Asianet Suvarna News Asianet Suvarna News

ಗೌರ್ನರ್‌ಗೆ ವಿವೇಚನಾಧಿಕಾರ ಇಲ್ಲ, ಸಂಪುಟದ ಮಾತು ಕೇಳಬೇಕು: ಸಚಿವ ಕೃಷ್ಣಬೈರೇಗೌಡ

ಸಂವಿಧಾನದ ಅಡಿಯಲ್ಲಿ ಅವರಿಗೆ ವಿವೇಚನಾ ಅಧಿಕಾರ ನೀಡಿಲ್ಲ. ಇದನ್ನು ಸುಪ್ರೀಂಕೋರ್ಟ್‌ ಹಲವು ತೀರ್ಪುಗಳಲ್ಲಿ ಸ್ಪಷ್ಟಪಡಿಸಿದೆ. ಹೀಗಾಗಿ ಸಚಿವರ ಪರಿಷತ್‌ ಸಭೆಯಲ್ಲಿ ಶೋಕಾಸ್‌ ನೋಟಿಸ್‌ ಹಿಂಪಡೆಯುವಂತೆ ಸಲಹೆ ನೀಡಿದ್ದೇವೆ ಎಂದ ಸಚಿವ ಕೃಷ್ಣಬೈರೇಗೌಡ 

governor has no discretion, he has to listen to the cabinet says minister Krishna Byre Gowda grg
Author
First Published Aug 2, 2024, 5:30 AM IST | Last Updated Aug 2, 2024, 10:00 AM IST

ಬೆಂಗಳೂರು(ಆ.02):  ‘ರಾಜ್ಯಪಾಲರು ಸಚಿವರ ಪರಿಷತ್‌ ಅಥವಾ ಸಚಿವ ಸಂಪುಟ ಸಭೆಯ ಸೂಚನೆ ಮೇರೆಗೆ ನಡೆದುಕೊಳ್ಳಬೇಕೆ ಹೊರತು ತಮ್ಮ ವಿವೇಚನೆಯ ಆಧಾರದ ಮೇಲೆ ಅಲ್ಲ. ಈ ಬಗ್ಗೆ ನಿಯಮಗಳಲ್ಲೇ ಸ್ಪಷ್ಟವಾಗಿ ಹೇಳಲಾಗಿದೆ’ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.

ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಟಿ.ಜೆ.ಅಬ್ರಹಾಂ ಎಂಬ ವ್ಯಕ್ತಿ ರಾಜ್ಯಪಾಲರಿಗೆ ಅರ್ಜಿ ನೀಡಿರುವುದು ರಾಜಕೀಯ ಮಾತ್ರವಲ್ಲ ಕಾನೂನಿಗೆ ವಿರುದ್ಧ ಎಂದು ಆರೋಪ ಮಾಡಿದ್ದಾರೆ.
ರಾಜ್ಯಪಾಲರು ಯಾವ ರೀತಿ ವರ್ತಿಸಬೇಕು ಎಂಬುದನ್ನು ಆರ್ಟಿಕಲ್‌ 163ರಲ್ಲಿ ಸ್ಪಷ್ಟಪಡಿಸಲಾಗಿದೆ. ಸಂಪುಟದ ನಿರ್ಧಾರ ಆಧರಿಸಿ ಅಥವಾ ಸಚಿವರ ಪರಿಷತ್‌ ನಿರ್ಣಯ ಆಧರಿಸಿ ಅವರು ಕೆಲಸ ಮಾಡಬೇಕು.

ಮುಡಾ ಕೇಸಲ್ಲಿ ಸಿಎಂಗೆ ಸಂಕಷ್ಟ: ಪ್ರಾಸಿಕ್ಯೂಷನ್‌ ಭೀತಿಯಲ್ಲಿ ಸಿದ್ದು..!

ಸಂವಿಧಾನದ ಅಡಿಯಲ್ಲಿ ಅವರಿಗೆ ವಿವೇಚನಾ ಅಧಿಕಾರ ನೀಡಿಲ್ಲ. ಇದನ್ನು ಸುಪ್ರೀಂಕೋರ್ಟ್‌ ಹಲವು ತೀರ್ಪುಗಳಲ್ಲಿ ಸ್ಪಷ್ಟಪಡಿಸಿದೆ. ಹೀಗಾಗಿ ಸಚಿವರ ಪರಿಷತ್‌ ಸಭೆಯಲ್ಲಿ ಶೋಕಾಸ್‌ ನೋಟಿಸ್‌ ಹಿಂಪಡೆಯುವಂತೆ ಸಲಹೆ ನೀಡಿದ್ದೇವೆ ಎಂದು ಹೇಳಿದರು.

ಟಿ.ಜೆ.ಅಬ್ರಹಾಂ ದೂರು ಕಾನೂನು ಬಾಹಿರ:

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಜತೆಗಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅರ್ಜಿದಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜು.18ರಂದು ಮೈಸೂರಿನ ಲೋಕಾಯುಕ್ತ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ದೂರಿಗೆ ಲೋಕಾಯುಕ್ತ ಪೊಲೀಸರು ಮಹತ್ವ ಕೊಡುತ್ತಿಲ್ಲ ಎನ್ನುವುದಾದರೆ ಅವರು ಮ್ಯಾಜಿಸ್ಟ್ರೇಟ್‌ ಮೊರೆ ಹೋಗಬೇಕಿತ್ತು. ಅವರು ಎಫ್‌ಐಆರ್‌ ದಾಖಲಿಸಲು ಸೂಚಿಸುತ್ತಿದ್ದರು. ಆದರೆ ಒಬ್ಬ ವ್ಯಕ್ತಿ ನೇರವಾಗಿ ರಾಜ್ಯಪಾಲರ ಬಳಿ ಹೋಗಿ ದೂರು ನೀಡುವುದು ಕಾನೂನು ಬಾಹಿರ’ ಎಂದು ಸ್ಪಷ್ಟಪಡಿಸಿದರು.

ಮುಡಾ ಅಕ್ರಮ: ಸಿಎಂ ಸಿದ್ಧರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ ಕೋರಿ ರಾಜ್ಯಪಾಲರಿಗೆ ಅರ್ಜಿ

ಅಲ್ಲದೆ, ಅಭಿಯೋಜನೆಗೆ ಅನುಮತಿ ಕೇಳಬೇಕಿರುವುದು ತನಿಖಾ ಸಂಸ್ಥೆಯೇ ಹೊರತು ಯಾವುದೋ ವ್ಯಕ್ತಿಯಲ್ಲ. ಹಿಂದೆಯೂ ರಾಜ್ಯಪಾಲರು ಮುಖ್ಯಮಂತ್ರಿಗಳ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡಿದ್ದರು ಎಂಬ ಚರ್ಚೆ ಬರಬಹುದು. ಆದರೆ, ಆಗ ಒಬ್ಬ ಖಾಸಗಿ ವ್ಯಕ್ತಿ ಮ್ಯಾಜಿಸ್ಟ್ರೇಟ್‌ ಬಳಿ ಈ ದೂರನ್ನು ಕೊಟ್ಟಿದ್ದರು. ಆಗ ಮ್ಯಾಜಿಸ್ಟ್ರೇಟ್‌ ರಾಜ್ಯಪಾಲರ ಅನುಮತಿ ಬೇಕು ಎಂದಿದ್ದಕ್ಕಾಗಿ ರಾಜ್ಯಪಾಲರ ಅನುಮತಿ ಕೇಳಿದ್ದು, ಮ್ಯಾಜಿಸ್ಟ್ರೇಟ್‌ ಕೇಳಿದ್ದಕ್ಕಾಗಿ ಆಗ ರಾಜ್ಯಪಾಲರು ಅನುಮತಿ ನೀಡಿದ್ದರು. ಈಗ ಕೇಳಿದಂತೆ ನೇರವಾಗಿ ಎಲ್ಲೂ ನೀಡಿಲ್ಲ ಎಂದು ಕೃಷ್ಣಬೈರೇಗೌಡ ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್‌.ಪೊನ್ನಣ್ಣ ಮಾತನಾಡಿ, ಅಬ್ರಹಾಂ ತನ್ನ ಅರ್ಜಿಯಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆ 17ಎ, 19 ಹಾಗೂ ಬಿಎನ್‌ಎಸ್‌ಎಸ್‌ ಕಾಯ್ದೆಯ 218 ಸೆಕ್ಷನ್‌ ಅನ್ವಯ ಸೇರಿ ಐಪಿಸಿಯಲ್ಲಿರುವ 7-8 ಸೆಕ್ಷನ್‌ಗಳನ್ನು ಉಲ್ಲೇಖಿಸಿ ದೂರು ನೀಡಿದ್ದಾರೆ. ಅವರು ಸೆಕ್ಷನ್‌ಗಳನ್ನು ಬರೆದಿದ್ದಾರೆ ಎಂಬ ಕಾರಣಕ್ಕೆ ಅವೆಲ್ಲವೂ ಅನ್ವಯವಾಗುವುದಿಲ್ಲ. ಅವರು ಉಲ್ಲೇಖಿಸಿರುವ ಸೆಕ್ಷನ್‌ಗಳ ಒಂದೂ ಅಂಶವೂ ಪ್ರಕರಣದಲ್ಲಿ ಕಂಡು ಬಂದಿಲ್ಲ. ಹೀಗಿದ್ದರೂ ಅಭಿಯೋಜನೆಗೆ ಅನುಮತಿ ನೀಡುವ ಕುರಿತು ಶೋಕಾಸ್‌ ನೋಟಿಸ್‌ ನೀಡುವ ಅಗತ್ಯವಿರಲಿಲ್ಲ ಎಂದು ಹೇಳಿದರು. ಹಾಗಾದರೆ ರಾಜ್ಯಪಾಲರು ಕಾನೂನು ಪಾಲಿಸಿಲ್ಲವೇ ಎಂಬ ಪ್ರಶ್ನೆಗೆ, ‘ಇಲ್ಲ’ ಎಂದಷ್ಟೇ ಹೇಳಿದರು.

Latest Videos
Follow Us:
Download App:
  • android
  • ios