• ಸಂವಿಧಾನ ಪಾಲನೆ  ಮಾಡದವರಿಗೆ ಈ ದೇಶದಲ್ಲಿ ಇರುವ ಹಕ್ಕು ಇಲ್ಲ• ದೇಶದಲ್ಲಿ ಇರಬೇಕು ಅಂದರೆ ಸಂವಿಧಾನ ಪಾಲನೆ ಮಾಡಬೇಕು• ಯಾವ ದೇಶದ ಸಂವಿಧಾನ ಪಾಲನೆ ಮಾಡಕ್ಕಾಗುತ್ತೆ ಆ ದೇಶಕ್ಕೆ ಹೋಗಲಿ 

ಬೆಳಗಾವಿ, (ಏ.10): ಸಂವಿಧಾನ ಪಾಲನೆ ಮಾಡದವರಿಗೆ ಈ ದೇಶದಲ್ಲಿ ಇರುವ ಹಕ್ಕು ಇಲ್ಲ,ದೇಶದಲ್ಲಿ ಇರಬೇಕು ಅಂದರೆ ಸಂವಿಧಾನ ಪಾಲನೆ ಮಾಡಬೇಕು, ಸಂವಿಧಾನ ಪಾಲನೆ ಮಾಡಲ್ಲ ಅನ್ನೋರು ಬೇರೆ ದೇಶಕ್ಕೆ ಹೋಗಬೇಕು, ಯಾವ ದೇಶದ ಸಂವಿಧಾನ ಪಾಲನೆ ಮಾಡಕ್ಕಾಗುತ್ತೆ ಆ ದೇಶಕ್ಕೆ ಹೋಗಲಿ ಎಂದು ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ್ ಪಾಟೀಲ್ ಹೇಳಿದ್ದಾರೆ.

 ಹಿಜಾಬ್ ವಿಚಾರವಾಗಿ ಕೋರ್ಟ್ ಆದೇಶ ವಿರುದ್ಧ ಮುಸ್ಲಿಂ ಸಂಘಟನೆಗಳ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಅಭಯ್ ಪಾಟೀಲ್, 'ಅವರ ಸಂದೇಶ ಇಷ್ಟೇ, ಅಂದ್ರೆ ನಾವು ಈ ದೇಶದಲ್ಲಿ ಇರಲು ಅರ್ಹರಲ್ಲ.ನೀವರೇ ಕಳಸ್ರಿ ಅನ್ನೋ ವಾತಾವರಣ ತಯಾರು ಮಾಡುತ್ತಿದ್ದಾರೆ. ಯಾವ ಇಲಾಖೆಯಿಂದ ಯಾವ ನಿರ್ಣಯ ಆಗಿದೆ ಅಂತಾ ನನಗಂತೂ ಗೊತ್ತಿಲ್ಲ. ನ್ಯಾಯಾಲಯದ ನಿರ್ಣಯ ಒಪ್ಪದೇ ನಾವು ಹಿಜಾಬ್ ಹಾಕಿಕೊಂಡು ಬರ್ತೀವಿ ಅಂತಿದ್ದಾರೆ. ನ್ಯಾಯಾಲಯ ನಿರ್ಣಯ ಮಾನ್ಯ ಮಾಡದೇ ಮಸೀದಿಗಳ ಮೇಲೆ ಬೆಳಗ್ಗೆ 4 ಗಂಟೆಗೆ ಸ್ಪೀಕರ್ ಹಚ್ಚುತ್ತೀವಿ ಅಂತಾರೆ ಇದು ನ್ಯಾಯಾಲಯದ ಮೇಲಿನ ಅಪಮಾನ ಅಲ್ಲದೇ ಮತ್ತೇನು. ನ್ಯಾಯಾಲಯದ ನ್ಯಾಯ ಕಾಪಾಡುವ ಜವಾಬ್ದಾರಿ ಭಾರತದಲ್ಲಿರುವ ಎಲ್ಲರ ಮೇಲಿದೆ‌. ಅದನ್ನ ಕಾಪಾಡುವಂತದ್ದನ್ನು ಮೊದಲು ಅವರು ಮಾಡಬೇಕು' ಎಂದರು‌. 

ಆರ್‌ಎಸ್ಎಸ್‌ನವರು ರಣಹೇಡಿಗಳು ಎಂದ ಬಿ.ಕೆ.ಹರಿಪ್ರಸಾದ್

ಇನ್ನು ಮುಸ್ಲಿಮ ವರ್ತಕರಿಗೆ ಆರ್ಥಿಕ ನಿರ್ಬಂಧ ವಿಚಾರವಾಗಿ ಪ್ರತಿಕ್ರಿಯಿಸಿದ ಅಭಯ್ ಪಾಟೀಲ್, 'ಆರ್ಥಿಕ ನಿರ್ಬಂಧ ಯಾಕೆ ಹಾಕುತ್ತಿದ್ದಾರೆ ಅವಲೋಕನ ಮಾಡಬೇಕು. ಪ್ರತಿರೋಧ ಯಾವಾಗ ಆಗುತ್ತದೆ ಅನ್ನೋದನ್ನ ಚಿಂತನೆ ಆಗಬೇಕು.‌ಬರೇ ಪ್ರತಿರೋಧ ಮಾಡಾತಾರ, ಆರ್ಥಿಕ ನಿರ್ಬಂಧ ಮಾಡಾತಾರ ಸ್ಥಳೀಯವಾಗಿ ಏನ್ ಸಮಸ್ಯೆ ಆಗಿತ್ತು ಚಿಂತನೆ ಮಾಡಬೇಕು' ಎಂದು ತಿಳಿಸಿದರು.

'ಅಂತಾರಾಷ್ಟ್ರೀಯ ಷಡ್ಯಂತ್ರ ಇದೆ'
ಮಂಡ್ಯದ ಮುಸ್ಕಾನ್ ಬೆಂಬಲಿಸಿ ಅಲ್‌ಖೈದಾ ಮುಖ್ಯಸ್ಥನ ವಿಡಿಯೋ ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಅಭಯ್ ಪಾಟೀಲ್, 'ಇದು ಅಂತಾರಾಷ್ಟ್ರೀಯ ಷಡ್ಯಂತ್ರ ಇದೆ. ಈ ಘಟನೆ ಬಗ್ಗೆ ಅಲ್‌ಖೈದಾ ಮುಖ್ಯಸ್ಥ ಝವಹರಿ ಹೇಳುತ್ತಾನಂದ್ರೆ ನೆಟ್ವರ್ಕ್ ಎಷ್ಟಿರಬಹುದು ಲೆಕ್ಕ ಹಾಕ್ರಿ. ಈ ನೆಟ್ವರ್ಕ್‌ ವಿರೋಧ ಪಕ್ಷದವರಿಗೆ ನಾವು ಹಿಂದುತ್ವವಾದಿಗಳಿದೀವಿ ಅನ್ನೋ ದೃಷ್ಟಿಕೋನದಿಂದ ನೋಡುವಂತದ್ದಾಗಬಾರದು‌. ಇದರ ಹಿಂದೆ ಏನು ಷಡ್ಯಂತ್ರ ಇದೆ ಅನ್ನೋದನ್ನ ಗಮನದಲ್ಲಿಟ್ಟುಕೊಳ್ಳಬೇಕು ಎಂದು ತಿಳಿಸಿದರು.

ನ್ಯಾಯಾಲಯ ನಿರ್ಣಯ ಬಂದಮೇಲೂ ಹಿಜಾಬ್ ಹಾಕಿಕೊಂಡು ಹೋಗ್ತೀವಿ ಅನ್ನೋ ಹೆಣ್ಣುಮಕ್ಕಳು, ಆ ಸಮಾಜದ ಬಗ್ಗೆ ಚಿಂತನೆ ಮಾಡಬೇಕಾಗುತ್ತದೆ. ಇದು ಬರುವಂತಹ ದಿವಸಗಳಲ್ಲಿ ದೇಶಕ್ಕೆ ಒಳ್ಳೆಯದಾಗುವ ವಾತಾವರಣ ಇಲ್ಲ' ಎಂದರು. ಇನ್ನು ಅಲ್‌ಕೈದಾ ಮುಖ್ಯಸ್ಥನ ವಿಡಿಯೋ ಆರ್‌ಎಸ್ಎಸ್ ಸೃಷ್ಟಿ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, 'ನಾನು ಮೂರನೇ ಬಾರಿ ಶಾಸಕ, ಸಿದ್ದರಾಮಯ್ಯ ರಾಜ್ಯದ ಸಿಎಂ ಆಗಿ ಇದ್ದಂತವರು.‌ಮೊದಲನೇ ಬಾರಿ ಶಾಸಕನಾದವನು ಸಹ ಈ ತರಹ ಮಾತನಾಡಲ್ಲ.‌ಅದರ ಮೇಲೆ ನೀವು ತಿಳಿದುಕೊಂಡು ಬಿಡಿ ಅವರ ಮಟ್ಟ ಯಾವ ಮಟ್ಟದ್ದಿದೆ ಅಂತಾ' ಎಂದು ಮಾಜಿ ಸಿದ್ದರಾಮಯ್ಯ ವಿರುದ್ಧ ಅಭಯ್ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.

'ಬೆಳಗಾವಿಯಲ್ಲಿ ಅಂತಾರಾಷ್ಟ್ರೀಯ ನೋಟು, ಶಸ್ತ್ರಾಸ್ತ್ರ ಸಿಗುತ್ತೆ'
ಮತ್ತೊಂದೆಡೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕರೋಶಿಯಲ್ಲಿ ಪಾಕಿಸ್ತಾನ ನೋಟು ಪತ್ತೆ ವಿಚಾರವಾಗಿ ಪ್ರತಿಕ್ರಿಯಿಸಿದ ಅಭಯ್ ಪಾಟೀಲ್, 'ನಾನು ಸಿರಿಯಸ್‌ ಆಗಿ ಹೇಳ್ತಿದೀನಿ, ಬೆಳಗಾವಿಯಲ್ಲಿರುವ ಕೆಲ ಏರಿಯಾಗಳಲ್ಲಿ ಪರಿಶೀಲಿಸಿ. ಬೆಳಗಾವಿಯಲ್ಲಿಯೂ ಸಹ ನಿಮಗೆ ಬೇರೆ ದೇಶದ ನೋಟುಗಳು ಸಿಗುತ್ತೆ, ಶಸ್ತ್ರಾಸ್ತ್ರಗಳು ಸಿಗುತ್ತವೆ. ಪೊಲೀಸ್ ಇಲಾಖೆ ಇನ್ನೂ ಅಷ್ಟೊಂದು ಕಾರ್ಯರೂಪಕ್ಕೆ ಬಂದಿಲ್ಲ. ಬರುವಂತಹ ದಿವಸಗಳಲ್ಲಿ ಸರಿಯಾಗಿ ದಾರಿಗೆ ತರುವಂತಹದ್ದು ಪೊಲೀಸ್ ಇಲಾಖೆ ಮಾಡಬೇಕಾಗುತ್ತದೆ ಎಂದು ಹೇಳಿದರು.

ಬೆಳಗಾವಿಯಲ್ಲಿಯೂ ಸ್ಫೋಟಕ ಪರಿಸ್ಥಿತಿ ಇದೆ. ಬೆಳಗಾವಿಯ ಕೆಲ ಏರಿಯಾಗಳಲ್ಲಿ ಪೊಲೀಸರೂ ಹೋಗೋದಿಲ್ಲ ಅಂತಾ ವಾತಾವರಣ ಇದೆ.‌ ಇವರೇ ಇವರೇ ಅಂತಿಲ್ಲ ಹೋಗಿ ಎಲ್ಲೆಡೆ ಸರ್ಚ್ ಮಾಡಿ ಅಂತಾ ಪೊಲೀಸ್ ಇಲಾಖೆಗೆ ವಿನಂತಿ ಮಾಡ್ತೀನಿ. ಬೆಳಗಾವಿಯಲ್ಲಿ ಎಷ್ಟು ತಲ್ವಾರ್‌ಗಳು ಅವೈದ್ಯಕೀಯವಾಗಿ ಬಂದಿದಾವೆ. ಯಾವುದೇ ಗಲಾಟೆ ಆದರೂ ಯಾರ ಕೈಯಲ್ಲಿ ತಲ್ವಾರ್ ಇರುತ್ತೆ? ಅದು ಪೊಲೀಸರಿಗೆ ಗೊತ್ತಿಲ್ವಾ.‌ ಇನ್ನು ನಗರದಲ್ಲಿ ಮಟ್ಕಾ ಗಾಂಜಾ ಹಾವಳಿ ವಿಚಾರವಾಗಿ ಪ್ರತಿಕ್ರಿಯಿಸಿ, 'ನನ್ನ ವೈಯಕ್ತಿಕ ಅಭಿಪ್ರಾಯ ಪ್ರಕಾರ 60 ರಿಂದ 70 ಪರ್ಸೆಂಟ್ ಕಂಟ್ರೋಲ್ ಇದೆ. ನಾನು ಪ್ರಶ್ನೆ ಎತ್ತಿದ ಮೇಲೆ ಸಂಬಂಧ ಪಟ್ಟ ಅಧಿಕಾರಿಗಳು ಗಂಭೀರವಾಗಿ ತಗೆದುಕೊಂಡಿದ್ರು. ಮಟ್ಕಾ ಆಡೋರು, ಜೂಜುಕೋರರು,ಗಾಂಜಾ ಮಾರೋರು ಬೆಳಗಾವಿ ಬಿಟ್ಟು ಹೋಗಿದ್ದಾರೆ. ಇನ್ನು ಕೆಲವೊಂದು ಜನ ಯಾರು ಉಳಿದಿದ್ದಾರೆ ಅವರ ಮೇಲೆ ಕ್ರಮ ಆಗಬೇಕು' ಎಂದರು. ಇನ್ನು ಖಂಜರ್‌ಗಲ್ಲಿಯಲ್ಲಿ ಪಾರ್ಕಿಂಗ್ ಸ್ಥಳ ನಿರ್ಮಾಣ ಮಾಡಿದರೂ ಉಪಯೋಗವಾಗದ ವಿಚಾರವಾಗಿ ಪ್ರತಿಕ್ರಿಯಿಸಿ, 'ಮಹಾನಗರ ಪಾಲಿಕೆಯಲ್ಲಿ ಯಾವ್ಯಾವ ಕಾಮಗಾರಿ ಆದವು ಉಪಯೋಗ ಆಗುತ್ತಿಲ್ಲ ಅದನ್ನ ಆಯುಕ್ತರ ಗಮನಕ್ಕೆ ತರ್ತೇನೆ' ಎಂದರು.

'ಆರ್‌ಎಸ್‌ಎಸ್ ಬಗ್ಗೆ ಕುಮಾರಸ್ವಾಮಿಗೆ ಒಂದ್ ಪರ್ಸೆಂಟೂ ಗೊತ್ತಿಲ್ಲ'
ಆರ್‌ಎಸ್ಎಸ್ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಅಭಯ್ ಪಾಟೀಲ್, 'ಆರ್‌ಎಸ್ಎಸ್ ಬಗ್ಗೆ ಒಂದ್ ಪರ್ಸೆಂಟೂ ಕುಮಾರಸ್ವಾಮಿಗೆ ಗೊತ್ತಿಲ್ಲ. ಒಂದು ಪರ್ಸೆಂಟ್ ಗೊತ್ತಿದ್ದರೂ ಅವರು ಈ ರೀತಿ ಟೀಕೆ ಮಾಡ್ತಿರಲಿಲ್ಲ. ಹಾನಗಲ್, ಸಿಂದಗಿ ಚುನಾವಣೆಯಲ್ಲಿ ಯಾವ ಸಮಾಜದವರನ್ನು ಪ್ಲೀಸ್ ಮಾಡಲು ಹೊರಟಿದ್ರೂ ಅವರು ಪಾತಾಳಕ್ಕಿಂತ ಮುಂದಿನ ಸ್ಥಳ ತೋರಿಸಿದ್ದಾರೆ' ಎಂದರು. ಇನ್ನು ಸಿ.ಎಂ.ಇಬ್ರಾಹಿಂ ಜೆಡಿಎಸ್ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿ, 'ಸಿ.ಎಂ.ಇಬ್ರಾಹಿಂ ಮಾಧ್ಯಮಗಳಲ್ಲಿ ದೇವೇಗೌಡರ ಕುರಿತು ಊಟದ ಬಗ್ಗೆ ಹೇಳಿಕೆ ಕೊಟ್ಟಿದ್ರು. ನಾನು ಅದನ್ನ ಇಲ್ಲಿ ಹೇಳೋಕೆ ಹೋಗಲ್ಲ. ಅವರಿಗೆ ಯಾವ ಊಟ ರುಚಿ ಹತ್ತುತ್ತೆ ಅಂತಾ ಹೇಳಿದ್ರು. ಅವರು ಹೇಳಿದ್ದು ಮದುವೆ ಊಟ ಅಲ್ವಂತೆ ಮುಂದಿನದ್ದು ನೀವೆ ತಿಳಿದುಕೊಳ್ಳಿ. ಅಂತಾ ವ್ಯಕ್ತಿ ಮತ್ತೆ ಅಲ್ಲಿ ಹೋಗಿ ಇವರಿಗೆ ಪ್ರೇರಣೆ ಮಾಡುವಂತಹದ್ದು. ಯಾರ‌್ಯಾರು ಹೋದಾಗ ಕುಮಾರಸ್ವಾಮಿಗೆ ಏನೇನ್ ಪ್ರೇರಣೆ ಆಗುತ್ತೆ ದೇವರೇ ಬಲ್ಲ' ಅಂತಾ ವ್ಯಂಗ್ಯವಾಡಿದರು.

'ಸಂಪುಟ ಸೇರ್ತೇನೆ ಅಂತಾ 2006ರಿಂದಲೂ ನನ್ನ‌ ಹೆಸರು ಬರ್ತಿದೆ'
ಸಚಿವ ಸಂಪುಟ ವಿಸ್ತರಣೆ ವಿಳಂಬಕ್ಕೆ ಪರೋಕ್ಷವಾಗಿ ಅಭಯ್ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಅಭಯ್ ಪಾಟೀಲ್, 'ಸಿಎಂ ದೆಹಲಿಯಿಂದ ವಾಪಸ್ ಬಂದ ಬಳಿಕ ನಾನೇ ಮೊದಲು ಭೇಟಿ ಆಗಿದ್ದೆ. ಆಗ ಕೆಲವೊಂದಿಷ್ಟು ಶಾಸಕರು ಇದ್ದರು. ನಾವು ಅವರಿಗೆ ಸಂಪುಟ ಬಗ್ಗೆ ಕೇಳೋದಕ್ಕೆ ಹೋಗಲಿಲ್ಲ, ಅವರೂ ಏನೂ ಹೇಳಲಿಲ್ಲ. ಸಂಪುಟ ವಿಸ್ತರಣೆ ಬಗ್ಗೆ ಅವರೂ ಏನೂ ಹೇಳಲಿಲ್ಲ, ನಾವೂ ಏನೂ ಕೇಳಲಿಲ್ಲ. ಅದರ ಮೇಲೆ ನೀವು ತಿಳಿದುಕೊಂಡುಬಿಡಿ. ಸಂಪುಟ ವಿಸ್ತರಣೆ ಹೇಳಿ ಕೇಳಿ ಏನೂ ಆಗುವುದಿಲ್ಲ. ಅದರ ನಿರ್ಣಯವನ್ನ ವರಿಷ್ಠರು ಮಾಡ್ತಾರೆ.‌ಈಗ ಯಾರು ಸಂಪುಟ ವಿಸ್ತರಣೆ, ಪುನರ್‌ರಚನೆ ಮಾಡ್ತಾರೆ ಅವರನ್ನ ಕೇಳಬೇಕು‌ ಸಂಪುಟ ವಿಸ್ತರಣೆ ಆಗುತ್ತೋ ಇಲ್ಲವೋ ಅನ್ನೋದನ್ನ ಅವರೇ ಹೇಳಬೇಕು.‌ 2006 ರಿಂದಲೂ ನನ್ನ ಹೆಸರು ಮಾಧ್ಯಮಗಳಲ್ಲಿ ಬರುತ್ತಿದೆ‌.‌ಆದ್ರೆ ನಾನು ಎಂದೂ ನಿರೀಕ್ಷೆಯನ್ನೇ ಮಾಡಿಲ್ಲ' ಎಂದ ಅಭಯ್ ಪಾಟೀಲ್ ತಿಳಿಸಿದರು.