ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕಳಂಕ ತರಲು ವೈರಲ್ ಮಾಡಲಾದ ವಿಡಿಯೋ ಪ್ರಕರಣದ ತನಿಖೆಯನ್ನು ಸಿಸಿಬಿ ಚುರುಕುಗೊಳಿಸಿದೆ. ಐಪಿ ಅಡ್ರೆಸ್ ಆಧರಿಸಿ ಜೆಡಿಎಸ್ ಸಾಮಾಜಿಕ ಜಾಲತಾಣದ ಶಂಕರ್ ಸೇರಿದಂತೆ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಈ ಷಡ್ಯಂತ್ರದ ಅಸಲಿ ಸೂತ್ರಧಾರಿಯನ್ನು ಪತ್ತೆಹಚ್ಚಲು ಅಜ್ಞಾತ ಸ್ಥಳದಲ್ಲಿ ತೀವ್ರ ವಿಚಾರಣೆ ನಡೆಯುತ್ತಿದೆ.

ಬೆಂಗಳೂರು (ಅ.14): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಳಂಕ ತರುವ ಉದ್ದೇಶದಿಂದ ವಿಡಿಯೋವೊಂದನ್ನು ವೈರಲ್ ಮಾಡಿ ಷಡ್ಯಂತ್ರ ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ (CCB) ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಜೆಡಿಎಸ್ ಸಾಮಾಜಿಕ ಜಾಲತಾಣದಲ್ಲಿ ಕೆಲಸ ಮಾಡುವ ಶಂಕರ್ ಸೇರಿದಂತೆ ಮೂವರು ಶಂಕಿತರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಐಪಿ ಅಡ್ರೆಸ್ ಮೂಲಕ ಶಂಕಿತರ ಪತ್ತೆ:

ಸಾಮಾಜಿಕ ಜಾಲತಾಣಗಳಲ್ಲಿ ವಿವಾದಾತ್ಮಕ ವಿಡಿಯೋ ಅಪ್‌ಲೋಡ್ ಆಗಿದ್ದ ಸೋಶಿಯಲ್ ಮೀಡಿಯಾ ಅಕೌಂಟ್‌ನ ಐಪಿ ಅಡ್ರೆಸ್ (IP Address) ಅನ್ನು ಆಧರಿಸಿ ಪೊಲೀಸರು ತಾಂತ್ರಿಕ ತನಿಖೆ ನಡೆಸಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ವಿಡಿಯೋ ಅಪ್‌ಲೋಡ್ ಮಾಡಿದ್ದು ಯಾರು? ಈ ವಿಡಿಯೋವನ್ನು ಶಂಕಿತರಿಗೆ ನೀಡಿದ ಅಸಲಿ ಸೂತ್ರಧಾರಿ (Mastermind) ಯಾರು? ಎಂಬಿತ್ಯಾದಿ ಪ್ರಮುಖ ಮಾಹಿತಿಯನ್ನು ಕಲೆಹಾಕಲು ಸಿಸಿಬಿ ಅಧಿಕಾರಿಗಳು ಮುಂದಾಗಿದ್ದಾರೆ.

ಡಿಸಿಪಿ ನೇತೃತ್ವದಲ್ಲಿ ಅಜ್ಞಾತ ಸ್ಥಳದಲ್ಲಿ ವಿಚಾರಣೆ:

ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಕಮಿಷನರ್ ಅವರು ಸ್ವತಃ ತನಿಖೆಯ ಮೇಲ್ವಿಚಾರಣೆ (Monitoring) ಮಾಡುತ್ತಿದ್ದು, ಪ್ರತಿಕ್ಷಣದ ಅಪ್ಡೇಟ್ ಅನ್ನು ಪಡೆದುಕೊಳ್ಳುತ್ತಿದ್ದಾರೆ. ಆರಂಭದಲ್ಲಿ ಇಬ್ಬರು ಅಪ್ರಾಪ್ತರು ಸೇರಿದಂತೆ ಐವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಬಳಿಕ ಇಬ್ಬರು ಅಪ್ರಾಪ್ತರನ್ನು ವಿಚಾರಣೆ ನಡೆಸಿ ಕಳುಹಿಸಿರುವ ಪೊಲೀಸರು, ಉಳಿದ ಮೂವರು ಶಂಕಿತರನ್ನು ವಶಕ್ಕೆ ಪಡೆದು ಮುಂದುವರೆದ ವಿಚಾರಣೆ ನಡೆಸುತ್ತಿದ್ದಾರೆ.

ಡಿಸಿಪಿ (DCP) ರ್ಯಾಂಕ್ ಅಧಿಕಾರಿಯ ನೇತೃತ್ವದಲ್ಲಿ ಅಜ್ಞಾತ ಸ್ಥಳದಲ್ಲಿ ಈ ವಿಚಾರಣೆ ನಡೆಯುತ್ತಿದ್ದು, ಪೊಲೀಸರ ಖಡಕ್ ಪ್ರಶ್ನೆಗಳಿಗೆ ಶಂಕಿತರು ಸರಿಯಾಗಿ ಉತ್ತರಿಸದೆ ತರೆಮರೆಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ವಿಡಿಯೋದ ಹಿಂದೆ ಪ್ರಮುಖ ರಾಜಕೀಯ ವ್ಯಕ್ತಿಗಳ ಕೈವಾಡವಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಈ ಕೃತ್ಯದ ಅಸಲಿ ರೂವಾರಿಗಳನ್ನು ಪತ್ತೆ ಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.