ರಾಜ್ಯ ಸರ್ಕಾರಕ್ಕೂ ಹಾಗೂ ಜಿಎಸ್‌ಟಿ ನೋಟಿಸ್‌ಗೂ ಯಾವುದೇ ಸಂಬಂಧವಿಲ್ಲ ಅಂತ ಹೇಳುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

ಬೆಂಗಳೂರು (ಜು.23): ಕರ್ನಾಟಕದ ಕಾಂಗ್ರೆಸ್ ಸರ್ಕಾರ ಸಣ್ಣಪುಟ್ಟ ವ್ಯಾಪಾರಿಗಳಿಗೆ ತೆರಿಗೆ ಬಾಕಿ ನೋಟಿಸ್ ಕೊಟ್ಟು, ಇದೀಗ ರಾಜ್ಯ ಸರ್ಕಾರಕ್ಕೂ ಹಾಗೂ ಜಿಎಸ್‌ಟಿ ನೋಟಿಸ್‌ಗೂ ಯಾವುದೇ ಸಂಬಂಧವಿಲ್ಲ ಅಂತ ಹೇಳುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಜಿಎಸ್‌ಟಿಯಲ್ಲಿ ಕೇಂದ್ರ ಸರ್ಕಾರದ ಅಡಿಯಲ್ಲಿ ಸಿಜಿಎಸ್‌ಟಿ ಮತ್ತು ರಾಜ್ಯ ಸರ್ಕಾರಗಳ‌ ಅಡಿಯಲ್ಲಿ ಎಸ್‌ಜಿಎಸ್‌ಟಿ ಎಂಬ ಎರಡು ಭಾಗಗಳಿದೆ. ಸಣ್ಣಪುಟ್ಟ ವ್ಯಾಪಾರಿಗಳಿಗೆ ನೋಟಿಸ್ ನೀಡಿರುವುದು ರಾಜ್ಯ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆ. ಇದರಲ್ಲಿ ಕೇಂದ್ರ ಸರ್ಕಾರದ ಯಾವುದೇ ಪಾತ್ರವಿಲ್ಲ ಎಂದು ಪ್ರತಿಪಾದಿಸಿದರು.

ಜಿಎಸ್‌ಟಿ‌ ಕೌನ್ಸಿಲ್‌ನಲ್ಲಿ ಯಾವುದೇ ತೀರ್ಮಾನ‌ ತಗೆದುಕೊಳ್ಳಲು ಮಹತ್ವದ ಪಾತ್ರ ವಹಿಸಿರುವುದು ರಾಜ್ಯ ಸರ್ಕಾರಗಳು. ಕೇಂದ್ರ ಸರ್ಕಾರಕ್ಕೆ ಕೇವಲ ಮೂರನೇ ಒಂದು ಭಾಗ ಮಾತ್ರ ಅಧಿಕಾರವಿದೆ. ಉಳಿದ ಅಧಿಕಾರ ರಾಜ್ಯ ಸರ್ಕಾರದ ಕೈಯಲ್ಲಿದೆ. ಮೂರನೇ ಎರಡು ಭಾಗದಷ್ಟು ಅಧಿಕಾರ ಹೊಂದಿರುವ ರಾಜ್ಯ ‌ಸರ್ಕಾರಗಳ ನಿರ್ಣಯವೇ ಅಂತಿಮವಾಗಿರಲಿದೆ. ಬೇರೆ ಯಾವುದೇ ರಾಜ್ಯಗಳಲ್ಲಿ ನೋಟಿಸ್‌ ನೀಡಿಲ್ಲ. ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರ ಸಣ್ಣಪುಟ್ಟ ವ್ಯಾಪಾರಿಗಳಿಗೆ ನೋಟಿಸ್ ನೀಡಿದೆ ಎಂದು ಟೀಕಿಸಿದ್ದಾರೆ. ಯುಪಿಐ ವಹಿವಾಟು ಇದೀಗ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಈ ಮಧ್ಯೆ ರಾಜ್ಯದಲ್ಲಿ ಡಿಜಿಟಲ್ ವಹಿವಾಟು ಹದಗೆಡಿಸುವ ದುಸ್ಸಾಹಸಕ್ಕೆ ಕಾಂಗ್ರೆಸ್ ಸರ್ಕಾರ ಕೈಹಾಕಿರುವುದು ನಿಜಕ್ಕೂ ದುರಂತ ಎಂದು ಜೋಶಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಹೊಸ ಅಭ್ಯರ್ಥಿಗಳ ನೋಂದಣಿ: ರೋಜಗಾರ ಮೇಳದ ಮೂಲಕ 10 ವರ್ಷದಲ್ಲಿ 10 ಲಕ್ಷ ಉದ್ಯೋಗ ನೀಡುವ ಗುರಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಹೊಂದಿದ್ದರು. ಅವರ ಆಶಯದಂತೆ ಇಲ್ಲಿಯ ವರೆಗೆ 7.72 ಲಕ್ಷ ಜನರಿಗೆ ಉದ್ಯೋಗ ನೀಡಲಾಗುತ್ತಿದೆ. ಇಪಿಎಫ್‌ಒನಲ್ಲಿ ಕಳೆದ ಹತ್ತು ವರ್ಷಗಳಲ್ಲಿ 23.73 ಕೋಟಿ ಹೊಸ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು. ಇಪಿಎಫ್‌ಒನಲ್ಲಿ ಇಷ್ಟು ಜನ ನೋಂದಣಿಯಾಗಿದ್ದಾರೆ ಎಂದರೆ ಅದರ ಅರ್ಥ ಇಷ್ಟು ಜನರಿಗೆ ಉದ್ಯೋಗ ಲಭಿಸಿದೆ ಎಂದರ್ಥ. ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಿದೆ ಎನ್ನುವವರು ಈ ಅಂಕಿ-ಸಂಖ್ಯೆ ಗಮನಿಸಲಿ.

ಸರ್ಕಾರಿ ಕಚೇರಿಗಳು, ಸಂಸ್ಥೆಗಳು ಸೇರಿದಂತೆ ವಿವಿಧ ವಲಯಗಳಲ್ಲಿ ಹೊಸದಾಗಿ ನೇಮಕಾತಿ ಹೊಂದಿದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ರೋಜಗಾರ್ ಮೇಳದ ಮೂಲಕ ವಿತರಿಸಲಾಗುತ್ತಿದೆ. ಮತ್ತಷ್ಟು ಹೊಸ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು. ಆ ಮೂಲಕ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲಾಗುವುದು ಎಂದು ತಿಳಿಸಿದರು. ಭಾರತದಲ್ಲಿ ಯುವ ಸಮುದಾಯ ಹೆಚ್ಚಿದೆ. ದೇಶ ಶೇ. 65ರಷ್ಟು 35 ವಯೋಮಿತಿ ಒಳಗಿನ ಯುವ ಸಮುದಾಯ ಹೊಂದಿದೆ. ಹೊಸ ಉದ್ಯಮಗಳಿಂದ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯಲಿದ್ದು, ಉದ್ಯೋಗಿಗಳಾಗುವ ಬದಲು ಉದ್ಯೋಗದಾತರಾಗಲು ಮುಂದೆ ಬರಬೇಕು. ಉದ್ಯಮಗಳ ಸ್ಥಾಪನೆಗೆ ಆಸಕ್ತಿ ಹೊಂದಿದವರನ್ನು ಪ್ರೋತ್ಸಾಹಿಸುವಂತೆ ಅವರು ತಿಳಿಸಿದರು.

ಕಳೆದ 10 ವರ್ಷದಲ್ಲಿ ಸುಮಾರು 40 ಸಾವಿರ ಕಿ.ಮೀ. ರೈಲ್ವೆ ವಿದ್ಯುದ್ಧೀಕರಣ ಮಾಡಲಾಗಿದೆ. 10 ವರ್ಷಗಳ ಹಿಂದೆ ಸುಮಾರು 23 ಸಾವಿರ ಕಿ.ಮೀ. ವಿದ್ಯುದ್ಧೀಕರಣ ಮಾಡಲಾಗಿತ್ತು. ದೇಶದ ಸುಮಾರು 80 ಕೋಟಿ ಜನರಿಗೆ ಉಚಿತ ಪಡಿತರ ವಿತರಿಸಲಾಗುತ್ತಿದೆ. ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲಾಗಿದೆ. ರಾಷ್ಟ್ರದಲ್ಲಿ ಮೂಲಸೌಕರ್ಯ ಸುಧಾರಣೆಯಾಗಿದೆ. ಮಹಿಳೆಯರೂ ವಿವಿಧ ರಂಗಗಳಲ್ಲಿ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 2015ರಲ್ಲಿ ಶೇ 32ರಷ್ಟು ಮಹಿಳೆಯರು ಉದ್ಯೋಗದಲ್ಲಿದ್ದರು. ಇದೀಗ ಶೇ. 40ರಷ್ಟು ಮಹಿಳ‍ೆಯರು ಉದ್ಯೋಗಿಗಳಾಗಿದ್ದಾರೆ. ವಿವಿಧ ಇಲಾಖೆಗಳಿಗೆ ಹೊಸದಾಗಿ ನೇಮಕವಾದ ಅಭ್ಯರ್ಥಿಗಳು ಜನರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ತಿಳಿಸಿದರು.