ನನ್ನ ಸರ್ಕಾರ ಕೆಡವಲು ಎಲ್ಲ ರೀತಿಯ ವ್ಯವಸ್ಥೆ ಮಾಡಿದ್ದು ಅವರೇ ಅಲ್ಲವೇ? ಮಾಡಿದ್ದರ ಪ್ರತಿಫಲವನ್ನು ಉಣ್ಣುತ್ತಿದ್ದಾರೆ. BSY ಕೂಡ ಉಣ್ಣುತ್ತಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಬಾಣ ಬಿಟ್ಟಿದ್ದಾರೆ. ಹಾಗಾದ್ರೆ ಕುಮಾರಸ್ವಾಮಿ ಈ ಮಾತನ್ನು ಯಾರಿಗೆ ಹೇಳಿದ್ದಾರೆ..?
ಬೆಂಗಳೂರು, (ನ.26): ಬಹುಮತಕ್ಕೆ ಸಂಖ್ಯಾಬಲ ಇಲ್ಲದಿದ್ದರೂ ತರಾತುರಿಯಲ್ಲಿ ಸಿಎಂ ಆಗಿ ಕೊನೆಗೆ ರಾಜೀನಾಮೆ ನೀಡಿದ ದೇವೆಂದ್ರ ಫಡ್ನವಿಸ್ ಗೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.
ಅತ್ತ ಫಡ್ನವಿಸ್ ರಾಜೀನಾಮೆ ನೀಡುತ್ತಿದ್ದಂತೆಯೇ ಇತ್ತ ಕುಮಾರಸ್ವಾಮಿ ಟ್ವೀಟ್ ಬಾಣ ಬಿಟ್ಟಿದ್ದಾರೆ. ಕುಮಾರಸ್ವಾಮಿ, ದೇವೇಂದ್ರ ಫಡ್ನವಿಸ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು ಎಂದು ತಿಳಿದು ಬೇಸರವಾಯಿತು. ಹಾಗೆ ನೋಡಿದರೆ ಅವರ ಪದತ್ಯಾಗ ನನಗೆ ಖುಷಿ ಕೊಡಬೇಕಿತ್ತು. ಯಾಕೆಂದರೆ ನನ್ನ ಸರ್ಕಾರ ಕೆಡವಲು ಎಲ್ಲ ರೀತಿಯ ವ್ಯವಸ್ಥೆ ಮಾಡಿದ್ದು ಅವರೇ ಅಲ್ಲವೇ? ಅನರ್ಹರಿಗೆ ಆತಿಥ್ಯ ಕೊಟ್ಟವರೂ ಅವರೇ. ಈಗ ಅವರಿಗೆ ಕಾಲ ಎಂಥ ಉತ್ತರ ಕೊಟ್ಟಿತು ಎಂದು ಬೇಸರವಾಗುತ್ತಿದೆ ಎಂದು ಪರೋಕ್ಷವಾಗಿ ವ್ಯಂಗ್ಯವಾಡಿದರು.
'ಮಹಾ' ಬಿಕ್ಕಟ್ಟು ಅಂತ್ಯ: ಮಹಾರಾಷ್ಟ್ರ ರಾಜಕಾರಣದಲ್ಲಿ ಏನೇನಾಯ್ತು..?
ಮಾಡಿದ್ದುಣ್ಣೊ ಮಹರಾಯ ಎಂಬುದು ಲೋಕ ರೂಢಿ. ಮಾಡಿದ್ದರ ಪ್ರತಿಫಲವನ್ನು ಫಡ್ನವಿಸ್ ಉಣ್ಣುತ್ತಿದ್ದಾರೆ. (BSY ಕೂಡ ಉಣ್ಣುತ್ತಾರೆ) ಕಾಲಚಕ್ರಕ್ಕೆ ಸಿಲುಕಿ ನಲುಗಿದ್ದಾರೆ. ಅಧಿಕಾರ ದಾಹಿ ಬಿಜೆಪಿ ತನ್ನ ಕೃತ್ಯಗಳಿಗೆ ತಾನೇ ಬೆಲೆ ತೆರುತ್ತಿದೆ. ಅಧಿಕಾರದ ಹಪಹಪಿ, ಸರ್ಕಾರಗಳನ್ನು ಕೆಡವುವುದು, ಚುನಾವಣೆ ತರುವುದನ್ನು ಬಿಜೆಪಿ ಇನ್ನಾದರೂ ಬಿಡಲಿ ಟ್ವಿಟ್ಟರ್ ನಲ್ಲಿ ಯಡಿಯೂರಪ್ಪನವರನ್ನ ಸೇರಿಸಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ಉಭಯ ಪಕ್ಷಗಳ ಶಾಸಕರು ಅಸಮಾಧಾನಗೊಂಡಿದ್ದರು. ಬಳಿಕ ಅವರನ್ನು ಒಟ್ಟುಗೂಡಿಸಿ ಮುಂಬೈನ ಹೋಟೆಲ್ ನಲ್ಲಿ ಸೇಫ್ ಆಗಿ ಇಡಲಾಗಿತ್ತು.
ಇದಕ್ಕೆ ಅಂದಿನ ಫಡ್ನವಿಸ್ ಸರ್ಕಾರ ಸಂಪೂರ್ಣ ವ್ಯವಸ್ಥೆ ಮಾಡುವುದರ ಜತೆಗೆ ಭದ್ರತೆಯನ್ನು ಸಹ ಒದಗಿಸಿತ್ತು ಎನ್ನುವ ಆರೋಪಗಳನ್ನು ಕುಮಾರಸ್ವಾಮಿ ಮಾಡಿದ್ದರು. ಅಂದು ನಡೆದಿದ್ದ ರಾಜಕೀಯ ಚದುರಂಗದಾಟವನ್ನು ಮೆಲುಕು ಹಾಕಿದ ಕಕುಮಾರಸ್ವಾಮಿ ಫಡ್ನವಿಸ್ ರಾಜೀನಾಮೆ ಬಗ್ಗೆ ಹೀಗೆಲ್ಲ ಟ್ವೀಟ್ ಮಾಡಿದ್ದಾರೆ.
