ಬೆಂಗಳೂರು (ಮೇ 12): ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಮಂಗಳವಾರ) ರಾತ್ರಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಮೋದಿ ಭಾಷಣದ ಬಗ್ಗೆ ನನಗೆ ನಿರೀಕ್ಷೆ ಇಲ್ಲ. ಮಾಮೂಲಿ ಭಾಷಣ ಮಾಡ್ತಾರೆ. ಜನ ಮರುಳಾಗ್ತಾರೆ ಅಷ್ಟೇ ಎಂದು ಮಾರ್ಮಿಕವಾಗಿ ಹೇಳಿದರು.

ಪಿಎಂ ಕೇರ್ಸ್ ಫಂಡ್ ಬಗ್ಗೆ ಮಾಹಿತಿ ಕೊಡೊಲ್ಲ ಅಂತಾರೆ. ಇದು ಮೋದಿ ಅವರು ಆಡಳಿತ. ಮೋದಿ ಅವ್ರ ಭಾಷಣ ಕೇಳೊಕೆ ಚೆಂದ. ಅದನ್ನ ಕೇಳಿಕೊಂಡು ಸುಮ್ಮನೆ ಇರಬೇಕು ಅಷ್ಟೇ. ಕಳೆದ 7 ವರ್ಷಗಳಿಂದ ಕೇಳ್ತಾನೆ ಇದ್ದೇವೆ. ಹಾಗೆ ಕೇಳಿಕೊಂಡು ಇರಬೇಕು ಅಷ್ಟೇ ಎಂದು ವ್ಯಂಗ್ಯವಾಡಿದರು.

ದೇಶವನ್ನುದ್ದೇಶಿಸಿ ರಾತ್ರಿ 8 ಗಂಟೆಗೆ ಪ್ರಧಾನಿ ಮೋದಿ ಮಾತು!

ನಿನ್ನೆ (ಸೋಮವಾರ) ಎಲ್ಲ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಮೋದಿ ಮಾತುಕತೆ ನಡೆಸಿದ್ದರು. ಈ ವೇಳೆ ಲಾಕ್​ಡೌನ್​ ವಿಸ್ತರಣೆ ಬಗ್ಗೆ ಮೋದಿ ಎಲ್ಲ ಸಿಎಂಗಳಿಂದ ಸಲಹೆಗಳನ್ನು ಪಡೆದರು. ಅಲ್ಲದೆ, ಲಾಕ್​ಡೌನ್​ ವಿನಾಯಿತಿ ನೀಡುವ ಬಗ್ಗೆಯೂ ಚರ್ಚೆ ನಡೆಸಿದ್ದರು. ಆ ಎಲ್ಲ ವಿಚಾರಗಳನ್ನು ಇಂದು ಮೋದಿ 8 ಗಂಟೆ ಭಾಷಣದಲ್ಲಿ ಪ್ರಸ್ತಾಪಿಸಲಿದ್ದಾರೆ ಎನ್ನಲಾಗಿದೆ.

ಇನ್ನು ಲಾಕ್​ಡೌನ್​ ಮೇ 17ಕ್ಕೆ ಪೂರ್ಣಗೊಳ್ಳಲಿದ್ದು, ಅದನ್ನು ವಿಸ್ತರಣೆ ಮಾಡಬೇಕೋ ಅಥವಾ ಬೇಡವೋ ಎನ್ನುವ ಬಗ್ಗೆ ಅವರು ನಿರ್ಧಾರ ತಿಳಿಸಲಿದ್ದಾರೆ ಎನ್ನಲಾಗುತ್ತಿದೆ. 

ಒಟ್ಟಾರೆ ದೇಶದಲ್ಲಿ ಕೊರೋನಾ ಕೇಸ್ ದಿನದಿಂದ ದಿನಕ್ಕೆ ಏರುತ್ತಿದೆ. ಮತ್ತೊಂದೆಡೆ ಲಾಕ್‌ಡೌನ್ ಅಂತ್ಯಕ್ಕೆ ಐದು ದಿನಗಳು ಬಾಕಿ ಇದ್ದು, ಮೋದಿ ಏನು ಹೇಳುತ್ತಾರೋ ಎನನ್ನುವುದು ಮಾತ್ರ ಭಾರೀ ಕುತೂಹಲ ಮೂಡಿಸಿದೆ.