ಬೆಂಗಳೂರು, (ಜೂನ್.13): ರಾಜ್ಯಸಭಾ ಚುನಾವಣೆ ಮುಗಿಯುತ್ತಿದ್ದಂತೆಯೇ ಇದೀಗ ರಾಜ್ಯದಲ್ಲಿ ವಿಧಾನಪರಿಷತ್ ಚುನಾವಣೆ ಕಣ ರಂಗೇರಿದೆ.

ಇದೇ ಜೂನ್ 29ರಂದು 7 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಮೂರು ಪಕ್ಷಗಳಲ್ಲಿ ಟಿಕೆಟ್‌ಗಾಗಿ ಭರ್ಜರಿ ಲಾಬಿ ಶುರುವಾಗಿದೆ. ಇನ್ನು ಮುಖ್ಯವಾಗಿ ಜೆಡಿಎಸ್‌ಗೆ ಸಿಗುವ ಒಂದು ಸ್ಥಾನಕ್ಕೆ ಭಾರೀ ಪೈಪೋಟಿ ಶುರುವಾಗಿದ್ದು, ಇದರ ಮಧ್ಯೆ  ಜೆಡಿಎಸ್ ವಲಯದಲ್ಲಿ ಒಂದು ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. 

ದೇವೇಗೌಡ್ರಗಾಗಿ ಸೀಟು ತ್ಯಾಗ ಮಾಡಲು ಸಿದ್ಧ ಎಂದ ಹಾಲಿ ರಾಜ್ಯಸಭಾ ಸದಸ್ಯ

ಕುಪೇಂದ್ರ ರೆಡ್ಡಿಗೆ ಪರಿಷತ್ ಟಿಕೆಟ್

ಹೌದು...ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರಿಗೆ ರಾಜ್ಯಸಭಾ ಸ್ಥಾನ ಬಿಟ್ಟುಕೊಟ್ಟ ಕುಪೇಂದ್ರ ರೆಡ್ಡಿಗೆ ಜೆಡಿಎಸ್ ವಿಧಾನಪರಿಷತ್ ಟಿಕೆಟ್ ಸಿಗುವುದು ಸಾಧ್ಯತೆಗಳು ಹೆಚ್ಚಿವೆ ಎನ್ನಲಾಗುತ್ತಿದೆ.

ಈ ಹಿಂದೆ ಕುಪೇಂದ್ರ ರೆಡ್ಡಿ ಅವರು ರಾಜ್ಯಸಭೆ ಸದಸ್ಯರಾಗಿದ್ದರು. ಅವಧಿ ಮುಗಿದ ನಂತರ ಮೊತ್ತಮ್ಮೆ ಅವಕಾಶ ಕೇಳಿದ್ದರು. ಆದ್ರೆ, ದೇವೇಗೌಡ ಅವರು ಸ್ಪರ್ಧಿಸಲು ಒಪ್ಪಿದ್ದರಿಂದ ಸ್ಥಾನ ತ್ಯಾಗ ಮಾಡಿದರು. 

ಈ ಹಿನ್ನೆಲೆಯಲ್ಲಿ ಕುಪೇಂದ್ರ ರೆಡ್ಡಿ ಅವರನ್ನ ವಿಧಾನಪರಿಷತ್‌ಗೆ ಕಳುಹಿಸಲು ಜೆಡಿಎಸ್‌ ಮುಂದಾಗಿದ್ದು, ಸೋಮವಾರ ನಡೆಯಲಿರುವ ಜೆಡಿಎಸ್‌ ಶಾಸಕಾಂಗ ಸಭೆಯಲ್ಲಿ ಅಂತಿಮಗೊಳಿಸಿ ಬಳಿಕ ಅಧಿಕೃತ ಘೋಷಣೆ ಮಾಡುವ ಸಾಧ್ಯತೆಗಳಿವೆ.

"

ಮತ್ತೊಂದೆಡೆ ಹಾಲಿ ಸದಸ್ಯ ಸರವಣ ಅವರೂ ಕೂಡ ಮತ್ತೊಮ್ಮೆ ವಿಧಾನಪರಿಷತ್‌ ಟಿಕೆಟ್ ಕೊಡಿ ಎಂದು ಜೆಡಿಎಸ್ ವರಿಷ್ಠರಲ್ಲಿ ಮನವಿ ಮಾಡಿದ್ರೆ, ಬೆಂಗಳೂರು ಮಹಾನಗರ ಜೆಡಿಎಸ್ ಅಧ್ಯಕ್ಷ ಆರ್.ಪ್ರಕಾಶ್ ಕೂಡ ವಿಧಾನಪರಿಷತ್ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಇನ್ನು ಕಳೆದ ಬಾರಿ ಮಾಜಿ ಶಾಸಕ ವೈ.ಎಸ್‌.ವಿ ದತ್ತಾ ಅವರಿಗೆ ಪರಿಷತ್ ಟಿಕೆಟ್ ಕೈತಪ್ಪಿದ್ದರಿಂದ ಭಾರೀ ಆಕ್ರೋಶಗಳು ವ್ಯಕ್ತವಾಗಿದ್ದವು. ಇದರಿಂದ ಈ ಬಾರಿ ಮಣೆ ಹಾಕಿದ್ರೂ ಅಚ್ಚರಿ ಪಡಬೇಕಿಲ್ಲ.

ಈ ಏಳು ಸ್ಥಾನಗಳ ಪೈಕಿ ಸದ್ಯದ ವಿಧಾನಸಭೆ ಬಲಾಬಲದ ಆಧಾರದ ಮೇಲೆ ಬಿಜೆಪಿಗೆ 4 ಸ್ಥಾನ ಸಿಗುವುದು ಖಚಿತವಾಗಿದೆ. ಕಾಂಗ್ರೆಸ್​ಗೆ 2 ಸ್ಥಾನ ಸಿಗಬಹುದು. ಜೆಡಿಎಸ್​ಗೆ ಒಂದು ಸ್ಥಾನ ಸಿಗಲಿದೆ.  ಇನ್ನು ನಾಮಪತ್ರ ಸಲ್ಲಿಕೆ ಮಾಡಲು ಇದೇ ಜೂನ್ 18 ಕೊನೆಯ ದಿನವಾಗಿದ್ದು, ಜೂನ್ 29 ಎಲೆಕ್ಷನ್ ನಡೆಯಲಿದೆ.