ನವದೆಹಲಿ(ಜು.10): ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ಗೆ ಇಂದು 69ನೇ ಹುಟ್ಟುಹಬ್ಬ. ಹೀಗಿರುವಾಗ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕರ ಗಣ್ಯರು ರಾಜನಾಥ್‌ ಸಿಂಗ್‌ಗೆ ಶುಭ ಕೋರಿದ್ದಾರೆ. ಆದರೆ ಈ ಎಲ್ಲಾ ಶುಭಾಶಯಗಳ ನಡುವೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ನಾಯಕ ಎಚ್. ಡಿ. ದೇವೇಗೌಡರ ಶುಭಾಶಯ ಕನ್ನಡಿಗರ ಗಮನ ಸೆಳೆದಿದೆ.

ಹೌದು ಮಾಜಿ ಪ್ರಧಾನಿ ದೇವೇಗೌಡರು ರಕ್ಷಣಾ ಸಚಿವರಿಗೆ ಕನ್ನಡದಲ್ಲೇ ಹುಟ್ಟುಹಬ್ಬದಶುಭಾಶಯ ಕೋರಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ದೇವೇಗೌಡರು 'ರಾಜನಾಥ್‌ ಸಿಂಗ್‌ಜೀ ನಿಮ್ಮ ಜೀವನ ಸದಾ ಸುಖ, ಸಂತೋಷ, ಶಾಂತಿ, ನೆಮ್ಮದಿ, ಆರೋಗ್ಯ ಮತ್ತು ಯಶಸ್ಸಿನಿಂದ ಕೂಡಿರಲಿ ಎಂದು ಆಶಿಸುವೆ' ಎಂದು ಬರೆದಿದ್ದಾರೆ.

ಕನ್ನಡದಲ್ಲೇ ಧನ್ಯವಾದ ಎಂದ ರಕ್ಷಣಾ ಸಚಿವ

ಇನ್ನು ದೇವೇಗೌಡರ ಶುಭಾಶಯದ ಈ ಟ್ವೀಟ್‌ಗೆ ರಾಜನಾಥ್‌ ಸಿಂಗ್‌ ಕೂಡಾ 'ಧನ್ಯವಾದಗಳು ನಿಮ್ಮ ಶುಭ ಹಾರೈಕೆಗಳಿಗೆ..' ಎಂದು ಕನ್ನಡದಲ್ಲೇ ಉತ್ತರಿಸಿದ್ದಾರೆ. ಒಟ್ಟಾರೆಯಾಗಿ ಕನ್ನಡದ ಈ ಶುಭಾಶಯ ಸದ್ಯ ಕರ್ನಾಟಕ ಮಂದಿಗೆ ಖುಷಿ ಕೊಟ್ಟಿದೆ.