*  ನಾನು ಗೆಲ್ಲುತ್ತೇನೆ, ಆದ್ದರಿಂದಲೇ ಹಲವು ಕ್ಷೇತ್ರಗಳಿಂದ ಆಹ್ವಾನ*  ನಮ್ಮ ಪಕ್ಷದಲ್ಲಿ ಯಾರೂ ನನ್ನನ್ನು ಸೋಲಿಸಲು ಪ್ರಯತ್ನಿಸುತ್ತಿಲ್ಲ*  ಬಿಜೆಪಿ, ಜೆಡಿಎಸ್‌ನ ಹಲವರು ಕಾಂಗ್ರೆಸ್‌ ಸಂಪರ್ಕದಲ್ಲಿ 

ಬೆಂಗಳೂರು(ಜೂ.16): ನನ್ನ ರಾಜಕೀಯ ಬೆಳವಣಿಗೆ ಸಹಿಸದವರು ಹಾಗೂ ಹೊಟ್ಟೆಕಿಚ್ಚು ಪಡುವವರು ಸೋಲಿಸಲು ಪ್ರಯತ್ನ ಮಾಡುತ್ತಾರೆ. ಕಾಲು ಎಳೆಯುವವರು ಇದ್ದೇ ಇರುತ್ತಾರೆ, ಅದು ಸಹಜ. ಆದರೆ, ಜನರು ನನ್ನ ಕೈಬಿಡುವುದಿಲ್ಲ. ನಾನು ಗೆಲ್ಲುತ್ತೇನೆ. ಈ ಕಾರಣಕ್ಕಾಗಿಯೇ ಹಲವು ಕ್ಷೇತ್ರಗಳಿಂದ ಸ್ಪರ್ಧಿಸಲು ನನ್ನನ್ನು ಕರೆಯುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾರ ಕಂಡರೆ ಭಯ ಇರುತ್ತದೆಯೋ ಅವರ ಕಾಲೆಳೆಯಲು ಪ್ರಯತ್ನ ನಡೆಯುತ್ತಿರುತ್ತದೆ. ಆದರೆ, ಇಂತಹವರು ನಮ್ಮ ಪಕ್ಷದಲ್ಲಿ ಇಲ್ಲ. ಪ್ರತಿಪಕ್ಷಗಳಲ್ಲಿ ಇದ್ದಾರೆ ಎಂದರು. ನಮ್ಮ ಪಕ್ಷದಲ್ಲಿ ಎಲ್ಲರೂ ನನ್ನನ್ನು ಅಭಿಮಾನದಿಂದ ಕಾಣ್ತಾರೆ, ಎಲ್ಲರೂ ನನ್ನನ್ನು ಪ್ರೀತಿಸುತ್ತಾರೆ. ನಮ್ಮ ಪಕ್ಷದಲ್ಲಿ ಯಾರೂ ನನ್ನ ವಿರೋಧಿಗಳಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಯಾವುದೇ ಸಂದರ್ಭದಲ್ಲಿ ನನ್ನನ್ನ ಚರ್ಚೆಗೆ ಕರೆಯಲಿ: ಪ್ರತಾಪ್‌ ಸಿಂಹ

ನನ್ನ ಬೆಂಬಲಿಸಿ ಬಿಜೆಪಿಯವರ ವಿರುದ್ಧ ನಮ್ಮ ಪಕ್ಷದವರೇ ಮಾತನಾಡಲ್ಲ ಎಂದು ಮೈಸೂರಿನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಿರಿ ಎಂಬ ಪ್ರಶ್ನೆಗೆ, ಬಿಜೆಪಿಯವರಂತೆ ನಮ್ಮ ಪಕ್ಷದವರು ಮಾತನಾಡಲ್ಲ ಎಂದು ನಾನು ಈ ಹಿಂದೆ ಹೇಳಿದ್ದೆ. ನಾನು ಏನಾದ್ರೂ ಮಾತನಾಡಿದ್ರೆ ಇಪ್ಪತ್ತು ಜನ ಬಿಜೆಪಿಯವರು ನನ್ನ ಮೇಲೆ ಬರ್ತಾರೆ. ಈ ರೀತಿ ನಮ್ಮವರು ಮಾತನಾಡಲ್ಲ ಎಂದು ಹೇಳಿದ್ದೆ ಅಷ್ಟೆ. ಬಿಜೆಪಿಯವರು ಸುಳ್ಳು ಹೇಳೋದರಲ್ಲಿ ಮೊದಲಿಗರು. ನಮ್ಮವರಿಗೆ ಸುಳ್ಳು ಹೇಳುವುದು ಗೊತ್ತಿಲ್ಲ ಎಂದು ಹೇಳಿದರು.

ಇನ್ನು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತೀರಿ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೋಲಾರ, ಬಾದಾಮಿ, ಕೊಪ್ಪಳ, ವರುಣಾ, ಚಾಮರಾಜಪೇಟೆ ಈ ಎಲ್ಲಾ ಕಡೆ ನನಗೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕರೆಯುತ್ತಿದ್ದಾರೆ. ಹತ್ತಾರು ಕಡೆ ಜನ ಕರೆಯುತ್ತಿದ್ದಾರೆ ಎಂದರೆ ನಾನು ಗೆಲ್ಲುತ್ತೇನೆ ಎಂದೇ ತಾನೇ ಕರೆಯುತ್ತಿರೋದು ಎಂದು ಮರು ಪ್ರಶ್ನೆ ಮಾಡಿದರು.

ಬಿಜೆಪಿ, ಜೆಡಿಎಸ್‌ನ ಹಲವರು ಕಾಂಗ್ರೆಸ್‌ ಸಂಪರ್ಕದಲ್ಲಿ

ಬಿಜೆಪಿ ಹಾಗೂ ಜೆಡಿಎಸ್‌ನ ಹಲವರು ನಮ್ಮ ಸಂಪರ್ಕದಲ್ಲಿದ್ದಾರೆ. ಚುನಾವಣೆ ಹೊತ್ತಿಗೆ ನಮ್ಮ ಪಕ್ಷಕ್ಕೆ ಬರುತ್ತಾರೆ. ನಮ್ಮ ಪಕ್ಷ ಮುಂದಿನ ಚುನಾವಣೆಯಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್‌ನವರು ನನ್ನ ಸಂಪರ್ಕದಲ್ಲಿ ಇರೋದು ನಿಜ. ಆ ಬಗ್ಗೆ ಪೂರ್ಣ ಪ್ರಮಾಣದಲ್ಲಿ ಈಗಲೇ ಹೇಳೋಕಾಗಲ್ಲ. ಮುಂದೆ ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇನೆ ಎಂದರು.