ದೇವೇಗೌಡರ ಸಂಧಾನ ವಿಫಲ: ಭವಾನಿ ರೇವಣ್ಣಗೆ ಹಾಸನ ಕ್ಷೇತ್ರದ ಟಿಕೆಟಿಲ್ಲ?

ಕುಟುಂಬದವರಿಗೆ ಟಿಕೆಟ್‌ ಬೇಡ ಎಂಬ ಬಲವಾದ ನಿಲುವು ವ್ಯಕ್ತಪಡಿಸಿದ್ದ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರ ಮಾತಿಗೇ ದೇವೇಗೌಡರು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. 

HD DeveGowdas negotiations failed Bhavani Revanna has no ticket for Hassan Constituency gvd

ಬೆಂಗಳೂರು (ಏ.03): ತೀವ್ರ ಕುತೂಹಲ ಮೂಡಿಸಿದ್ದ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್‌ಗೆ ಸಂಬಂಧಿಸಿದಂತೆ ಪಕ್ಷದ ವರಿಷ್ಠ ನಾಯಕ ಎಚ್‌.ಡಿ.ದೇವೇಗೌಡ ಅವರ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ವಿಫಲವಾಗಿದ್ದು, ಭವಾನಿ ರೇವಣ್ಣ ಅವರಿಗೆ ಟಿಕೆಟ್‌ ನೀಡುವುದು ಸಾಧ್ಯವಿಲ್ಲ ಎಂಬ ಮಾತನ್ನು ದೇವೇಗೌಡ ನೇರವಾಗಿಯೇ ಹೇಳಿದ್ದಾರೆ ಎನ್ನಲಾಗಿದೆ. ಗೌಡರ ಈ ನಿಲುವಿನಿಂದ ಆಕ್ರೋಶಗೊಂಡ ಭವಾನಿ ಮತ್ತು ಎಚ್‌.ಡಿ.ರೇವಣ್ಣ ಮುನಿಸಿಕೊಂಡು ಸಭೆಯ ಅರ್ಧದಲ್ಲೇ ಪ್ರತ್ಯೇಕವಾಗಿ ನಿರ್ಗಮಿಸಿದ್ದಾರೆ. 

ಕುಟುಂಬದವರಿಗೆ ಟಿಕೆಟ್‌ ಬೇಡ ಎಂಬ ಬಲವಾದ ನಿಲುವು ವ್ಯಕ್ತಪಡಿಸಿದ್ದ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರ ಮಾತಿಗೇ ದೇವೇಗೌಡರು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಸೋಮವಾರ ಜೆಡಿಎಸ್‌ನ ಎರಡನೇ ಪಟ್ಟಿಪ್ರಕಟಗೊಳ್ಳುವುದೇ? ಒಂದು ವೇಳೆ ಪ್ರಕಟಗೊಂಡರೂ ಅದರಲ್ಲಿ ಹಾಸನ ಕ್ಷೇತ್ರದ ಅಭ್ಯರ್ಥಿ ಹೆಸರು ಇರಲಿದೆಯೇ ಎಂಬುದು ಕುತೂಹಲಕರವಾಗಿದೆ. ಭಾನುವಾರ ರಾತ್ರಿ ದೇವೇಗೌಡರ ನಿವಾಸದಲ್ಲಿ ಈ ಸಭೆ ನಡೆಯಿತು. ಮೊದಲಿಗೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಆಗಮಿಸಿ ಗೌಡರ ಜತೆ ಮಾತುಕತೆ ನಡೆಸಿದರು. ಬಳಿಕ ರೇವಣ್ಣ ಮತ್ತು ಪತ್ನಿ ಭವಾನಿ ಒಟ್ಟಿಗೆ ಆಗಮಿಸಿದರು.

ಶಾಸಕ ಲಮಾಣಿಗೆ ಟಿಕೆಟ್‌ ಕೊಟ್ಟರೆ ಬಂಡಾಯ ಅಭ್ಯರ್ಥಿ ನಿಲ್ಲಿಸುತ್ತೇವೆ: ಗಂಗಣ್ಣ ಮಹಾಂತಶೆಟ್ಟರ್‌

ಟಿಕೆಟ್‌ಗೆ ಭವಾನಿ ರೇವಣ್ಣ ಬಿಗಿಪಟ್ಟು: ಮೂವರನ್ನೂ ಕೂಡಿಸಿಕೊಂಡು ಸಮಾಲೋಚನೆ ನಡೆಸಿದ ದೇವೇಗೌಡ, ಆರಂಭದಲ್ಲಿ ಅವರವರ ಅಭಿಪ್ರಾಯಗಳನ್ನು ಕೇಳಿದ್ದಾರೆ. ಹಾಸನ ಕ್ಷೇತ್ರದ ಪ್ರಸಕ್ತ ಸನ್ನಿವೇಶದಲ್ಲಿ ಹಾಲಿ ಶಾಸಕ ಪ್ರೀತಂಗೌಡ ಅವರನ್ನು ಮಟ್ಟಹಾಕಲು ತಮಗೇ ಟಿಕೆಟ್‌ ನೀಡಬೇಕು. ಪ್ರೀತಂಗೌಡ ತಮಗೆ ಸಾಕಷ್ಟುಅವಮಾನ ಮಾಡಿರುವುದರಿಂದ ಈ ಚುನಾವಣೆಯಲ್ಲಿ ಪಾಠ ಕಲಿಸಬೇಕಾಗಿದೆ. ತಮಗೇ ಟಿಕೆಟ್‌ ನೀಡಬೇಕು ಎಂಬ ಬೇಡಿಕೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಭವಾನಿ ರೇವಣ್ಣ ಕಡ್ಡಿ ಮುರಿದಂತೆ ಹೇಳಿದರು ಎನ್ನಲಾಗಿದೆ.

ಭವಾನಿ ಟಿಕೆಟ್‌ಗೆ ಎಚ್‌ಡಿಕೆ ವಿರೋಧ: ಇದಕ್ಕೆ ಪ್ರತಿಯಾಗಿ ಮಾತನಾಡಿದ ಕುಮಾರಸ್ವಾಮಿ, ಸದ್ಯದ ಪರಿಸ್ಥಿತಿಯಲ್ಲಿ ಹಾಸನ ಕ್ಷೇತ್ರದಿಂದ ಕುಟುಂಬದ ಸದಸ್ಯರಿಗೆ ಟಿಕೆಟ್‌ ನೀಡುವುದು ಸರಿಯಲ್ಲ. ಮೇಲಾಗಿ ಸ್ವರೂಪ್‌ ಅವರ ತಂದೆ ಪಕ್ಷದಲ್ಲಿ ಸಾಕಷ್ಟು ಕೆಲಸ ಮಾಡಿ ಶಾಸಕರಾಗಿದ್ದರು. ದಾಸ ಒಕ್ಕಲಿಗ ಸಮುದಾಯಕ್ಕೆ ಸೇರಿದ ಸ್ವರೂಪ್‌ ಅವರಿಗೆ ಟಿಕೆಟ್‌ ನೀಡುವುದರಿಂದ ಉತ್ತಮ ಸಂದೇಶ ರವಾನಿಸಿದಂತೆ ಆಗುತ್ತದೆ. ಭವಾನಿಗೆ ಟಿಕೆಟ್‌ ನೀಡಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬ ಆತಂಕ ಹೊರಹಾಕಿದರು.

ಎಚ್‌ಡಿಕೆ ಪರ ನಿಂತ ದೇವೇಗೌಡ: ಈ ಹಂತದಲ್ಲಿ ದೇವೇಗೌಡರು ಕುಮಾರಸ್ವಾಮಿ ಅವರ ಅಭಿಪ್ರಾಯವನ್ನೇ ಬೆಂಬಲಿಸಿ ಮಾತನಾಡಿದರು. ಭವಾನಿಗೆ ಮುಂದೆ ಅವಕಾಶ ಕಲ್ಪಿಸಿದರಾಯಿತು. ಈಗಾಗಲೇ ಪುತ್ರರಿಬ್ಬರೂ ಸ್ಥಾನಮಾನ ಹೊಂದಿದ್ದಾರೆ. ಈಗ ದಾಸ ಒಕ್ಕಲಿಗ ಸಮುದಾಯವರಿಗೆ ಟಿಕೆಟ್‌ ನೀಡುವ ಮೂಲಕ ಪಕ್ಷದ ಕಾರ್ಯಕರ್ತರಿಗೆ ಉತ್ತಮ ಸಂದೇಶ ಕೊಡುವುದು ಸೂಕ್ತ ಎಂಬ ಮಾತನ್ನು ಹೇಳುತ್ತಿದ್ದಂತೆಯೇ ಆಕ್ರೋಶದಿಂದ ಕೂಗಾಡಿದ ಭವಾನಿ ಅವರು ಸಭೆಯ ಅರ್ಧದಲ್ಲೇ ಎದ್ದು ತಮ್ಮ ಕಾರು ಏರಿ ಹೊರಟರು.

ಅದಾದ ಬಳಿಕ ರೇವಣ್ಣ ಅವರು ದೇವೇಗೌಡ ಮತ್ತು ಕುಮಾರಸ್ವಾಮಿ ಅವರನ್ನು ಮನವೊಲಿಸುವ ಪ್ರಯತ್ನ ಮಾಡಿದರೂ ಅದು ಯಶಸ್ಸು ಕಾಣದೇ ಇದ್ದಾಗ ಅವರೂ ಕೋಪದಿಂದಲೇ ತೆರಳಿದರು. ಇಬ್ಬರೂ ನಿರ್ಗಮಿಸಿದ ಬಳಿಕ ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ಸುದೀರ್ಘ ಮಾತುಕತೆ ನಡೆಸಿದರು ಎಂದು ಮೂಲಗಳು ತಿಳಿಸಿವೆ. ಸಭೆಯ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ್ದ ಎಚ್‌.ಡಿ.ಕುಮಾರಸ್ವಾಮಿ, ದೇವೇಗೌಡರ ಆರೋಗ್ಯ ಮತ್ತು ಆಯಸ್ಸು ನನಗೆ ಮುಖ್ಯವಾದುದು. ದೇವೇಗೌಡರಿಗೂ ಮನವರಿಕೆಯಾಗಿದೆ. ಜನರ ಅಭಿಪ್ರಾಯ ಅವರು ಸಂಗ್ರಹ ಮಾಡಿದ್ದಾರೆ. 

ಬೆಳಗಾವಿ ಜಿಲ್ಲೆಯ 10 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ನಿಶ್ಚಿತ: ಸತೀಶ್‌ ಜಾರಕಿಹೊಳಿ

ನಾವೆಲ್ಲರೂ ಮೊದಲಿನಿಂದಲೂ ನಮ್ಮ ನಿರ್ಣಯ ಏನೇ ಇದ್ದರೂ ದೇವೇಗೌಡರ ನಿರ್ಣಯಕ್ಕೆ ತಲೆಬಾಗಿದ್ದೇವೆ. ಯಾವುದೇ ಗೊಂದಲವಿಲ್ಲದೆ ಅವರು ಸಮಸ್ಯೆ ಬಗೆಹರಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Latest Videos
Follow Us:
Download App:
  • android
  • ios