ಹೌದು, ಸಿದ್ದರಾಮಯ್ಯಗೆ ನಾನು ವಿಲನ್: ಎಚ್.ಡಿ.ಕುಮಾರಸ್ವಾಮಿ
‘ಹೌದು, ನಾನು ಸಿದ್ದರಾಮಯ್ಯಗೆ ರಾಜಕೀಯವಾಗಿ ವಿಲನ್. ಇಲ್ಲ ಎಂದವರು ಯಾರು? ಅವರಿಗೆ ನಾನು ವಿಲನ್ ಆಗದೇ ಸ್ನೇಹಿತನಾಗಲು ಸಾಧ್ಯವಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರು (ಅ.27): ‘ಹೌದು, ನಾನು ಸಿದ್ದರಾಮಯ್ಯಗೆ ರಾಜಕೀಯವಾಗಿ ವಿಲನ್. ಇಲ್ಲ ಎಂದವರು ಯಾರು? ಅವರಿಗೆ ನಾನು ವಿಲನ್ ಆಗದೇ ಸ್ನೇಹಿತನಾಗಲು ಸಾಧ್ಯವಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಗುರುವಾರ ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಟೇಲ್ ತಾಜ್ ನಲ್ಲಿ ಇದ್ದೆ ಅಂತ ಪದೇ ಪದೇ ಹೇಳುತ್ತಾರೆ. ತಾಜ್‌ನಲ್ಲಿ ನಾನು ಮೋಜು ಮಸ್ತಿ ಮಾಡುತ್ತಿರಲಿಲ್ಲ. ಅಭಿವೃದ್ಧಿ ಕೆಲಸದ ಚರ್ಚೆ ಮಾಡುತ್ತಿದ್ದೆ. ನನ್ನ ಬಳಿ ಎಲ್ಲಾ ದಾಖಲಾತಿ ಇದೆ ಎಂದು ಟಾಂಗ್ ಕೊಟ್ಟರು.
ನನ್ನನ್ನು ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಎನ್ನುವ ಗೌರವ ಇಲ್ಲದೆ ಪಪೆಟ್ ರೀತಿಯಲ್ಲಿ ನಡೆಸಿಕೊಂಡು ಅಪಮಾನ ಮಾಡಿದರು. ನಾನು ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್ ಶಾಸಕರು ಇಸ್ಪೀಟ್ ಎಲೆ ಎಸೆದ ಹಾಗೆ ಅವರ ಅಹವಾಲುಗಳನ್ನು ನನ್ನ ಟೇಬಲ್ ಮೇಲೆ ಎಸೆಯುತ್ತಿದ್ದರು. ಅಂತಹವರು ನನ್ನ ಬಗ್ಗೆ ವಿಲನ್ ಎಂದು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.
ಸಮ್ಮಿಶ್ರ ಸರ್ಕಾರ ಬೀಳಿಸಿದ್ದು ಸಿದ್ದರಾಮಯ್ಯನವರೇ. ಇದರಲ್ಲಿ ಎರಡು ಮಾತಿಲ್ಲ. ಬಿಜೆಪಿಯವರು ಸರ್ಕಾರ ಬೀಳಿಸಿದ್ದರು ಎಂದಿದ್ದೆ. ಆದರೆ ಅದನ್ನು ಬಿತ್ತನೆ ಮಾಡಿದ್ದು ಇದೇ ಸಿದ್ದರಾಮಯ್ಯ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಯಾರು? ಅವರಿಗೂ ನನಗೂ ಶತ್ರುತ್ವ ಇತ್ತಾ? ಬೆಳಗಾವಿ ರಾಜಕೀಯ ಸರಿ ಮಾಡಿ ಎಂದು ಹೇಳಿದ್ದೆ. ಆದರೆ ಸಿದ್ದರಾಮಯ್ಯ ಸರ್ಕಾರ ಬಿದ್ದು ಹೋಗಲಿ ಎಂದು ಸುಮ್ಮನಿದ್ದರು. ಆಗ ಬಿಜೆಪಿ ಜತೆ ಕೈಜೋಡಿಸಿದ್ದು ಸಿದ್ದರಾಮಯ್ಯ. ಅದಕ್ಕೆ ಸಮ್ಮಿಶ್ರ ಸರ್ಕಾರ ಬಿದ್ದು ಹೋಯಿತು ಎಂದು ಆರೋಪಿಸಿದರು.
ನಾನಂತೂ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ: ಸಂಸದ ಸಿದ್ದೇಶ್ವರ
ಮಾಜಿ ಸಚಿವ ಬಿ.ಸಿ.ಪಾಟೀಲ್ ಅವರನ್ನು ಸಚಿವರನ್ನಾಗಿ ಮಾಡಲು ಹೇಳಿದ್ದೆ. ಆದರೆ ಸಿದ್ದರಾಮಯ್ಯ ಮಾಡಲಿಲ್ಲ. ನನ್ನ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಇಬ್ಬರು ಪಕ್ಷೇತರ ಶಾಸಕರನ್ನು ಸಚಿವರನ್ನಾಗಿ ಮಾಡಿಸಿದ್ದರು. ಶ್ರೀಮಂತ ಪಾಟೀಲ್, ಆರ್.ಶಂಕರ್ ಅವರನ್ನು ರೆಸಾರ್ಟ್ ನಿಂದ ಕಳಿಸಿದ್ದು ಇದೇ ಸಿದ್ದರಾಮಯ್ಯ. ಅಪ್ಪಾ ನಿಮಗೊಂದು ನಮಸ್ಕಾರ. ಜನರ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಮತ್ತು 14 ತಿಂಗಳು ನನ್ನನ್ನ ಅಧಿಕಾರದಲ್ಲಿ ಇಟ್ಟಿದ್ದಕ್ಕೆ ನಮೋ ನಮಃ ಎಂದರು.