Asianet Suvarna News Asianet Suvarna News

ಹಾಸನ ಟಿಕೆಟ್‌ ಬಿಕ್ಕಟ್ಟು: ಇಂದು ಎಚ್‌ಡಿಕೆ-ರೇವಣ್ಣ ಸಂಧಾನ?

ದೇವೇಗೌಡರೇ ಮಧ್ಯಸ್ಥಿಕೆ ವಹಿಸುವ ಸಾಧ್ಯತೆ, ಮಾತುಕತೆ ಯಶಸ್ವಿಯಾದರೆ ನಾಳೆಯೇ ಅಭ್ಯರ್ಥಿ ಘೋಷಣೆ ಸಂಭವ. 

HD Kumaraswamy and HD Revanna Talks Over JDS Hassan Ticket Issue grg
Author
First Published Apr 2, 2023, 5:30 AM IST

ಬೆಂಗಳೂರು(ಏ.02):  ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಹಂಚಿಕೆಗೆ ಸಂಬಂಧಿಸಿದಂತೆ ಉದ್ಭವಿಸಿರುವ ಬಿಕ್ಕಟ್ಟು ನಿವಾರಿಸುವ ಉದ್ದೇಶದಿಂದ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ತಮ್ಮ ಇಬ್ಬರು ಪುತ್ರರಾದ ಎಚ್‌.ಡಿ.ಕುಮಾರಸ್ವಾಮಿ ಮತ್ತು ಎಚ್‌.ಡಿ.ರೇವಣ್ಣ ನಡುವೆ ಸಂಧಾನ ಮಾತುಕತೆ ನಡೆಸುವ ಸಾಧ್ಯತೆಯಿದೆ. ಈ ಸಂಧಾನ ಯಶಸ್ವಿಯಾದಲ್ಲಿ ಸೋಮವಾರ ಹೊರಬೀಳಲಿದೆ ಎನ್ನುತ್ತಿರುವ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಹಾಸನ ಕ್ಷೇತ್ರದ ಅಭ್ಯರ್ಥಿಯ ಹೆಸರೂ ಘೋಷಣೆಯಾಗಲಿದೆ.

ಕಳೆದ ಎರಡು-ಮೂರು ದಿನಗಳಿಂದ ಹಾಸನ ಜಿಲ್ಲೆಯ ಮುಖಂಡರು ಹಾಗೂ ಕಾರ್ಯಕರ್ತರು ಆಗಮಿಸಿ ದೇವೇಗೌಡರನ್ನು ಭೇಟಿ ಮಾಡಿ ಅಭ್ಯರ್ಥಿ ಆಯ್ಕೆ ಕುರಿತಂತೆ ತಮ್ಮ ಅಭಿಪ್ರಾಯ, ಸಲಹೆ-ಸೂಚನೆಗಳನ್ನು ಮುಂದಿಟ್ಟು ಹೋಗಿದ್ದಾರೆ. ಇಡೀ ರಾಜ್ಯದಲ್ಲಿ ಕಗ್ಗಂಟಾಗಿರುವ ಕ್ಷೇತ್ರ ಎಂದರೆ ಅದು ಹಾಸನ ವಿಧಾನಸಭಾ ಕ್ಷೇತ್ರ ಮಾತ್ರ. ದಿನೇ ದಿನೇ ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಪ್ರಕಟಗೊಳ್ಳುತ್ತಿರುವುದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟಾಗುತ್ತಿದೆ. ಇನ್ನು ಈ ವಿಷಯದಲ್ಲಿ ವಿಳಂಬ ಮಾಡದೆ ನಿರ್ಧಾರ ಕೈಗೊಳ್ಳಬೇಕು ಎಂಬ ನಿಲವಿಗೆ ದೇವೇಗೌಡರು ಬಂದಿದ್ದಾರೆ ಎನ್ನಲಾಗಿದೆ.

ಕುತ್ತಿಗೆ ಕೊಯ್ದು ಹೋದವ ನೀನು: ಸಚಿವ ನಾರಾಯಣಗೌಡ ವಿರುದ್ಧ ಎಚ್‌ಡಿಕೆ ಆಕ್ರೋಶ

ಒಂದೆಡೆ ಹಾಸನ ಕ್ಷೇತ್ರದಿಂದ ತಮ್ಮ ಪತ್ನಿ ಭವಾನಿ ರೇವಣ್ಣ ಅವರಿಗೆ ಟಿಕೆಟ್‌ ನೀಡಬೇಕು. ಇಲ್ಲದಿದ್ದರೆ ಪ್ರಬಲ ಆಕಾಂಕ್ಷಿ ಸ್ವರೂಪ್‌ ಅವರನ್ನು ಹೊರತುಪಡಿಸಿ ತಾವು ಹೇಳಿದವರನ್ನೇ ಕಣಕ್ಕಿಳಿಸಬೇಕು ಎಂಬ ಪಟ್ಟನ್ನು ರೇವಣ್ಣ ಮುಂದಿಟ್ಟಿದ್ದಾರೆ. ಆದರೆ, ಇದಕ್ಕೆ ಸೊಪ್ಪು ಹಾಕುವುದಿಲ್ಲ. ಸ್ವರೂಪ್‌ ಅವರಿಗೆ ಟಿಕೆಟ್‌ ನೀಡುವ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂಬ ನಿಲವಿಗೆ ಕುಮಾರಸ್ವಾಮಿ ಅಂಟಿಕೊಂಡಿದ್ದಾರೆ. ಸಹೋದರರಿಬ್ಬರ ಹೇಳಿಕೆ-ಪ್ರತಿ ಹೇಳಿಕೆಗಳು ಬಹಿರಂಗವಾಗಿಯೇ ವ್ಯಕ್ತವಾಗುತ್ತಿವೆ. ಒಂದು ಹಂತದಲ್ಲಿ ಈ ಕಗ್ಗಂಟು ಕುಟುಂಬದ ಅಸ್ತಿತ್ವಕ್ಕೇ ಧಕ್ಕೆ ತರಬಹುದೇನೋ ಎಂಬ ಆತಂಕ ದೇವೇಗೌಡರನ್ನು ಕಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.

ಹೀಗಾಗಿಯೇ ಹಾಸನ ಜಿಲ್ಲೆ ಮತ್ತು ಹಾಸನ ವಿಧಾನಸಭಾ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯಗಳನ್ನು ಪಡೆದಿರುವ ದೇವೇಗೌಡರು ಭಾನುವಾರದ ಹೊತ್ತಿಗೆ ಪುತ್ರರಿಬ್ಬರನ್ನೂ ಕರೆದು ಮುಖಾಮುಖಿ ಮಾತುಕತೆ ನಡೆಸುವ ಮೂಲಕ ಬಿಕ್ಕಟ್ಟು ನಿವಾರಣೆಗೆ ಪ್ರಯತ್ನಿಸಬಹುದು ಎಂದು ತಿಳಿದು ಬಂದಿದೆ.

ಶಿರಾಗೆ ಎಚ್‌ಡಿಕೆ ಸ್ಪರ್ಧಿಸಿದರೆ ಜಿಲ್ಲೆಗೆ ಶಕ್ತಿ: ಗೌಡ

ದೇವೇಗೌಡ ಗದ್ಗದಿತ

ಬೆಂಗಳೂರು: ಹಾಸನ ಟಿಕೆಟ್‌ ಹಂಚಿಕೆ ಕಗ್ಗಂಟಾಗಿದ್ದಕ್ಕೆ ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಗದ್ಗದಿತರಾದ ಪ್ರಸಂಗ ಶನಿವಾರ ನಡೆದಿದೆ. ಹಾಸನದ ಕೆಲ ಕಾರ್ಯಕರ್ತರು ಬೆಂಗಳೂರಲ್ಲಿ ತಮ್ಮನ್ನು ಭೇಟಿ ಮಾಡಿ ಭವಾನಿ ರೇವಣ್ಣ ಅವರಿಗೆ ಟಿಕೆಟ್‌ ನೀಡುವಂತೆ ಪಟ್ಟು ಹಿಡಿದಾಗ ದೇವೇಗೌಡರು ಭಾವುಕರಾದರೆಂದು ತಿಳಿದು ಬಂದಿದೆ.

ಬಂಡಾಯಕ್ಕೆ ಬಗ್ಗಲ್ಲ

ಹಾಸನ ನಾಯಕರು ನನ್ನನ್ನು ಭೇಟಿ ಮಾಡಿ ಟಿಕೆಟ್‌ಗೆ ಸಂಬಂಧಿಸಿದಂತೆ ಚರ್ಚೆ ಮಾಡಿದ್ದಾರೆ. ಯಾವ ಬಂಡಾಯವಿದ್ದರೂ ಅದಕ್ಕೆ ಸೊಪ್ಪು ಹಾಕಲ್ಲ. ನಾನು ಈಗಾಗಲೇ ಹಲವಾರು ಬಾರಿ ಹೇಳಿದ್ದೇನೆ. ಪಕ್ಷದ ಕಾರ್ಯಕರ್ತರ ಅಭಿಪ್ರಾಯಕ್ಕೆ ಸ್ಪಂದಿಸುತ್ತೇವೆ. ಯಾವ ಒತ್ತಡ ಹಾಕಿದರೂ ಇಲ್ಲ. ಕಾರ್ಯಕರ್ತರೇ ಅಂತಿಮ ಅಂತ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. 

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Follow Us:
Download App:
  • android
  • ios