ಬಿಜೆಪಿ ಮಾಡುತ್ತಿರುವುದು ವಿಜಯ ಸಂಕಲ್ಪ ಯಾತ್ರೆಯಲ್ಲ. ಭ್ರಷ್ಟಾಚಾರದ ಸಂಕಲ್ಪ ಯಾತ್ರೆ ಹಾಗೂ ಗುಜರಾತ್‌ನ ಅಂಬಾನಿ, ಅದಾನಿಗಳಿಗೆ ರಾಜ್ಯವನ್ನು ಅಡವಿಡಲು ನಡೆಸುತ್ತಿರುವ ಸಂಚಿನ ಯಾತ್ರೆ. 

ಬೆಂಗಳೂರು (ಮಾ.07): ‘ಬಿಜೆಪಿ ಮಾಡುತ್ತಿರುವುದು ವಿಜಯ ಸಂಕಲ್ಪ ಯಾತ್ರೆಯಲ್ಲ. ಭ್ರಷ್ಟಾಚಾರದ ಸಂಕಲ್ಪ ಯಾತ್ರೆ ಹಾಗೂ ಗುಜರಾತ್‌ನ ಅಂಬಾನಿ, ಅದಾನಿಗಳಿಗೆ ರಾಜ್ಯವನ್ನು ಅಡವಿಡಲು ನಡೆಸುತ್ತಿರುವ ಸಂಚಿನ ಯಾತ್ರೆ. ಇದಕ್ಕೆ 40 ಪರ್ಸೆಂಟ್‌ ಯಾತ್ರೆ ಎಂದು ಹೆಸರಿಟ್ಟರೆ ಸಾರ್ಥಕವಾಗುತ್ತದೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. 

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಿಜೆಪಿಯು ಯಾವ ಮುಖವನ್ನು ಹೊತ್ತುಕೊಂಡು ವಿಜಯ ಸಂಕಲ್ಪ ಯಾತ್ರೆ ಹೊರಟಿದೆ ಎಂದು ರಾಜ್ಯದ ಜನರಿಗೆ ತಿಳಿಸಬೇಕು. ಭ್ರಷ್ಟಾಚಾರದ ಸಂಕಲ್ಪದ ಜತೆಗೆ ಸುಳ್ಳು ಉತ್ಪಾದಿಸುವ ಹಾಗೂ ಹಂಚುವ ಯಾತ್ರೆ, ಕರ್ನಾಟಕದ ಚೈತನ್ಯವನ್ನೇ ನಾಶ ಮಾಡಲು ಹೊರಟಿರುವ ಯಾತ್ರೆ ಇದು ಎಂಬುದನ್ನು ಸ್ಪಷ್ಟಪಡಿಸಬೇಕು. 

ಜೆಡಿ​ಎಸ್‌ಗೆ ಕೊಟ್ಟ ಮತ ವೇಸ್ಟ್‌, ದುಡ್ಡಿದೆ ಅಂತ ಪಂಚರತ್ನ ಯಾತ್ರೆ ಮಾಡ್ತಿದ್ದಾರೆ: ಸಿದ್ದ​ರಾ​ಮಯ್ಯ

ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದ ಜನದ್ರೋಹ ಬಿಟ್ಟು ಬೇರೇನೂ ಮಾಡಿಲ್ಲ ಎಂದು ಟೀಕಿಸಿದ್ದಾರೆ. ಬಿಜೆಪಿ ಸರ್ಕಾರಗಳು ಒಂದೂ ಜನಪರ ಯೋಜನೆ ಜಾರಿಗೆ ತಂದಿಲ್ಲ. ಅಷ್ಟೇಕೆ ತಮ್ಮ ಪ್ರಣಾಳಿಕೆಯಲ್ಲಿ ಹೇಳಿರುವ ಆಶ್ವಾಸನೆಗಳಲ್ಲಿ ಶೇ.10ರಷ್ಟನ್ನೂ ಈಡೇರಿಸಿಲ್ಲ. ಆದರೂ ಯಾತ್ರೆ ಮಾಡಿಕೊಂಡು ಸುಳ್ಳು ಹೇಳುತ್ತಿದ್ದಾರೆ. ವಿವಿಧ ಯೋಜನೆಗಳ ಹೆಸರಿನಲ್ಲಿ ಜನರಿಗೆ ಬಿಜೆಪಿ ಟೋಪಿ ಹಾಕಿದ್ದು, ಕುರಿ ಕಾಯಲು ತೋಳ ಬಿಟ್ಟಂತಾದ ತಮ್ಮ ಸ್ಥಿತಿಗೆ ಜನರಲ್ಲಿ ಆಕ್ರೋಶ ಮಡುಗಟ್ಟಿದೆ. ಚುನಾವಣೆಗಾಗಿ ಅವರು ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಕಿಸಾನ್‌ ಸಮ್ಮಾನ್‌ ಯೋಜನೆ ಟೋಪಿ: ಕಿಸಾನ್‌ ಸಮ್ಮಾನ್‌ ಯೋಜನೆಯಲ್ಲೂ ಟೋಪಿ ಹಾಕಿದ್ದಾರೆ. ನಮ್ಮ ರಾಜ್ಯದಲ್ಲಿ ಸುಮಾರು 1.40 ಕೋಟಿ ಕುಟುಂಬಗಳಿವೆ. ಇವುಗಳಲ್ಲಿ 87 ಲಕ್ಷ ಕೃಷಿ ಹಿಡುವಳಿಗಳಿವೆ. ಕಿಸಾನ್‌ ಸಮ್ಮಾನ್‌ ಯೋಜನೆಯಡಿ 45-47 ಲಕ್ಷ ಹಿಡುವಳಿದಾರರಿಗೆ ಕೇಂದ್ರವು ವರ್ಷಕ್ಕೆ 6 ಸಾವಿರ ರು. ಕೊಡುತ್ತಿದೆ. ರಾಜ್ಯ ಸರ್ಕಾರ 4 ಸಾವಿರ ರು. ಕೊಡುತ್ತಿದೆ ಎಂದು ಹೇಳಿಕೊಳ್ಳುತ್ತಿವೆ. ಆದರೆ, ರಾಜ್ಯ ಸರ್ಕಾರ ಕೊಡುತ್ತಿರುವುದು 2 ಸಾವಿರ ರು. ಮಾತ್ರ. ಕೇಂದ್ರ ಸರ್ಕಾರವು ಹಲವು ಬಾರಿ ಹೇಳಿದಷ್ಟುಹಣ ನೀಡಿಲ್ಲ ಎಂದು ಹರಿಹಾಯ್ದರು.

ಬಿಜೆಪಿ 8 ಸಾವಿರ ರು. ನೀಡುತ್ತಿದೆ ಎಂದೇ ಇಟ್ಟುಕೊಳ್ಳೋಣ. ಆದರೆ ಬಿಜೆಪಿಯ ಸುಲಿಗೆ ಯಾವ ಪ್ರಮಾಣದಲ್ಲಿದೆ? 2014ರಲ್ಲಿ ವರ್ಷಕ್ಕೆ ಅಡುಗೆ ಅನಿಲಕ್ಕೆ 4,800 ರು. ವೆಚ್ಚವಾದರೆ ಇದೀಗ 13,500 ರು.ಗಳಿಂದ 14,000 ರು. ವೆಚ್ಚಾಗುತ್ತಿದೆ. ಕೇವಲ ಗ್ಯಾಸ್‌ ಸಿಲಿಂಡರ್‌ನಿಂದಲೇ 9 ಸಾವಿರ ರು. ಹೆಚ್ಚುವರಿಯಾಗಿ ಕೊಳ್ಳೆ ಹೊಡೆಯುತ್ತಿದ್ದಾರೆ. 4 ಎಕರೆ ಬೆಳೆಗೆ ಉಳುಮೆ ಮಾಡಲು 2014ರಲ್ಲಿ 8,460 ರು. ಆಗುತ್ತಿದ್ದ ವೆಚ್ಚ ಈಗ ಅಷ್ಟೇ ಭೂಮಿಗೆ 17,100 ರು. ತಗುಲುತ್ತಿದೆ. ಇದಲ್ಲದೆ ರಸಗೊಬ್ಬರ, ಬೂಸಾ ಎಲ್ಲವುಗಳ ಬೆಲೆ ಹೆಚ್ಚಳವಾಗಿ ಜನರನ್ನು ಸರ್ಕಾರ ದೋಚುತ್ತಿದೆ ಎಂದು ಟೀಕಿಸಿದ್ದಾರೆ.

ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಬೊಮ್ಮಾಯಿ ರಾಜೀನಾಮೆ ನೀಡಲಿ: ಯತೀಂದ್ರ ಸಿದ್ದರಾಮಯ್ಯ

ಕೊನೆಗೆ ಹಾಲು, ಮೊಸರು, ಮಜ್ಜಿಗೆ, ಎಳನೀರು, ಅಕ್ಕಿ, ಗೋಧಿ, ಪೆನ್ನು, ಪೇಪರು ಸೇರಿದಂತೆ ಎಲ್ಲದರ ಮೇಲೆ ತೆರಿಗೆ ವಿಧಿಸಿ ಲೂಟಿ ಮಾಡುತ್ತಿರುವ ಬಿಜೆಪಿ ಸರ್ಕಾರ ಜನರಿಗೆ ಏನು ಕೊಟ್ಟಿದೆ? ರಾಜ್ಯಾದ್ಯಂತ ತಲಾದಾಯ ಬೆಳವಣಿಗೆ ಪ್ರಮಾಣ ಕುಸಿದಿದೆ. ಇವೆಲ್ಲವನ್ನೂ ನಿಮ್ಮ ಯಾತ್ರೆಗಳಲ್ಲಿ ಹೇಳಿಕೊಳ್ಳಿ ಎಂದು ಬಿಜೆಪಿಯವರಿಗೆ ಟಾಂಗ್‌ ನೀಡಿದ್ದಾರೆ.