ನನ್ನ ಕ್ಷೇತ್ರಕ್ಕೆ ಸರ್ಕಾರದಿಂದ ಅನುದಾನವೂ ಬಂದಿರಲಿಲ್ಲ. ಇತ್ತೀಚೆಗೆ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಅವರ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಿದ ಕಾರಣಕ್ಕೆ ಮೋದಿ ಕಾರ್ಯಕ್ರಮಕ್ಕೆ ಆಹ್ವಾನವಿಲ್ಲ ಎಂದು ಹೇಳಿದ ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್‌ 

ಬೆಂಗಳೂರು(ಆ.27):  ಕಾಂಗ್ರೆಸ್‌ನತ್ತ ದೃಷ್ಟಿಹಾಯಿಸಿರುವ ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್‌ ಅವರು ಪಕ್ಷದ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳನ್ನು ಹೊಗಳಿ ಮಾತನಾಡಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋಗೆ ಆಗಮಿಸುವ ವೇಳೆ ತಮ್ಮನ್ನು ಆಹ್ವಾನಿಸಿಲ್ಲ ಎಂದು ಬೇಸರದಿಂದ ಹೇಳಿದ್ದಾರೆ.

ಕ್ಷೇತ್ರದಲ್ಲಿನ ಹೆಮ್ಮಿಗೆಪುರದಲ್ಲಿ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಂದ್ರಯಾನ-3 ಯಶಸ್ವಿ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಹೇಳುವುದಕ್ಕೆ ಪ್ರಧಾನಿ ನರೇಂದ್ರ ಬೆಂಗಳೂರಿಗೆ ಆಗಮಿಸಿದ್ದರು. ಅಲ್ಲಿಗೆ ತೆರಳುವುದಕ್ಕಾಗಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಸಾರ್ವಜನಿಕರಿಗೆ ಬಸ್‌ ವ್ಯವಸ್ಥೆ ಮಾಡಿಕೊಡುವಂತೆ ಪಕ್ಷದಿಂದ ಸೂಚನೆ ನೀಡಲಾಗಿತ್ತು. ಅದರಂತೆ ಬಸ್‌ ವ್ಯವಸ್ಥೆ ಮಾಡಿಕೊಟ್ಟಿದ್ದೇನೆ. ಆದರೆ, ನನಗೆ ಯಾವುದೇ ಆಹ್ವಾನ ನೀಡಲಿಲ್ಲ ಎಂದರು.

ಲೋಕಸಭೆಗೆ ಸ್ಪರ್ಧಿಸುವ ಹುಚ್ಚಿಲ್ಲ: ಶಾಸಕ ಎಸ್‌.ಟಿ.ಸೋಮಶೇಖರ್‌

ನೀವು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳನ್ನು ಹೊಗಳಿದ್ದಕ್ಕೆ ಕರೆದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹೌದು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೂರು ತಿಂಗಳವರೆಗೆ ಶಾಸಕನಾಗಿ ಅವರನ್ನು ಭೇಟಿ ಮಾಡಿರಲಿಲ್ಲ. ಹೀಗಾಗಿ, ನನ್ನ ಕ್ಷೇತ್ರಕ್ಕೆ ಸರ್ಕಾರದಿಂದ ಅನುದಾನವೂ ಬಂದಿರಲಿಲ್ಲ. ಇತ್ತೀಚೆಗೆ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಅವರ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಿದ ಕಾರಣಕ್ಕೆ ಮೋದಿ ಕಾರ್ಯಕ್ರಮಕ್ಕೆ ಆಹ್ವಾನವಿಲ್ಲ ಎಂದು ಹೇಳಿದರು.

ಘರ್‌ ವಾಪ್ಸಿ ಸುಳಿವು?

- ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದಿದ್ದ ಎಸ್‌.ಟಿ.ಸೋಮಶೇಖರ್‌ ಮತ್ತೆ ಕಾಂಗ್ರೆಸ್‌ ಸೇರುತ್ತಾರೆಂದು ಇತ್ತೀಚೆಗೆ ಗುಸುಗುಸು
- ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಬಂದಿದ್ದ ಎಸ್‌ಟಿಎಸ್‌
- ಈಗ ಡಿ.ಕೆ.ಶಿವಕುಮಾರ್‌ ಜತೆ ಜನಸ್ಪಂದನೆ ಕಾರ‍್ಯಕ್ರಮದಲ್ಲಿ ಭಾಗಿ
- ಈ ಹಿಂದೆಯೂ ಕೆಲವು ಬಾರಿ ಬಿಜೆಪಿ ವಿರುದ್ಧ ಮಾತಾಡಿದ್ದ ಶಾಸಕ
- ಈಗ ಮತ್ತೆ ಬಹಿರಂಗವಾಗಿ ಬಿಜೆಪಿ ವಿರುದ್ಧ ಮಾತು: ಬೇಸರದ ಸುಳಿವು