ನನ್ನ ಉಚ್ಚಾಟನೆಗೆ ವಾರದೊಳಗೆ ಕಾರಣ ನೀಡಿ: ಬಿಜೆಪಿ ನಾಯಕ

ನನ್ನನ್ನು ಉಚ್ಚಾಟಿಸಿರುವ ವಿಷಯ ತಿಳಿಯಿತು. ಆದರೆ, ಪಕ್ಷ ವಿರೋಧಿ ಚಟುವಟಿಕೆ ಹಾಗೂ ಪಕ್ಷಕ್ಕೆ ಮುಜುಗರ ಆಗುವಂತಹ ಕಾರ್ಯ ಮಾಡಿರುವ ಕುರಿತು ಜಿಲ್ಲಾಧ್ಯಕ್ಷರು ಸ್ಪಷ್ಟನೆ ನೀಡಬೇಕು: ಮಲ್ಲಿಕಾರ್ಜುನ ಚರಂತಿಮಠ

Give the Reason for My Expulsion within a Week Says BJP Leader Mallikarjun Charantimath grg

ಬಾಗಲಕೋಟೆ(ಆ.30): ಕಳೆದ ಮೂರು ದಶಕಗಳಿಂದ ಜಿಲ್ಲೆಯಲ್ಲಿ ಪಕ್ಷ ಸಂಘಟಿಸಿರುವ ನನ್ನನ್ನು ಯಾವುದೇ ನೋಟಿಸು ನೀಡದೇ ಏಕಾಏಕಿ ಪಕ್ಷದಿಂದ ಉಚ್ಚಾಟಿಸಿರುವ ಜಿಲ್ಲೆಯ ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ ಅವರು ಒಂದು ವಾರದೊಳಗೆ ಸ್ಪಷ್ಟೀಕರಣ ನೀಡಬೇಕು ಎಂದು ಉಚ್ಚಾಟಿತ ಬಿಜೆಪಿ ನಾಯಕ ಮಲ್ಲಿಕಾರ್ಜುನ ಚರಂತಿಮಠ ಆಗ್ರಹಿಸಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮದಿಂದ ನನ್ನನ್ನು ಉಚ್ಚಾಟಿಸಿರುವ ವಿಷಯ ತಿಳಿಯಿತು. ಆದರೆ, ಪಕ್ಷ ವಿರೋಧಿ ಚಟುವಟಿಕೆ ಹಾಗೂ ಪಕ್ಷಕ್ಕೆ ಮುಜುಗರ ಆಗುವಂತಹ ಕಾರ್ಯ ಮಾಡಿರುವ ಕುರಿತು ಜಿಲ್ಲಾಧ್ಯಕ್ಷರು ಸ್ಪಷ್ಟನೆ ನೀಡಬೇಕು ಎಂದು ಮನವಿ ಮಾಡಿದ ಅವರು, ಯಾರೂ ಇಲ್ಲದ ಸಂದರ್ಭದಲ್ಲಿ ಪಕ್ಷದ ಜವಾಬ್ದಾರಿ ಹೊತ್ತು ಕೆಲಸ ಮಾಡಿರುವ ನನ್ನನ್ನು ಹೇಗೆ ಉಚ್ಚಾಟನೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

1996ರಿಂದ ಇಲ್ಲಿಯವರೆಗೆ ಬಿಜೆಪಿಯ ಬಹುತೇಕ ಚುನಾವಣೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿರುವ ನಾನು ಹಲವಾರು ಸಂದರ್ಭಗಳಲ್ಲಿ ಹೋರಾಟದ ಮೂಲಕವೂ ಪಕ್ಷ ಸಂಘಟಿಸಿದ್ದೇನೆ. ಆದರೆ, ಯಾವುದೇ ಸಕಾರಣಗಳಿಲ್ಲದೇ ಉಚ್ಚಾಟಿಸುವುದೆಂದರೆ ಹೇಗೆ ಎಂದ ಚರಂತಿಮಠ, ಆ ಕಾರಣಕ್ಕಾಗಿಯೇ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಅವರಲ್ಲಿ ನಾನು ಕೇಳುವುದಿಷ್ಟೇ ನಮ್ಮಿಂದ ಪಕ್ಷಕ್ಕೆ ಆಗಿರುವ ಹಾನಿ ಹಾಗೂ ಮುಜುಗರ ಕುರಿತು ಒಂದು ವಾರದಲ್ಲಿ ಕಾರಣ ತಿಳಿಸಿ ಎಂದು ಹೇಳಿದರು.

ಅಭಿವೃದ್ಧಿಗೆ ಆದ್ಯತೆ ನೀಡದ ಕಾಂಗ್ರೆಸ್‌: ಸಚಿವ ಹಾಲಪ್ಪ ಆಚಾರ್‌

ಪಕ್ಷ ವಿರೋಧಿಸಿದರೆ ತಾಯಿಯನ್ನೇ ವಿರೋಧಿಸಿದಂತೆ:

ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿರುವ ನಾನು 2014ರಲ್ಲಿ ಪ್ರಧಾನಿ ಮೋದಿ ಬಾಗಲಕೋಟೆಗೆ ಬಂದಾಗ ಪೂರ್ಣ ಜವಾಬ್ದಾರಿ ಹೊತ್ತು ಕೆಲಸ ಮಾಡಿರುವೆ. ಸಂಸದ ಗದ್ದಿಗೌಡ ಅವರ ಎಲ್ಲ ಚುನಾವಣೆಗಳಲ್ಲಿ ಪಕ್ಷಕ್ಕಾಗಿ ದುಡಿದಿರುವೆ. ಇತ್ತೀಚೆಗೆ ನಡೆದ ಪರಿಷತ್‌ ಚುನಾವಣೆಯಲ್ಲಿ ಹಣಮಂತ ನಿರಾಣಿ ಹಾಗೂ ಅರುಣ ಶಹಾಪುರ ಹಾಗೂ ಪಿಎಚ್‌ ಪೂಜಾರ ಅವರ ಪರವಾಗಿ ಚುನಾವಣೆಯಲ್ಲಿ ಪ್ರಚಾರ ಮಾಡಿರುವೆ. ಇದು ಪಕ್ಷ ವಿರೋಧಿ ಚಟುವಟಿಕೆಯಾಗುತ್ತದೆಯೇ? ಎಂದ ಅವರು ನಾನಂತೂ ಪಕ್ಷವನ್ನು ವಿರೋಧಿಸಿದರೆ ನನ್ನ ಹೆತ್ತ ತಾಯಿಯನ್ನೇ ವಿರೋಧಿಸಿದಂತೆ ಎಂದರಲ್ಲದೇ, ನನ್ನ ಉಚ್ಛಾಟನೆ ನೋಡಿದರೆ ತಾಯಿಯನ್ನು ವಿರೋಧಿಸುವವರ ಕುಮ್ಮಕ್ಕಿನಿಂದ ನನ್ನನ್ನು ಉಚ್ಛಾಟಿಸಿರಬಹುದು ಎಂದು ವಿಶ್ಲೇಷಿಸಿದರು.

ಹಿರಿಯ ನಾಯಕರ ಮೌನವೇಕೆ?

ಬಾಗಲಕೋಟೆಯಲ್ಲಿ ಪಕ್ಷ ತಮ್ಮ ಸುಪರ್ದಿಯಲ್ಲಿದೆ ಎಂಬಂತೆ ವರ್ತಿಸುತ್ತಿರುವವರ ವಿರುದ್ಧ ಪರಿಷತ್‌ ಸದಸ್ಯ ಪಿ.ಎಚ್‌.ಪೂಜಾರ, ಮಾಜಿ ಸದಸ್ಯ ನಾರಾಯಣಸಾ ಬಾಂಡಗೆ ಸೇರಿದಂತೆ ಇತರ ನಾಯಕರು ಮೌನ ವಹಿಸುತ್ತಿರುವುದು ಏಕೆ? ಎಂದು ತಿಳಿಯುತ್ತಿಲ್ಲ. ಹೋರಾಟದ ಹಿನ್ನೆಲೆಯಿಂದ ಬಂದ ನಾಯಕರು ಮೌನವಾದರೆ ಪಕ್ಷದ ಹಿತ ಕಾಪಾಡುವವರು ಹಾಗೂ ಕಾರ್ಯಕರ್ತರ ನೋವಿಗೆ ಸ್ಪಂದಿಸುವವರು ಯಾರು ಎಂದು ಪ್ರಶ್ನಿಸಿದರು.

ನಾನು ನಿಮ್ಮ ಮನೆ ಜೀತಕ್ಕೆ ಇಲ್ಲ: ಸಿದ್ದುಗೆ ಸೋಮಣ್ಣ ಗುದ್ದು

57 ಸಾವಿರ ಸದಸ್ಯತ್ವ ಮಾಡಿರುವೆ:

ಪಕ್ಷದ ಸಂಘಟನೆಗೆ ನನ್ನದೆಯಾದ ಕೊಡುಗೆ ಇದೆ. ಪಕ್ಷವನ್ನು ಸಂಘಟಿಸುವುದು ನನಗೆ ಹೊಸದೇನಲ್ಲ ಎಂದ ಚರಂತಿಮಠ, ನಾನು 57 ಸಾವಿರ ಸದಸ್ಯರನ್ನು ಮಾಡಿದ್ದೇನೆ. ದೇಶದ ಭಕ್ತಿಯನ್ನು ಪ್ರಚುರಪಡಿಸುವ ಕಾಶ್ಮೀರ್‌ ಫೈಲ್ಸ್‌ ಚಲನಚಿತ್ರವನ್ನು ಉಚಿತವಾಗಿ ಪ್ರದರ್ಶನ ಮಾಡಿದ್ದೇನೆ. ಹರ್‌ ಘರ್‌ ತಿರಂಗಾ ಅಭಿಯಾನಕ್ಕೆ 5 ಸಾವಿರ ರಾಷ್ಟ್ರಧ್ವಜ ವಿತರಿಸಿದ್ದೇನೆ. ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಚಲನಚಿತ್ರವನ್ನು ಉಚಿತವಾಗಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ್ದೇನೆ. ನನ್ನ ಪಕ್ಷದ ಪರ ಚಟುವಟಿಕೆಗಳು ಹೇಗೆ ಪಕ್ಷವಿರೋಧಿ ಚಟುವಟಿಕೆಗಳಾಗುತ್ತವೆ ಎಂದರು. ಈ ಸಂದರ್ಭದಲ್ಲಿ ಮುಖಂಡುಗಳಾದ ಸಂತೋಷ ಹೊಕ್ರಾಣಿ, ಗುರು ಅನಗವಾಡಿ, ಅರುಣ ಲೋಕಾಪುರ ಉಪಸ್ಥಿತರಿದ್ದರು.

ಯಾರೂ ಪಕ್ಷವನ್ನು ಒತ್ತೆ ಇಡಬೇಡಿ

ಬಾಗಲಕೋಟೆಯಲ್ಲಿರುವ ಒಂದು ಕೆಟ್ಟಹುಳುವಿನ ಮಾತು ಕೇಳಿ ಯಾರೂ ಪಕ್ಷವನ್ನು ಒತ್ತೆ ಇಡಬೇಡಿ. ದನದ ಆಸ್ಪತ್ರೆಯಲ್ಲಿಯೂ ಗೌರವಯುತ ನಡವಳಿಕೆಗಳಿರುತ್ತವೆ. ಆದರೆ, ಬಾಗಲಕೋಟೆಯಲ್ಲಿ ಇರುವ ಕೆಟ್ಟಹುಳು (ಕಟ್ಟಿಗೆಗೆ ಹತ್ತಿದ ಗೊರವಲ ಹುಳು) ತನ್ನ ಸುತ್ತಲಿರುವ ಎಲ್ಲರನ್ನೂ ಹಾಳು ಮಾಡುತ್ತಿದ್ದು, ಆ ಹುಳುವಿನ ಕುರಿತು ಸದ್ಯದಲ್ಲಿಯೇ ಬಹಳಷ್ಟುವಿಚಾರ ಹಂಚಿಕೊಳ್ಳುವೆ ಎಂದು ಯಾರ ಹೆಸರನ್ನು ಪ್ರಸ್ತಾಪಿಸದೇ ಮಾರ್ಮಿಕವಾಗಿ ಮಲ್ಲಿಕಾರ್ಜುನ ಚರಂತಿಮಠ ಹೇಳಿದರು.
 

Latest Videos
Follow Us:
Download App:
  • android
  • ios