2ನೇ ಪಟ್ಟಿಯಲ್ಲಿ 40-50 ಅಭ್ಯರ್ಥಿಗಳಿಗೆ ಟಿಕೆಟ್‌ ಸಾಧ್ಯತೆ, ಆದರೆ ಹಾಸನ ಕ್ಷೇತ್ರದ ಕಗ್ಗಂಟು ಮುಂದುವರಿಕೆ, ಭವಾನಿ, ಸ್ವರೂಪ್‌ ಬಗ್ಗೆ ಕಗ್ಗಂಟು. 

ಬೆಂಗಳೂರು(ಏ.12): ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ ಹಾಸನ ವಿಧಾನಸಭಾ ಕ್ಷೇತ್ರದ ಆಯ್ಕೆಯೇ ಕಗ್ಗಂಟಾಗಿದ್ದು, ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಒಮ್ಮತ ಅಭಿಪ್ರಾಯ ಮೂಡದ ಹಿನ್ನೆಲೆಯಲ್ಲಿ ಮೂರನೇ ಪಟ್ಟಿಯಲ್ಲಿ ಹಾಸನ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಾಗುವ ಸಾಧ್ಯತೆ ಇದೆ.

ಈಗಾಗಲೇ ಮೊದಲ ಪಟ್ಟಿಯಲ್ಲಿ 93 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದೆ. ಎರಡನೇ ಪಟ್ಟಿಬುಧವಾರ ಬಿಡುಗಡೆ ಮಾಡುವ ಸಾಧ್ಯತೆ ಹೆಚ್ಚಿದೆ. ಚುನಾವಣೆಗೆ ಐದು ತಿಂಗಳ ಮುಂಚೆಯೇ ಮೊದಲ ಪಟ್ಟಿಬಿಡುಗಡೆ ಮಾಡಿದರೂ, ಎರಡನೇ ಪಟ್ಟಿಬಿಡುಗಡೆ ಮಾಡುವಲ್ಲಿ ಜೆಡಿಎಸ್‌ ಸಾಕಷ್ಟುಕಸರತ್ತು ನಡೆಸುವಲ್ಲಿ ತೊಡಗಿದ್ದಾರೆ. ಎರಡನೇ ಪಟ್ಟಿಯಲ್ಲಿ 40-50 ಅಭ್ಯರ್ಥಿಗಳ ಹೆಸರು ಪ್ರಕಟಿಸುವ ನಿರೀಕ್ಷೆ ಇದೆ.

ವರುಣಾ ಅಭ್ಯರ್ಥಿ ಅಭಿಷೇಕ್ ಕಾಣೆ..ಕಂಗಲಾದ ಜೆಡಿಎಸ್‌ ಕಾರ್ಯಕರ್ತರು..!

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಕುಟುಂಬದಲ್ಲಿ ಹಾಸನ ವಿಧಾನಸಭಾ ಕ್ಷೇತ್ರವು ಪ್ರತಿಷ್ಠೆಯಾಗಿದೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಸ್ವರೂಪ್‌ ಪ್ರಕಾಶ್‌ ಟಿಕೆಟ್‌ ನೀಡಬೇಕು ಎಂಬುದು ಮಹಾದಾಸೆಯಾದರೆ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಪತ್ನಿ ಭವಾನಿ ತಾವೇ ಸ್ಪರ್ಧಿಸಬೇಕು ಎಂಬ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರವು ಜಟಿಲವಾಗಿ ಪರಿಣಿಸಿದೆ. ಕ್ಷೇತ್ರದ ಬಗ್ಗೆ ಕುಮಾರಸ್ವಾಮಿ ಮಾಡಿರುವ ಸಮೀಕ್ಷೆಯ ಪ್ರಕಾಶ್‌ ಸ್ವರೂಪ್‌ ಅವರಿಗೆ ಟಿಕೆಟ್‌ ನೀಡಿದರೆ ಜೆಡಿಎಸ್‌ಗೆ ಜಯಗಳಿಸುವ ಎಲ್ಲಾ ಸಾಧ್ಯತೆ ಇದೆ. ಆದರೆ, ಭವಾನಿ ಅವರಿಗೆ ಟಿಕೆಟ್‌ ನೀಡಿದರೆ ಗೆಲುವು ಕಷ್ಟಕರ ಎಂಬುದರ ಮಾಹಿತಿ ಪಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವರೂಪ್‌ಗೆ ಟಿಕೆಟ್‌ ನೀಡಬೇಕು ಎಂಬುದು ಕುಮಾರಸ್ವಾಮಿ ಉದ್ದೇಶವಾಗಿದೆ ಎಂದು ಮೂಲಗಳು ಹೇಳಿವೆ.

ಭವಾನಿಗೆ ಟಿಕೆಟ್‌ ಲಭಿಸುವುದು ಅನುಮಾನ ಎಂಬುದು ತಿಳಿದ ರೇವಣ್ಣ ಅವರು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಭೇಟಿಯಾಗಿ ವಿಸ್ತೃತವಾಗಿ ಚರ್ಚೆ ನಡೆಸಿದ್ದಾರೆ. ಸೋಮವಾರ ತಡರಾತ್ರಿಯವರೆಗೆ ದೇವೇಗೌಡ ಅವರೊಂದಿಗೆ ಸಮಾಲೊಚನೆ ನಡೆಸಿ ಹಾಸನ ಕ್ಷೇತ್ರದ ರಾಜಕೀಯ ವಿಚಾರವನ್ನು ಮುಂದಿಟ್ಟಿದ್ದಾರೆ. ದೇವೇಗೌಡ ಅವರು ಸಹ ಅಭಿಪ್ರಾಯವನ್ನು ಆಲಿಸಿದ್ದು, ಕುಮಾರಸ್ವಾಮಿ ಜತೆಯೂ ಮಾತುಕತೆ ನಡೆಸಲಿದ್ದಾರೆ. ಅವರ ಅಭಿಪ್ರಾಯವನ್ನು ಸಹ ಕೇಳಿ ತಮ್ಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾದ ಬಳಿಕ ಮೂರನೇ ಪಟ್ಟಿಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.