Asianet Suvarna News Asianet Suvarna News

Karnataka Politics: ಟಿಕೆಟ್‌ ಕೊಟ್ಟೆ, ಟೋಪಿ ಹಾಕಿ ಹೋದ: ಕುಮಾರಸ್ವಾಮಿ

*   ಮಹಾಲಕ್ಷ್ಮೀ ಲೇಔಟ್‌ನಲ್ಲಿ ಜನತಾ ಜಲಧಾರೆ
*  ಸಚಿವ ಗೋಪಾಲಯ್ಯಗೆ ಎಚ್‌ಡಿಕೆ ಟಾಂಗ್‌
*  ಬಿಜೆಪಿ ಸರ್ಕಾರ ಬಿಬಿಎಂಪಿ ಚುನಾವಣೆ ಮಾಡುವುದಿಲ್ಲ. ಅವರಿಗೆ ಅಷ್ಟು ಧೈರ್ಯ ಇಲ್ಲ
 

Former CM HD Kumaraswamy Slams on Minister K Gopalaiah grg
Author
Bengaluru, First Published May 11, 2022, 4:49 AM IST

ಬೆಂಗಳೂರು(ಮೇ.11):  ನಗರದ ಮಹಾಲಕ್ಷ್ಮೀ ಲೇಔಟ್‌ ಕ್ಷೇತ್ರದ ಮಹಾನುಭಾವನಿಗೆ ಎರಡು ಬಾರಿ ಟಿಕೆಟ್‌ ಕೊಟ್ಟೆ. ನನಗೆ ಟೋಪಿ ಹಾಕಿ ಹೋದ ಎಂದು ಅಬಕಾರಿ ಸಚಿವ ಗೋಪಾಲಯ್ಯ(K Gopalaiah) ಹೆಸರು ಪ್ರಸ್ತಾಪಿಸದೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ವಾಗ್ದಾಳಿ ನಡೆಸಿದ್ದಾರೆ.

ಮಂಗಳವಾರ ಸಂಜೆ ಮಹಾಲಕ್ಷ್ಮೀ ಲೇಔಟ್‌ನಲ್ಲಿ ಜನತಾ ಜಲಧಾರೆ(Janata Jaladhare) ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ವಾಮಿಜಿಯೊಬ್ಬರು ಏನೋ ತಪ್ಪು ಮಾಡಿಕೊಂಡಿದ್ದಾನೆ. ಒಂದು ಬಾರಿ ಟಿಕೆಟ್‌ ಕೊಡಿ ಎಂದಿದ್ದರು. ಅವರ ಸಲಹೆ ಮೇರೆಗೆ ಟಿಕೆಟ್‌ ಕೊಟ್ಟೆ. ಆಮೇಲೆ ಸಾವಿರಾರು ಕೋಟಿ ರು. ಈ ಕ್ಷೇತ್ರಕ್ಕೆ ಅನುದಾನ ನೀಡಿದೆ. ಕೊನೆಗೆ ನನಗೆ ಟೋಪಿ ಹಾಕಿ ಹೋದ. ಅಬಕಾರಿ ಇಲಾಖೆಯಲ್ಲಿ ಗುರಿ ಹಾಕಿಕೊಂಡು ಲೂಟಿ ಮಾಡಲಾಗುತ್ತಿದೆ. ವೈನ್‌ ಸ್ಟೋರ್‌ಗಳಿಂದ ವಸೂಲಿ ಮಾಡಲಾಗುತ್ತಿದೆ. ಪಾಪದ ಹಣವನ್ನು ಲೂಟಿ ಮಾಡಿ ಮೆರೆಯುತ್ತಿದ್ದಾರೆ. ಅದೇ ಹಣವನ್ನು ಮುಂದಿನ ಚುನಾವಣೆಯಲ್ಲಿ ಮತದಾರರಿಗೆ ಹಂಚುತ್ತಾರೆ ಎಂದು ಟೀಕಾಪ್ರಕಾರ ನಡೆಸಿದರು.

ನೆಲಮಂಗಲ ಬಳಿ JDS ಬೃಹತ್ ಸಮಾವೇಶ, HDK ಸ್ಥಳ ಪರಿಶೀಲನೆ

ಬೆಂಗಳೂರು(Bengaluru) ನಗರದ ಮೂವರು ಶಾಸಕರು ಪ್ರತಿ ಬಾರಿಯೂ ಬಿಡಿಎ(BDA) ಸಭೆಗೆ ಹೋದರೆ, ಮೂಟೆಗಳಲ್ಲಿ ಹಣ ತುಂಬಿಕೊಂಡು ಹೋಗುತ್ತಿದ್ದರಂತೆ. ಆರ್‌.ಆರ್‌.ನಗರದವರು, ಯಶವಂತಪುರದವರು ಮತ್ತು ಕೆ.ಆರ್‌.ಪುರದವರು ಎಲ್ಲಾ ಸಭೆಗಳಲ್ಲೂ ಭರ್ಜರಿ ಹಣ ಮಾಡಿಕೊಳ್ಳುತ್ತಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲದಲ್ಲಿ ಬಿಡಿಎ ಸಭೆಯಲ್ಲಿ ಎಂಭತ್ತು ಕೋಟಿ ರು. ಎತ್ತಿಕೊಂಡು ಹೋಗಿದ್ದಾರೆ ಎಂಬುದನ್ನು ಅಧಿಕಾರಿಗಳು ಹೇಳುತ್ತಾರೆ ಎಂದು ಪರೋಕ್ಷವಾಗಿ ಸಚಿವರಾದ ಎಸ್‌.ಟಿ.ಸೋಮಶೇಖರ್‌, ಮುನಿರತ್ನ ಮತ್ತು ಬೈರತಿ ಬಸವರಾಜ ವಿರುದ್ಧ ಕಿಡಿಕಾರಿದರು.

ಬಿಜೆಪಿ(BJP) ನಾಯಕರಿಗೆ ದೊಡ್ಡ ಹುಲ್ಲುಗಾವಲು ಸಿಕ್ಕಿದ್ದು, ಚೆನ್ನಾಗಿ ಮೇಯುತ್ತಿದ್ದಾರೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕೆರೆ-ಕೋಡಿಗಳನ್ನು ನುಂಗಿದವರನ್ನು ಖಾಲಿ ಮಾಡಿಸುತ್ತೇವೆ ಮತ್ತು ಆ ಕೆರೆಗಳಿಗೆ ಪೂರ್ವ ವೈಭವ ತಂದು ನದಿ ಜಲವನ್ನು ತುಂಬಿಸುತ್ತೇವೆ. ನಾನು 25 ಸಾವಿರ ಕೋಟಿ ರು. ರೈತರ ಸಾಲ ಮನ್ನಾ ಮಾಡಿದಿದ್ದರೆ ಎಂಟು ಸಾವಿರ ಕೋಟಿ ರು. ಕಮಿಷನ್‌ ಸಿಗುತ್ತಿತ್ತು. ಬೆಂಗಳೂರಲ್ಲಿ ಚರಂಡಿ ಕ್ಲೀನ್‌ ಮಾಡುವುದಕ್ಕೆ, ವೈಟ್‌ ಟ್ಯಾಪಿಂಗ್‌ ಮಾಡುವುದಕ್ಕೆ ಅದೇ ಹಣವನ್ನು ಕೊಟ್ಟು ಕಮಿಷನ್‌ ಪಡೆದಿದ್ದರೆ ಬಿಜೆಪಿ, ಕಾಂಗ್ರೆಸ್‌ಗಿಂತ ಚೆನ್ನಾಗಿ ಚುನಾವಣೆ ಮಾಡಬಹುದಿತ್ತು. ನಮ್ಮ ಶಾಸಕರಿಗೆ ಆ ಹಣವನ್ನು ಹಂಚಿ ಕೊಳ್ಳೆ ಹೊಡೆಯಬಹುದಿತ್ತು. ಈಗ ಬಿಜೆಪಿಯವರು ಶೇ.40ರಷ್ಟು ಕಮಿಷನ್‌(40% Commission) ಹೊಡೆಯುತ್ತಿದ್ದಾರೆ. ಅವರಿಗೆ ನಾಚಿಕೆಯಾಗಬೇಕು ಎಂದು ಹೇಳಿದರು.

ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ(CM Ibrahim) ಮಾತನಾಡಿ, ಬಿಜೆಪಿ ಸರ್ಕಾರವು ಬಿಬಿಎಂಪಿ ಚುನಾವಣೆ(BBMP Election) ಮಾಡುವುದಿಲ್ಲ. ಅವರಿಗೆ ಅಷ್ಟು ಧೈರ್ಯ ಇಲ್ಲ. ನ್ಯಾಯಾಲಯ ಆದೇಶ ಮಾಡಿದೆಯಾದರೂ ಆದೇಶ ಪಾಲಿಸುತ್ತಾರೆ ಎಂಬ ನಂಬಿಕೆ ಇಲ್ಲ. ಮಹಾಲಕ್ಷ್ಮೇ ಲೇಔಟ್‌ನಲ್ಲಿ ನಮ್ಮ ಪಕ್ಷ ಬಲವಾದ ಪೈಪೋಟಿ ನೀಡಲಿದೆ. ಮುಂಬೈಗೆ ಹೋಗಿ ಬಂದವರು ಕ್ಯಾಸೆಟ್‌ ತೋರಿಸಬೇಡಿ ಎಂದರು ಎಂದು ಲೇವಡಿ ಮಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ, ವಿಧಾನಪರಿಷತ್‌ ಸದಸ್ಯ ಭೋಜೇಗೌಡ, ವಿಧಾನಪರಿಷತ್‌ ಮಾಜಿ ಸದಸ್ಯ ಟಿ.ಎ.ಶರವಣ ಇತರರು ಉಪಸ್ಥಿತರಿದ್ದರು.
 

Follow Us:
Download App:
  • android
  • ios