* 2023ರ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಡೋರ್ ಕ್ಲೋಸ್* ಸಿದ್ದುಗೆ ತಿರಗೇಟು ಕೊಡಲು ಎಚ್‌ಡಿಕೆಗೆ ಸಿಕ್ತು ಅಸ್ತ್ರ!* ಬಿಜೆಪಿ ಬಿ ಟೀಮ್ ಜೆಡಿಎಸ್ ಅಥವಾ ಕಾಂಗ್ರೆಸ್?

ಬೆಂಗಳೂರು, (ಜೂನ್. 10): ರಾಜ್ಯಸಭಾ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಳ್ಳುವುದು ಬೇಡವೆಂದೇ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿಯನ್ನ ಕಣಕ್ಕಿಳಿಸಿದ್ದಾರೆ. ಎಚ್‌ಡಿ ದೇವೇಗೌಡ ದಿಲ್ಲಿಗೆ ಹೋಗಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜತೆ ಮಾತುಕತೆ ನಡೆಸಿದ್ರು. ಆದ್ರೆ, ಅದ್ಯಾವುದಕ್ಕೂ ಸಿದ್ದರಾಮಯ್ಯ ಕೇರ್ ಮಾಡದೇ ಮನ್ಸೂರ್ ಅಲಿ ಖಾನ್ ಅವರನ್ನ ಕಣಕ್ಕಿಳಿಸಿ ದಳಪತಿಗಳಿಗೆ ಸೆಡ್ಡು ಹೊಡೆದಿದ್ದಾರೆ. 

2023ರ ಚುನಾವಣೆಗೆ ಮೈತ್ರಿ ಡೋರ್ ಕ್ಲೋಸ್
ಹೌದು.. 2023ರ ಚುನಾವಣೆವರೆಗೆ ಯಾವುದೇ ಕಾರಣಕ್ಕೂ ದೇವೇಗೌಡರ ಜೊತೆ ಮೈತ್ರಿ ಸಹವಾಸ ಬೇಡ ಎನ್ನುವ ಬಗ್ಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅಪರೂಪಕ್ಕೆ ಒಂದೇ ಅಭಿಪ್ರಾಯಕ್ಕೆ ಬಂದಂತೆ ಕಾಣುತ್ತಿದೆ. ಅದರಲ್ಲೂ ಕಾಂಗ್ರೆಸ್‌ ಹೈಕಮಾಂಡ್‌ ರಣದೀಪ್‌ ಸುರ್ಜೇವಾಲಾ ಮೂಲಕ ದೇವೇಗೌಡರ ಜೊತೆ ಮಾತುಕತೆಗೆ ಮನವೊಲಿಸುತ್ತಿದ್ದರೂ ಕೂಡ ಸಿದ್ದರಾಮಯ್ಯ ತಯಾರಿಲ್ಲ. ನಾವು ಸೋತರೂ ಚಿಂತೆ ಇಲ್ಲ, ಆದರೆ ಚುನಾವಣೆಗೆ ಒಂದು ವರ್ಷ ಮುಂಚೆ ದೇವೇಗೌಡರ ಮುಂದೆ ಮಂಡಿ ಊರಿದರೆ 2023ರಲ್ಲಿ ಕಷ್ಟಆಗುತ್ತದೆ. ಮೊದಲನೇ ಅಭ್ಯರ್ಥಿ ನೀವೇ ಹೇಳಿದ ಜೈರಾಮ್‌ ರಮೇಶರನ್ನು ನಿಲ್ಲಿಸಿದ್ದೇವೆ. ಎರಡನೇ ಅಭ್ಯರ್ಥಿ ಇಲ್ಲಿನ ಲೋಕಲ್‌ ಪಾಲಿಟಿಕ್ಸ್‌. ನೀವು ಜಾಸ್ತಿ ತಲೆ ಕೆಡಿಸಿಕೊಳ್ಳಬೇಡಿ ಎಂದು ಸಿದ್ದು ದಿಲ್ಲಿ ನಾಯಕರಿಗೆ ಹೇಳಿಬಿಟ್ಟಿದ್ದಾರೆ. ಈಗ ದೇವೇಗೌಡರ ಜೊತೆ ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡರೆ 2023ಕ್ಕೆ ತಮಗೆ ಅಧಿಕಾರದ ಬಾಗಿಲು ಮುಚ್ಚುತ್ತದೆ. 

ತಾವು ಇನ್ನೊಮ್ಮೆ ಮುಖ್ಯಮಂತ್ರಿ ಆಗಬೇಕಾದರೆ ಕಾಂಗ್ರೆಸ್‌ ಏಕಾಂಗಿಯಾಗಿ ಅಧಿಕಾರಕ್ಕೆ ಬರಬೇಕು. ಅದು ಆಗಬೇಕಾದರೆ ಜೆಡಿಎಸ್‌ ಇನ್ನಷ್ಟುದುರ್ಬಲ ಆಗಬೇಕು. ಹೀಗಾಗಿ ಈಗಲೇ 4ರಿಂದ 5 ಒಕ್ಕಲಿಗ ಶಾಸಕರು ಕ್ರಾಸ್‌ವೋಟ್‌ ಮಾಡಿದರೆ ಒಂದು ವೇಗ ದೊರಕುತ್ತದೆ ಎಂಬ ಧಾಟಿಯಲ್ಲಿ ಸಿದ್ದು ಚಿಂತನೆ ನಡೆದಿದೆ. ಈಗ ನಮ್ಮದು ಒಂದು ಕಣ್ಣು ಹೋದರೂ ಪರವಾಗಿಲ್ಲ, ಜೆಡಿಎಸ್‌ನದು ಎರಡೂ ಕಣ್ಣು ಹೋಗಬೇಕು. ಆಗ ಮಾತ್ರ 2023ಕ್ಕೆ ಬಾಗಿಲು ತೆರೆಯುತ್ತದೆ ಎಂಬ ಸಿದ್ದು ಅಭಿಪ್ರಾಯ ಡಿ.ಕೆ.ಶಿವಕುಮಾರ್‌ಗೂ ಕೂಡ ಮನವರಿಕೆ ಆಗಿದೆ. ಆದರೆ ಸುಮ್ಮನಿರದ ದೇವೇಗೌಡರು ಮಲ್ಲಿಕಾರ್ಜುನ ಖರ್ಗೆ ಮೂಲಕ ದಿಲ್ಲಿಯೊಂದಿಗೆ ತೆರೆಯ ಹಿಂದಿನ ಮಾತುಕತೆ ನಡೆಸಿದ್ದರು,. ಆದ್ರೆ, ಅದು ಸಫಲವಾಗಿಲ್ಲ.

ಜೆಡಿಎಸ್‌ ಶಾಸಕರಿಗೆ ಕಾಂಗ್ರೆಸ್ ಗಾಳ
ಮೈತ್ರಿ ಮುರಿದುಕೊಳ್ಳುವುದು ಮಾತ್ರವಲ್ಲದೇ ಜೆಡಿಎಸ್‌ನ ಕೆಲ ಶಾಸಕರಿಗೆ ಸಿದ್ದರಾಮಯ್ಯ ಗಾಳ ಹಾಕಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಅವರನ್ನ ಪಕ್ಷಕ್ಕೆ ಕರೆತರುವ ಪ್ಲಾನ್ ಮಾಡಿದ್ದಾರೆ. ಇದರಿಂದ ದಳಪರಿಗಳಿಗೆ ಶಾಕ್ ಮೇಲೆ ಶಾಕ್ ಕೊಡುತ್ತಿದ್ದಾರೆ. ಇನ್ನು ಜೆಡಿಎಸ್ ಸಹ ಅಸಮಾಧಾನಿತ ಶಾಸಕರನ್ನು ಮನವೊಲಿಸಲು ಕಸರತ್ತು ನಡೆಸಿದ್ದಾರೆ. ದತ್ತಾ, ಶಿವಲಿಂಗೇಗೌಡ, ಜಿಟಿ ದೇವೇಗೌಡ ಸೇರಿದಂತೆ ಇನ್ನು ಕೆಲ ಶಾಸಕರು ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರ ಉಳಿದಿದ್ದಾರೆ.

ಕಾಂಗ್ರೆಸ್‌ಗೆ ತಿರುಗೇಟು ಕೊಡಲು ಜೆಡಿಎಸ್ ಸಜ್ಜು
ಯೆಸ್....ಸಿದ್ದರಾಮಯ್ಯ ಸೇರಿದಂತೆ ಇನ್ನೂ ಕೆಲ ನಾಯಕರು ಜೆಡಿಎಸ್, ಬಿಜೆಪಿಯ B ಟೀಮ್ ಎಂದು ವ್ಯಂಗ್ಯವಾಡುತ್ತಿದ್ರು. ಇದೀಗ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್‌ ಸೋಲಿಸಲು ಹೋಗಿ ಬಿಜೆಪಿಗೆ ವರದಾನ ಮಾಡುವ ಮೂಲಕ ಕಾಂಗ್ರೆಸ್ ಬಿಜೆಪಿಯ ಬಿ ಟೀಮ್ ಎಂದು ಕುಮಾರಸ್ವಾಮಿ ತಿರುಗೇಟು ನೀಡುತ್ತಿದ್ದಾರೆ. ಕಾಂಗ್ರೆಸ್‌ ಬಿಜೆಪಿಯ ಬಿ ಟೀಮ್ ಎಂದು ಮುಂಬರುವ ಚುನಾವಣೆಯಲ್ಲಿ ಕುಮಾರಸ್ವಾಮಿ ಸಾರುವ ಸಾಧ್ಯತೆಗಳಿವೆ. ಈ ಮೂಲಕ ಅಲ್ಪಸಮಖ್ಯಾತ ಮತಗಳನ್ನ ಜೆಡಿಎಸ್‌ಗೆ ಸೆಳೆಯಲು ಕೈ ಬಿಜೆಪಿಯ ಬಿ ಟೀಮ್ ಎಂದು ಬಿಂಬಿಸಲು ಮುಂದಾಗಿದ್ದಾರೆ.