ಜೆಡಿಎಸ್ ಬಗ್ಗೆ ಅರುಣ್‌ಗೇನು ಗೊತ್ತು?: ಎಚ್‌ಡಿಕೆ ಆಕ್ರೋಶ
* ಜೆಡಿಎಸ್ ಮುಳುಗುವ ಹಡಗು ಎಂದಿದ್ದ ಅರುಣ್ ಸಿಂಗ್
* ಗೌಡರಿಂದ ಕಲಿಯಲಿ: ಅರುಣ್ ಸಿಂಗ್ ತಿರುಗೇಟು
* ದುಡ್ಡು ವಸೂಲಿಗಾಗಿ ಆಗಾಗ್ಗೆ ಅರಣ್ ಸಿಂಗ್ ಭೇಟಿ
ಮೈಸೂರು/ಚನ್ನರಾಯಪಟ್ಟಣ(ಸೆ.02): ಜೆಡಿಎಸ್ ಮುಳುಗುತ್ತಿರುವ ಹಡಗು ಎಂಬ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಟೀಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಮುಖಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಬಗ್ಗೆ ಯಾರೊಬ್ಬರೂ ಹಗುರವಾಗಿ ಮಾತನಾಡಬಾರದು, ರಾಜ್ಯದ ವಾಸ್ತವ ಪರಿಸ್ಥಿತಿ ಅರುಣ್ ಸಿಂಗ್‌ಗೆ ಏನು ಗೊತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ನಗರದಲ್ಲಿ ಬುಧವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿದ ಅವರು, ಅರುಣ್ ಸಿಂಗ್ ಕೇಂದ್ರ ಸರ್ಕಾರದ ಏಜೆಂಟ್, ದಲ್ಲಾಳಿಯಂತೆ. ಇಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ದುಡ್ಡು ವಸೂಲಿಗಾಗಿ ಆಗಾಗ್ಗೆ ಅರಣ್ ಸಿಂಗ್ ಭೇಟಿ ನೀಡುತ್ತಾರೆ ಆರೋಪಿಸಿದರು.
ಮುಳುಗುತ್ತಿರುವ ಜೆಡಿಎಸ್ ಜೊತೆ ಹೊಂದಾಣಿಕೆ ಇಲ್ಲ: ಅರುಣ್ ಸಿಂಗ್
ಜೆಡಿಎಸ್ ಮುಳುಗುತ್ತಿರುವ ಹಡಗು ಎಂದಾದ ಮೇಲೆ ಮೇಯರ್ ಚುನಾವಣೆ ವೇಳೆ ಶಾಸಕ ಸಾ.ರಾ. ಮಹೇಶ್ ಕಚೇರಿಗೆ ಬಿಜೆಪಿ ನಾಯಕರು ಏಕೆ ಬಂದಿದ್ದರು ಎಂದು ಪ್ರಶ್ನಿಸಿದ ಅವರು ನಾವು ಬೆಂಬಲ ಕೋರಿ ಅವರ ಬಳಿಗೆ ಹೋಗಿಲ್ಲ ಎಂದರು.
ಗೌಡರಿಂದ ಕಲಿಯಲಿ: ಅರುಣ್ ಸಿಂಗ್ ತಿರುಗೇಟು
ಹಿರಿಯರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಬಗ್ಗೆ ಗೌರವವಿದ್ದು, ಅವರ ಮಗ ಇತರರಿಗೆ ಗೌರವ ಕೊಡುವುದನ್ನು ಅವರ ತಂದೆಯನ್ನು ನೋಡಿ ಕಲಿತುಕೊಳ್ಳಲಿ ಎಂದು ಎಚ್.ಡಿ.ಕುಮಾರ ಸ್ವಾಮಿಗೆ ಅರುಣ್ ಸಿಂಗ್ ತಿರುಗೇಟು ನೀಡಿದ್ದಾರೆ. ಚನ್ನರಾಯಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರು ಎಷ್ಟೊಂದು ಗೌರವಯುತವಾಗಿ ನಡೆದುಕೊಳ್ಳುತ್ತಾರೆ. ಆದರೆ ಕುಮಾರಸ್ವಾಮಿಯವರದ್ದು ಲೂಸ್ ಟಾಕ್ ವ್ಯಕ್ತಿತ್ವ. ಇದನ್ನು ಜನ ಇಷ್ಟಪಡುವುದಿಲ್ಲ, ರಾಜನೀತಿಗೆ ಗೌರವಯುತವಾಗಿ ನಡೆದುಕೊಳ್ಳುವುದನ್ನು ಕಲಿಯಬೇಕು ಎಂದು ಹೇಳಿದರು.