ಬೆಂಗಳುರು, (ಸೆ.01): ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ನಡುವೆ ವಾಕ್ಸಮರ ಮುಂದುವರೆದಿದೆ.

ಮೈತ್ರಿ ಸರ್ಕಾರ ಬೀಳಿಸಲು ಡ್ರಗ್ಸ್ ಹಣ ಬಳಕೆ ಎಂದಿದ್ದ ಮಾಜಿ ಸಿಎಂ ಎಚ್‌. ಡಿ. ಕುಮಾರಸ್ವಾಮಿ ಅವರ ಆರೋಪಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ, ಮತ್ತಲ್ಲಿ ಹೇಳಿದ್ದಾರಾ? ಕುಮಾರಸ್ವಾಮಿಯನ್ನ ಪರೀಕ್ಷೆಗೆ ಒಳಪಡಿಸಬೇಕೆಂದ  ತಿರುಗೇಟು ನೀಡಿದ್ದರು.

"

ಮತ್ತಲ್ಲಿ ಹೇಳಿದ್ದಾರಾ? ಕುಮಾರಸ್ವಾಮಿಯನ್ನ ಪರೀಕ್ಷೆಗೆ ಒಳಪಡಿಸಬೇಕೆಂದ ಸಚಿವ ಸಿ.ಟಿ.ರವಿ

ಇದಕ್ಕೆ ಇದೀಗ ಕುಮಾರಸ್ವಾಮಿ ಸಹ ಸರಣಿ ಟ್ವೀಟ್ ಮಾಡಿದ್ದು, ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಬಂದ ಈ ಸರ್ಕಾರಕ್ಕೆ ಪ್ರಕೃತಿಯು ಸಹಕರಿಸುತ್ತಿಲ್ಲ. ಜನರ ದುಃಖ ದುಮ್ಮಾನಗಳಿಗೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ. ಅದು ಬಿಟ್ಟು ಬಾಯಿ ಚಪಲಕ್ಕೆ  ಮಾತನಾಡುವ ಅಧಿಕಾರದ ಅಮಲು  ಬಹಳ ಕಾಲ ಉಳಿಯುವುದಿಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಪ್ರವಾಸೋದ್ಯಮ ಸಚಿವ ಸಿ.ಟಿ. ರವಿಯವರು ಅಧಿಕಾರದ ಮದದ ಮತ್ತಿನಲ್ಲಿ ತೇಲುತ್ತಿದ್ದಾರೆ. ಹೀಗಾಗಿ ಅವರು ಮೊದಲು ತುರ್ತಾಗಿ ಪರೀಕ್ಷೆಗೆ ಒಳಗಾಗುವುದು ಒಳಿತು. ನಾನು ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಸಮಚಿತ್ತದಲ್ಲಿ ಇರುತ್ತೇನೆ. ಅಧಿಕಾರದ ಅಮಲು ಕೆಲವರಿಗೆ ಮಾತ್ರ ತೆವಲು ಎಂದುಸಚಿವ ಸಿಟಿ ರವಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ಖಜಾನೆಗೆ 25 ಸಾವಿರ ಕೋಟಿ ಹಣವನ್ನು ಸಂಗ್ರಹಿಸಿ ರೈತರ ಸಾಲ ಮನ್ನಾ ಮಾಡಿದ ಮುಖ್ಯಮಂತ್ರಿ ನಾನು. ಹೀಗಾಗಿ ಲೂಟಿ ಮಾಡಿದವರು ಅಧಿಕಾರದ ಅಮಲಿನಲ್ಲಿ ತೇಲಾಡುವಾಗ ಬಾಯಿಗೆ ಬಂದಂತೆ ಮಾತನಾಡುತ್ತಿರುವುದನ್ನು ಕೇಳಿಸಿಕೊಳ್ಳಬೇಕಾಗಿಲ್ಲ ಎಂದು ಸಿಟಿ ರವಿ ಅವರಿಗೆ ತಿರುಗೇಟು ನೀಡಿದರು.