ಮೈಸೂರು(ಜು.31): ಭೂಸುಧಾರಣಾ ಕಾಯ್ದೆ ಜಾರಿಗೆ ತರುವ ಮೂಲಕ ಜಹಾಗೀರ್‌ದಾರ್‌ ಪದ್ಧತಿಯನ್ನು ಮತ್ತೊಮ್ಮೆ ತಂದು ರೈತರನ್ನು ಗುಲಾಮರನ್ನಾಗಿಸಲು ಸರ್ಕಾರ ಮುಂದಾಗಿದೆ. ಕಾಂಗ್ರೆಸ್‌ ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ತಂದರೆ, ಬಿಜೆಪಿಯವರು ಉಳ್ಳವನೇ ಭೂನಿಯ ಒಡೆಯ ಎಂಬ ಕಾನೂನನ್ನು ತರಲು ಹೊರಟಿದೆ ಎಂದು ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜಿಲ್ಲಾ ಪತ್ರಕರ್ತರ ಸಂಘ ಗುರುವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಸರ್ಕಾರ ಬಂಡವಾಳಶಾಹಿ ಮತ್ತು ರಿಯಲ್‌ ಎಸ್ಟೇಟ್‌ ಏಜೆಂಟರ ಲಾಬಿಗೆ ಮಣಿದಿದೆ ಎಂದು ಆರೋಪಿಸಿದರು.

ಯೋಧರು, ರೈತರು ದೇಶದ ಎರಡು ಕಣ್ಣುಗಳಿದ್ದಂತೆ: ಶಾಸಕ ರೇಣುಕಾಚಾರ್ಯ

ಸರ್ಕಾರದ ಒಂದು ವರ್ಷದ ಸಾಧನೆ ಶೂನ್ಯವಾಗಿದ್ದು ಖಾಲಿ ಡಬ್ಬ ಅಲ್ಲಾಡಿಸಿದಂತೆ ಎಲ್ಲಾ ಪತ್ರಿಕೆಗಳಿಗೆ ಜಾಹೀರಾತು ನೀಡಿದ್ದಾರೆ. ತಮ್ಮ ಸಾಧನೆ ಮಾಡಿರುವುದಾಗಿ ಹೇಳಿಕೊಂಡಿರುವ ವಿಷಯದ ಪಕ್ಕ 2018ರಲ್ಲಿ ಅವರ ನೀಡಿದ್ದ ಪ್ರಣಾಳಿಕೆಯನ್ನು ಮುದ್ರಿಸಬೇಕಿತ್ತು. ಆ ಪೈಕಿ ಎಷ್ಟುಆಶ್ವಾಸನೆ ಈಡೇರಿಸಿದ್ದಾರೆ ಎಂಬುದು ತಿಳಿಯುತ್ತಿತ್ತು. ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿ ಮಾಡಲೇ ಇಲ್ಲ ಎಂದು ಆರೋಪಿಸಿದರು.

ಭೂ ಸುಧಾರಣಾ ಕಾಯ್ದೆ: ಆಹಾರ ಭದ್ರತೆಗೆ ಪೆಟ್ಟು!

ರಾಜ್ಯದಲ್ಲಿ ಮಾ.9ರಂದು ಕಲಬುರಗಿಯಲ್ಲಿ ಮೊದಲ ಕೊರೋನಾ ಪ್ರಕರಣ ಕಾಣಿಸಿಕೊಂಡ ಬಳಿಕ ಮೂರು ತಿಂಗಳ ಕಾಲ ಸರ್ಕಾರದ ವಿರುದ್ಧ ಮಾತನಾಡದೆ ಸಹಕರಿಸಿದೆ. ನಂತರ ಭ್ರಷ್ಟಾಚಾರ ನಡೆದಿರುವುದು ಗೊತ್ತಾದ ಮೇಲೆ ವಿರೋಧಿಸಿದೆ ಮತ್ತು ಲೆಕ್ಕ ಕೇಳಿದೆ. ಇದನ್ನು ಅಸಹಾಕಾರ ಎಂದು ಹೇಳುತ್ತಾರೆ. ಆದರೆ ಮಧ್ಯಪ್ರದೇಶದಲ್ಲಿ ಕೊರೋನಾ ನಡುವೆಯೂ ಸರ್ಕಾರ ಬೀಳಿಸಿದ್ದಾರೆ. ರಾಜಸ್ಥಾನದಲ್ಲಿಯೂ ಅದೇ ನೀತಿ ಅನುಸರಿಸುತ್ತಿದ್ದಾರೆ. ಇವರು ಮಾಡುತ್ತಿರುವುದು ಏನು ಎಂದು ಪ್ರಶ್ನಿಸಿದರು.