ಶುಕ್ರವಾರದೊಳಗೆ ಹಾಸನ ಕ್ಷೇತ್ರದ ಟಿಕೆಟ್ ಫೈನಲ್: ಎಚ್.ಡಿ.ಕುಮಾರಸ್ವಾಮಿ
ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಗೊಂದಲವೇನಿಲ್ಲ. ದೇವೇಗೌಡರು ಗುರುವಾರ ದೆಹಲಿಗೆ ಹೋಗುತ್ತಿದ್ದಾರೆ. ಅಲ್ಲಿಂದ ಬಂದ ನಂತರ ಸಭೆ ಕರೆಯಲು ಹೇಳಿದ್ದೇನೆ. ಶುಕ್ರವಾರದೊಳಗೆ ಅಭ್ಯರ್ಥಿಯನ್ನು ಫೈನಲ್ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಮಂಡ್ಯ (ಏ.04): ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಗೊಂದಲವೇನಿಲ್ಲ. ದೇವೇಗೌಡರು ಗುರುವಾರ ದೆಹಲಿಗೆ ಹೋಗುತ್ತಿದ್ದಾರೆ. ಅಲ್ಲಿಂದ ಬಂದ ನಂತರ ಸಭೆ ಕರೆಯಲು ಹೇಳಿದ್ದೇನೆ. ಶುಕ್ರವಾರದೊಳಗೆ ಅಭ್ಯರ್ಥಿಯನ್ನು ಫೈನಲ್ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಕೆ.ಆರ್.ಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಭಾನುವಾರ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ದೇವೇಗೌಡರು ಕೆಲವು ಮಾರ್ಗದರ್ಶನ ನೀಡಿದ್ದಾರೆ. ಗುರುವಾರ ಅವರು ತೆರಳುತ್ತಿರುವುದರಿಂದ ಅಲ್ಲಿಂದ ಬಂದ ನಂತರ ಸಭೆ ಕರೆಯುವಂತೆ ಹೇಳಿದ್ದೇನೆ.
ಪ್ರಮುಖರನ್ನು ಕರೆದು ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಒಮ್ಮತದ ಅಭಿಪ್ರಾಯಕ್ಕೆ ಬರತ್ತೇವೆ. ಗುರುವಾರ ಅಥವಾ ಶುಕ್ರವಾರ ಹಾಸನದ ಟಿಕೆಟ್ ಫೈನಲ್ ಮಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಚುನಾವಣೆಗೆ ಎರಡನೇ ಹಂತದ ಟಿಕೆಟ್‌ಅನ್ನು ಸೋಮವಾರ ಘೋಷಣೆ ಮಾಡಬೇಕಿದೆ. ಈ ವಿಷಯವಾಗಿ ಬೆಂಗಳೂರಿಗೆ ಹೋಗಿ ಚರ್ಚೆ ಮಾಡುತ್ತೇವೆ. ಮುಂದಿನ ಎರಡು ದಿನಗಳಲ್ಲಿ ಎರಡನೇ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎಂದ ಕುಮಾರಸ್ವಾಮಿ, ಸಚಿವ ನಾರಾಯಣಗೌಡ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಆ ವ್ಯಕ್ತಿಯ ಹೇಳಿಕೆಗೆ ಏನು ನೈತಿಕತೆ ಇದೆ.
ಸಿದ್ದು ರೀತಿ ಎರಡು ಕಡೆ ಸ್ಪರ್ಧೆ ಮಾಡೋ ಅನಿವಾರ್ಯ ಪರಿಸ್ಥಿತಿ ನಮಗಿಲ್ಲ: ಡಾ.ಜಿ.ಪರಮೇಶ್ವರ್
ಯಾವ ನೈತಿಕತೆ ಇಟ್ಟುಕೊಂಡು ಆ ವಿಷಯದ ಬಗ್ಗೆ ಚರ್ಚೆ ಮಾಡುತ್ತಿದ್ದಾನೆ. ಈ ವ್ಯಕ್ತಿ ಮೊದಲು ಎಲ್ಲಿದ್ದ. ಈ ವ್ಯಕ್ತಿಯನ್ನು ಜನರು ಎಲ್ಲಿಂದ ಗುರುತಿಸುತ್ತಾರೆ. ಇವತ್ತು ಅವರು ಬೆಳೆಯಬೇಕದಾರೆ ಹೇಗೆ ಬೆಳೆದರು ಎನ್ನುವುದೆಲ್ಲಾ ಗೊತ್ತಿದೆ. ಈಗ ಅವರಿಗೆ ಜ್ಞಾನೋದಯ ಆಗಿದೆಯಾ. ಈಗ ಅವರು ಪಕ್ಷ ಯಾಕೆ ಬಿಟ್ಟು ಹೋದರು. ಪಕ್ಷ ಬಿಡುವ ವಾರದ ಮುಂಚೆ ನನಗೆ ಏನ್ ಟೋಪಿ ಹಾಕಿ ಹೋದ್ರು. ಅಂತಹ ವ್ಯಕ್ತಿಗಳ ಬಗ್ಗೆ ಚರ್ಚೆ ಮಾಡೋಕೆ ಆಗೋಲ್ಲ. ಜನರೇ ಆತನ ಬಗ್ಗೆ ತೀರ್ಮಾನ ಮಾಡುತ್ತಾರೆ. ಫಲಿತಾಂಶ ಬರಲಿ. ಎಲ್ಲವೂ ಗೊತ್ತಾಗುತ್ತದೆ ಎಂದರು.
ಚುನಾವಣಾ ಸಮೀಕ್ಷೆಗಳೆಲ್ಲಾ ಸುಳ್ಳು: ಚುನಾವಣಾ ಪೂರ್ವ ಸಮೀಕ್ಷೆಗಳನ್ನು ಯಾರೂ ನಂಬಬೇಡಿ. ಅದೆಲ್ಲವೂ ರಾಷ್ಟ್ರೀಯ ಪಕ್ಷಗಳು ದುಡ್ಡು ಕೊಟ್ಟು ಮಾಡಿಸುವ ಸರ್ವೆಗಳು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗಿಂತ 10 ರಿಂದ 15 ಸ್ಥಾನ ಹೆಚ್ಚು ಜೆಡಿಎಸ್ ಗೆಲ್ಲುವುದು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸದಿಂದ ನುಡಿದರು. ಪಟ್ಟಣದಲ್ಲಿ ಸೋಮವಾರ ಕಾಂಗ್ರೆಸ್-ಬಿಜೆಪಿ ತೊರೆದು ಜೆಡಿಎಸ್ ಪಕ್ಷ ಸೇರಿದವರನ್ನು ಸೇರ್ಪಡೆ ಮಾಡಿಕೊಂಡು ಮಾತನಾಡಿದರು. ರಾಜ್ಯದಲ್ಲಿ ಜೆಡಿಎಸ್ ಪರ ಸುನಾಮಿ ಎದ್ದಿದೆ. ಜೆಡಿಎಸ್ ಗೆಲ್ಲಿಸಲು ಕೆಲವರು ಪಣ ತೊಟ್ಟಿದ್ದಾರೆ. ಮೊದಲು ನಮ್ಮ ಮನೆಯಲ್ಲಿದ್ದು ಹೋದವರು ಮತ್ತೆ ಪಕ್ಷ ಸೇರುತ್ತಿದ್ದಾರೆ. ಇದರಿಂದ ನಮ್ಮ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಂತಾಗಿದೆ ಎಂದರು.
2018ರ ಚುನಾವಣೆಯಲ್ಲಿ ನಾನು ಮುಖ್ಯಮಂತ್ರಿಯಾಗಬೇಕೆಂಬ ಕಾರಣಕ್ಕೆ ಜಿಲ್ಲೆಯ ಏಳಕ್ಕೆ ಏಳು ಕ್ಷೇತ್ರಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದಿರಿ. ಜೆಡಿಎಸ್‌ಗೆ ಸಂಪೂರ್ಣ ಬಹುಮತ ಬಾರದಿದ್ದರೂ ಮುಖ್ಯಮಂತ್ರಿಯಾಗಿ ರೈತರ ಸಾಲಮನ್ನಾ ಮಾಡಿದೆ. ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಮನೆಗೆ ಭೇಟಿಕೊಟ್ಟು ಪರಿಹಾರ ಕೊಟ್ಟೆಎಂದ ಕುಮಾರಸ್ವಾಮಿ, ಮುಖ್ಯಮಂತ್ರಿಯಾಗಿದ್ದ ವೇಳೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್‌ನಲ್ಲಿ 8 ಸಾವಿರ ಕೋಟಿ ರು. ಹಣ ಬಿಡುಗಡೆ ಮಾಡಿಸಿದೆ. ನಂತರ ಬಂದ ಸರ್ಕಾರ ಜಿಲ್ಲೆಯ ಅಭಿವೃದ್ಧಿಯನ್ನು ಮಣ್ಣುಪಾಲು ಮಾಡಿತು ಎಂದು ವಿಷಾದಿಸಿದರು.
ಕಾಂಗ್ರೆಸ್ಸಿನ ಗ್ಯಾರಂಟಿ ಕಾರ್ಡ್‌ಗೆ ಮೋಸ ಹೋಗಬೇಡಿ: ಸಚಿವ ಹಾಲಪ್ಪ ಆಚಾರ್
ಈ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಸೋಲಿಸಲು ಎರಡೂ ರಾಷ್ಟ್ರೀಯ ಪಕ್ಷಗಳು ಕುತಂತ್ರದ ರಾಜಕಾರಣ ಮಾಡುತ್ತಿವೆ. ಮೇಲುಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಕುವುದಿಲ್ಲವಂತೆ. ಇಂತಹ ತಂತ್ರಗಾರಿಕೆ ರಾಜಕಾರಣಗಳಿಗೆ ಜನರು ಮರುಳಾಗೋಲ್ಲ. ಜೆಡಿಎಸ್ ಗೆಲುವಿನ ನಾಗಾಲೋಟ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು. ಕೆ.ಆರ್.ಪೇಟೆ ಕ್ಷೇತ್ರದಲ್ಲಿರುವವರು ದೇವೇಗೌಡರ ಬಗ್ಗೆ ಅಭಿಮಾನ ಇಟ್ಟಿರುವ ಜನ. ಅವರೆಂದಿಗೂ ಗೌಡರಿಗೆ ಮೋಸ ಮಾಡುವುದಿಲ್ಲ. ಕೆ.ಆರ್.ಪೇಟೆ ದೇವೇಗೌಡರ ಮನೆ ಎಂಬ ಮಾತೂ ಇದೆ. ಎಚ್.ಟಿ.ಮಂಜು ಅವರನ್ನು ಅಭ್ಯರ್ಥಿ ಮಾಡುವುದಕ್ಕೆ ಎಲ್ಲರನ್ನೂ ಒಟ್ಟಿಗೆ ಸೇರಿಸುವ ಪ್ರಯತ್ನ ಮಾಡಿದ್ದೆ. ಆದರೆ, ನಮ್ಮವರೇ ಕೆಲವರು ಬೆನ್ನಿಗೆ ಚೂರಿ ಹಾಕಲು ಯತ್ನಿಸಿದ್ದಾರೆ. ಅವರಿಗೆ ಯಾರೂ ಮಾರುಹೋಗಬೇಡಿ ಎಂದು ಕಿವಿಮಾತು ಹೇಳಿದರು.