: ಸಿಎಂ ಸಿದ್ದರಾಮಯ್ಯ ವಿರುದ್ಧ ಎಚ್‌ಡಿಕೆ ಕಿಡಿ
‘ಕಾಸಿಗಾಗಿ ಹುದ್ದೆ ದಂಧೆಯಲ್ಲಿ ತೊಡಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆತ್ಮಸಾಕ್ಷಿ ಇದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ಅವರ ಪುತ್ರ ಯತೀಂದ್ರ ಮಾತನಾಡಿದ್ದಾರೆ ಎನ್ನಲಾದ ಬಗ್ಗೆ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು(ನ.17): ‘ಕರ್ನಾಟಕದ ಕಲೆಕ್ಷನ್ ಕಿಂಗ್ ಅಪ್ಪ, ಕರ್ನಾಟಕದ ಕಲೆಕ್ಷನ್ ಪ್ರಿನ್ಸ್ ಮಗ’ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಪುತ್ರ ಯತೀಂದ್ರ ವಿರುದ್ಧ ಗಂಭೀರ ಆಪಾದನೆ ಮಾಡಿದ್ದಾರೆ.
‘ಕಾಸಿಗಾಗಿ ಹುದ್ದೆ ದಂಧೆಯಲ್ಲಿ ತೊಡಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆತ್ಮಸಾಕ್ಷಿ ಇದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ಅವರ ಪುತ್ರ ಯತೀಂದ್ರ ಮಾತನಾಡಿದ್ದಾರೆ ಎನ್ನಲಾದ ಬಗ್ಗೆ ತನಿಖೆ ನಡೆಸಬೇಕು’ ಎಂದೂ ಅವರು ಆಗ್ರಹಿಸಿದ್ದಾರೆ.
ಕುಮಾರಸ್ವಾಮಿ ಸರ್ಕಾರ ಬೀಳಿಸಿದ ವಿಚಾರ ಕೆದಕಿದ ಡಿಕೆಶಿಗೆ ತಿರುಗೇಟು, ಯತೀಂದ್ರಗೆ ವಿಡಿಯೋ ಸಂಕಷ್ಟ!
ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಕುರಿತ ವಿಡಿಯೋ ಬಹಿರಂಗವಾಗಿರುವ ಕುರಿತು ಸಾಮಾಜಿಕ ಜಾಲತಾಣದ ಮೂಲಕ ಮತ್ತು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಟೀಕೆಗಳ ಸುರಿಮಳೆಗೈದರು.
ಮುಖ್ಯಮಂತ್ರಿ, ಅವರ ಪುತ್ರ, ಅವರ ಕಚೇರಿ, ಇಡೀ ಅವರ ಪಟಾಲಂ ವರ್ಗಾವಣೆ ದಂಧೆಯಲ್ಲಿ ಆರಂಭದಿಂದಲೂ ಎಡೆಬಿಡದೆ ತೊಡಗಿದೆ ಎಂದು ಹಲವು ಸಲ ಆರೋಪ ಮಾಡಿದ್ದೆ. ಈಗ ಆ ಆರೋಪ ಸತ್ಯವಾಗಿದೆ ಎಂದರು.
‘ಕಾಸಿಗಾಗಿ ಹುದ್ದೆ ದಂಧೆ ಕರ್ನಾಟಕದಲ್ಲಿ ಅವ್ಯಾಹತವಾಗಿ, ಎಗ್ಗಿಲ್ಲದೆ, ಲಜ್ಜೆಗೆಟ್ಟು ನಡೆದಿದೆ ಎನ್ನುವುದಕ್ಕೆ ಈ ವಿಡಿಯೋ ತುಣುಕೇ ಸಾಕ್ಷಿ. ನಾನು ಹೇಳಿದವರಷ್ಟನ್ನೇ ಮಾಡಿ ಎನ್ನುವ ವ್ಯಕ್ತಿ ಮುಖ್ಯಮಂತ್ರಿ ಮಗನೋ ಅಥವಾ ಕರ್ನಾಟಕದ ಸೂಪರ್ ಸಿಎಮ್ಮೋ ಅಥವಾ ಮಿನಿಸ್ಟರ್ ಫಾರ್ ಕ್ಯಾಶ್ ಫಾರ್ ಪೋಸ್ಟಿಂಗಾ ಅಥವಾ ಒಳಾಡಳಿತ ಸಚಿವಾಲಯ ಮಾದರಿಯ ಒಳ ವಸೂಲಿ ಸಚಿವಾಲಯದ ಸಚಿವರಾ?’ ಎಂದು ಖಾರವಾಗಿ ಪ್ರಶ್ನಿಸಿದರು.
‘ಯತೀಂದ್ರ ಅವರಿಗೆ ಕರೆ ಮಾಡಿದ್ದು ಯಾರು? ಹೇಳಿ ಅಪ್ಪ ಎಂದಿದ್ದು ಯಾರಿಗೆ? ವಿವೇಕಾನಂದ ಯಾರು? ಮಹದೇವನಿಗೆ ಫೋನ್ ಕೊಡಿ ಅಂತ ಹೇಳಿದ್ದು ಯಾಕೆ ? ನಾಲ್ಕೈದು ಲಿಸ್ಟ್ ಯಾವುದು? ನಾನು ಹೇಳಿದ ನಾಲ್ಕೈದು ಬಿಟ್ಟು ಬೇರೆ ಮಾಡಬೇಡ ಅಂದಿದ್ದು ಯಾಕೆ? ಇದು ವರ್ಗಾವಣೆ ದಂಧೆ ಹೊರತುಪಡಿಸಿ ಬೇರೆ ಯಾವ ವಿಷಯಕ್ಕೆ ಸಂಬಂಧಿಸಿದ್ದು? ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು. ಅಪ್ಪ- ಮಗನ ನಡುವೆ ನಡೆದ ಫೋನ್ ಚರ್ಚೆ ವ್ಯವಹಾರ ಜನರಿಗೆ ಗೊತ್ತಾಗಬೇಕು’ ಎಂದು ಒತ್ತಾಯಿಸಿದರು.
‘ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರದಲ್ಲಿ ಎಲ್ಲಾ ವ್ಯವಹಾರವನ್ನು ವಿಜಯೇಂದ್ರ ಮಾಡುತ್ತಾರೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಅಂದು ಯಡಿಯೂರಪ್ಪ ಮತ್ತು ವಿಜಯೇಂದ್ರ ಬಗ್ಗೆ ಆರೋಪ ಮಾಡಿದ್ದ ಸಿದ್ದರಾಮಯ್ಯ ಈಗ ತಮ್ಮ ಮಗನನ್ನು ಇಟ್ಟುಕೊಂಡು ಮಾಡುತ್ತಿರುವುದೇನು? ವಿಜಯೇಂದ್ರ ಕುರಿತ ಹೇಳಿಕೆಯನ್ನು ಸಿದ್ದರಾಮಯ್ಯ ಏನಾದರೂ ಮರೆತಿದ್ದರೆ ನೆನಪು ಮಾಡಿಕೊಳ್ಳಲಿ’ ಎಂದು ಕುಮಾರಸ್ವಾಮಿ ವ್ಯಂಗ್ಯವಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಟಿ. ಎ.ಶರವಣ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ ಮುಂತಾದವರು ಉಪಸ್ಥಿತರಿದ್ದರು.
ಮೈಸೂರು: ವರುಣಾಕ್ಕೆ ವಾಸ್ತವವಾಗಿ ಯತೀಂದ್ರ ಶಾಸಕ: ಸಿಎಂ ಸಿದ್ದರಾಮಯ್ಯ
ವಿಡಿಯೋ ಕೇಸಿಗೆ ತೇಪೆ ಹಾಕಲು ಸಿದ್ದು ಯತ್ನ: ಎಚ್ಡಿಕೆ
ಶಾಲೆಗಳ ಉದ್ಧಾರಕ್ಕಾಗಿ ಸಿಎಸ್‌ಆರ್ ಫಂಡ್ ಬಗ್ಗೆ ತಮ್ಮ ಮಗ ಪೋನ್‌ನಲ್ಲಿ ಮಾತನಾಡುತ್ತಿರುವ ವಿಡಿಯೋಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೇಪೆ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಆದರೆ, ತೇಪೆ ಹಾಕುವ ಮೊದಲೇ ಇವರ ಮನ ಹಾದಿಬೀದಿಯಲ್ಲಿ ಹರಾಜಾಗಿದೆ. ಒಂದು ವೇಳೆ ಶಾಲೆಗಳ ಪಟ್ಟಿ, ಸಿಎಸ್ಆರ್ ದೇಣಿಗೆ ವಿಷಯ ಇದ್ದರೆ ಸಂಬಂಧಪಟ್ಟ ಡಿಡಿಪಿಐ ಬಳಿ ಮಾತನಾಡಬೇಕಿತ್ತು. ಯಾವ ಯಾವ ಸ್ಕೂಲ್‌ಗೆ ಹಣ ಕಳಿಸಬೇಕು ಎಂಬುದನ್ನು ಮಗನ ಬಳಿ ಕೇಳಿದ್ದಾರೆ ಎನಿಸುತ್ತದೆ. ಜನರು ದಡ್ಡರಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಉನ್ನತ ಮಟ್ಟದ ತನಿಖೆ ಆಗಲಿ
‘ಯತೀಂದ್ರ ಅವರಿಗೆ ಕರೆ ಮಾಡಿದ್ದು ಯಾರು? ‘ಹೇಳಿ ಅಪ್ಪ’ ಎಂದಿದ್ದು ಯಾರಿಗೆ? ವಿವೇಕಾನಂದ ಯಾರು? ಮಹದೇವನಿಗೆ ಫೋನ್ ಕೊಡಿ ಅಂತ ಹೇಳಿದ್ದು ಯಾಕೆ ? ನಾಲ್ಕೈದು ಲಿಸ್ಟ್ ಯಾವುದು? ಇದು ವರ್ಗಾವಣೆ ದಂಧೆ ಹೊರತುಪಡಿಸಿ ಬೇರೆ ಯಾವ ವಿಷಯಕ್ಕೆ ಸಂಬಂಧಿಸಿದ್ದು? ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.