Asianet Suvarna News Asianet Suvarna News

ಆರೆಸ್ಸೆಸ್‌ ಮೊದಲು ತನ್ನ ಶಾಖೆಗಳಲ್ಲಿ ರಾಷ್ಟ್ರಧ್ವಜ ಹಾರಿಸಲಿ: ಸಿದ್ದರಾಮಯ್ಯ

ಮೊದಲು ಹಿಟ್ಲರ್‌ನ ಆದರ್ಶ ಬಿಟ್ಟು ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯ ಎತ್ತಿ ಹಿಡಿಯಿರಿ: ಸಿದ್ದು

Former CM Siddaramaiah Slams to RSS grg
Author
Bengaluru, First Published Aug 6, 2022, 4:00 AM IST

ಬೆಂಗಳೂರು(ಆ.06):  ‘ಪವಿತ್ರವಾದ ಈ ನೆಲದಲ್ಲಿ ಯಾವುದು ಸಹಜವೂ, ಗೌರವಯುತವೂ ಆದ ವಿಷಯಗಳಿವೆಯೋ ಅವನ್ನೆಲ್ಲಾ ಗಿಮಿಕ್‌ ಆಗಿ ಬಳಸಿಕೊಳ್ಳುವುದು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ದುಷ್ಟತಂತ್ರದ ಭಾಗ. ಮೊದಲು ಹಿಟ್ಲರ್‌ನ ಆದರ್ಶ ಬಿಟ್ಟು ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯ ಎತ್ತಿ ಹಿಡಿಯಿರಿ. ಆಗ ಮಾತ್ರ ರಾಷ್ಟ್ರಧ್ವಜ ಹಾರಿಸಿ ಎಂದು ಜನರಿಗೆ ಕರೆ ಕೊಡುವ ನೈತಿಕತೆ ಬರುತ್ತದೆ’ ಎಂದು ಕೇಂದ್ರ ಬಿಜೆಪಿ ಸರ್ಕಾರಕ್ಕೆ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಇದೇ ವೇಳೆ, ‘ಧ್ವಜ ಹಾರಿಸಲು ಕರೆ ಕೊಡುವ ಮೊದಲು, ಹತ್ತಿ ಮತ್ತು ರೇಷ್ಮೆಯಿಂದ ಸಿದ್ಧಪಡಿಸಿದ ಧ್ವಜಗಳನ್ನು ಬಳಸಬೇಕು ಎಂಬುದನ್ನು ಮುಂದುವರೆಸಿ. ಇದರಿಂದ ರೈತರಿಗೆ, ನೇಕಾರರಿಗೆ ಅನುಕೂಲವಾಗುತ್ತದೆ. ಅದನ್ನು ಬಿಟ್ಟು ಧ್ವಜ ತಯಾರಿಯನ್ನೂ ಲಾಭದಾಯಕ ದಂಧೆ ಎಂದು ತಿಳಿದು ಅಂಬಾನಿಗಳಂತಹ ಬೃಹತ್‌ ಉದ್ಯಮಿಗಳಿಗೆ ಅವಕಾಶ ಮಾಡಿಕೊಟ್ಟರೆ ಅಥವಾ ಚೀನಾದಿಂದ ಧ್ವಜಗಳನ್ನು ಆಮದು ಮಾಡಿಕೊಂಡರೆ, ಧ್ವಜದ ಆಕಾರ ವಿಕೃತಗೊಳಿಸಿ ಪಾಲಿಸ್ಟರ್‌ ಬಟ್ಟೆಯಲ್ಲಿ ತಯಾರಿಸಿದರೆ ಅದು ದುಷ್ಟತನದ ಪರಮಾವಧಿಯಾಗುತ್ತದೆ’ ಎಂದು ಕಿಡಿ ಕಾರಿದ್ದಾರೆ.

ಶಾ ಭಾಗವಹಿಸಿದ್ದ 'ಸಂಕಲ್ಪ ಸಿದ್ಧಿ' ಕಾರ್ಯಕ್ರಮ ಬ್ಯಾನರ್ ಫುಲ್ ಹಿಂದಿಮಯ, ಸಿದ್ದು ಕಿಡಿ

ಆರ್‌ಎಸ್‌ಎಸ್‌ ಕಚೇರಿಗಳ ಮೇಲೆ ಕಡ್ಡಾಯವಾಗಿ ಹಾರಿಸಿ:

‘ಹರ್‌ ಘರ್‌ ತಿರಂಗಾ’ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಇತಿಹಾಸ ಗೊತ್ತಿರುವವರಿಗೆ ಈ ಹೊಸ ವರಸೆ ಪ್ರಾಮಾಣಿಕವಾದದ್ದು ಅಲ್ಲವೆಂದು ಗೊತ್ತಿದೆ. ಆರ್‌ಎಸ್‌ಎಸ್‌ ತೀರಾ ಇತ್ತೀಚಿನವರೆಗೂ ನಾಗಪುರದ ತಮ್ಮ ಕಚೇರಿಯ ಮೇಲೆ ಧ್ವಜ ಹಾರಿಸಿರಲಿಲ್ಲ. ಬಲವಂತವಾಗಿ ಇಬ್ಬರು ಯುವಕರು ಅವರ ಕಚೇರಿಗೆ ನುಗ್ಗಿ ಧ್ವಜ ಹಾರಿಸಿದ ಮೇಲೆ ಆರ್‌ಎಸ್‌ಎಸ್‌ ಕೇಂದ್ರ ಕಚೇರಿಯ ಮೇಲೆ ರಾಷ್ಟ್ರ ಧ್ವಜ ಹಾರಿಸಲು ಪ್ರಾರಂಭಿಸಿದರು. ಹೀಗಾಗಿ ಆರ್‌ಎಸ್‌ಎಸ್‌ ದೇಶದ ಜನರಿಗೆ ಧ್ವಜ ಹಾರಿಸಿ ಎಂದು ಹೇಳುವ ಮೊದಲು ಕಡ್ಡಾಯವಾಗಿ ತಮ್ಮ ಪ್ರತಿ ಶಾಖೆಗಳಲ್ಲೂ, ಕೇಶವ ಕೃಪಾದಂತಹ ಕಚೇರಿಗಳಲ್ಲಿ ರಾಷ್ಟ್ರಧ್ವಜ ಹಾರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಬಹಿರಂಗ ಕ್ಷಮೆ ಕೇಳಿ:

ತ್ರಿವರ್ಣಧ್ವಜವು ಅಪಶಕುನದ ಸಂಕೇತ ಎಂದು ಅಪಪ್ರಚಾರ ಮಾಡಿ ಆರ್ಗನೈಸರ್ಸ್‌ ಪತ್ರಿಕೆಯಲ್ಲಿ ಬರೆದಿರುವ ಬರಹಗಳನ್ನು ಹಿಂಪಡೆದು ದೇಶದ ಜನರಲ್ಲಿ ಬಹಿರಂಗ ಕ್ಷಮೆ ಕೇಳಬೇಕು. ಆರ್‌ಎಸ್‌ಎಸ್‌ ಪರಿವಾರದ ಜನಸಂಘ, ಬಿಜೆಪಿ ಇತರೆ ಸಂಘಟನೆಗಳು ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಬಗ್ಗೆ ವ್ಯಕ್ತಪಡಿಸಿರುವ ಅಸಮರ್ಪಕ ಅಭಿಪ್ರಾಯಗಳಿಗೆ ಕ್ಷಮೆ ಕೇಳಬೇಕು. ಪ್ರಜಾತಂತ್ರದ ಉದಾತ್ತ ಮೌಲ್ಯಗಳನ್ನು ಎತ್ತಿ ಹಿಡಿಯುತ್ತೇವೆಂದು ಹಾಗೂ ಬಗಲಲ್ಲಿ ವಿಷ ಇಟ್ಟುಕೊಂಡು ದೇಶದ ಜನರನ್ನು ಮರುಳು ಮಾಡುವುದಿಲ್ಲವೆಂದು ಬಹಿರಂಗವಾಗಿ ಪ್ರಮಾಣ ಮಾಡಿ ರಾಷ್ಟ್ರ ಧ್ವಜವನ್ನು ಹಾರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
 

Follow Us:
Download App:
  • android
  • ios