Asianet Suvarna News Asianet Suvarna News

ಹೌದು ನಾವೆಲ್ಲಾ ಕೋಮುವಾದಿಗಳು: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರ ನಡುವೆ ಮಾತಿನ ಚಕಮಕಿ ನಡೆಯುತ್ತಲೇ ಇದೆ. ಒಬ್ಬರ ಮೇಲಿನ ಮತ್ತೊಬ್ಬರ ಕೆಸರೆರಚಾಟ ಮುಂದುವರಿದಿದೆ. ಇದೀಗ ಎಚ್‌ಡಿಕೆ ಕೋಮುವಾದಿ ಎಂದ ಸಿದ್ದುಗೆ ಎಚ್ಡಿಕೆ ಟಾಂಗ್ ನೀಡಿದ್ದು ಹೀಗೆ...

Former CM HD Kumaraswamy says only Siddaramaih is secular
Author
Bengaluru, First Published Oct 29, 2019, 8:33 AM IST

ಬೆಂಗಳೂರು (ಅ.29): ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಬೀಳಲು ಬಿಡುವುದಿಲ್ಲ ಎಂದು ಹೇಳುವ ಮೂಲಕ ಕುಮಾರಸ್ವಾಮಿ ಕೋಮುವಾದಿ ಬಿಜೆಪಿಯೊಂದಿಗೆ ಕೈಜೋಡಿಸುತ್ತಿದ್ದಾರೆ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತೀವ್ರ ಕಿಡಿಕಾರಿದ್ದಾರೆ. ಹೌದು, ನಾವೆಲ್ಲ ಕೋಮುವಾದಿಗಳು ಸಿದ್ದರಾಮಯ್ಯ ಅವರೊಬ್ಬರೇ ಜಾತ್ಯತೀತವಾದಿ ಎಂದು ಟಾಂಗ್‌ ನೀಡಿದರು.

ಬೆಳಗಾವಿ, ಹುಬ್ಬಳ್ಳಿ, ಗದಗ, ಹಾವೇರಿಯಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಲಿಂಗಾಯತರು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪರವಾಗಿಲ್ಲ, ಒಕ್ಕಲಿಗರು ಕುಮಾರಸ್ವಾಮಿ ಪರವಾಗಿಲ್ಲ ಎಂದೆಲ್ಲ ಹೇಳಿದ್ದಾರೆ. ಇಂಥ ಹೇಳಿಕೆ ನೀಡುವುದೇ ಕೋಮುವಾದ ಎಂದು ಕಿಡಿಕಾರಿದರು.

ಕೋಮುವಾದಿ ಬಿಜೆಪಿಯೊಂದಿಗೆ ಕೈಜೋಡಿಸುತ್ತಿದ್ದೇನೆ ಎಂದು ಸಿದ್ದರಾಮಯ್ಯ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ಒಬ್ಬ ಜಾತ್ಯತೀತ ನಾಯಕರಾಗಿದ್ದವರು. ನಾಯಕರ ಹಿಂದೆ ಜಾತಿ ಬೆಂಬಲ ಇದೆಯೋ, ಇಲ್ಲವೋ ಎಂಬ ಸಣ್ಣತನದ ಚಿಂತನೆ ಪ್ರದರ್ಶನದಿಂದಲೇ ಅವರೊಬ್ಬ ಜಾತ್ಯತೀತ ವ್ಯಕ್ತಿಯೋ, ಕೋಮುವಾದಿಯೋ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.

ಸಹವಾಸ ಸಾಕೆಂದ ಸಿದ್ದುಗೆ ಎಚ್‌ಡಿಕೆ ಫುಲ್ ಕ್ಲಾಸ್

ಐದು ವರ್ಷದ ತಮ್ಮ ಅಧಿಕಾರಾವಧಿಯಲ್ಲಿ ಯಾರು, ಯಾವ ವರ್ಗದವರನ್ನು ನಿರ್ಲಕ್ಷಿಸಿದರು? ಯಾವ ವರ್ಗಗಳಿಗೆ ಸಮುದಾಯ ಭವನಗಳನ್ನು ಕಟ್ಟಲು ಅನುಮತಿ ನೀಡಿದರು ಎಂಬ ಬಗ್ಗೆ ಅಂಕಿ-ಅಂಶಗಳನ್ನು ಬಹಿರಂಗ ಪಡಿಸಲಿ. ಆಗ ಯಾರು ಕೋಮುವಾದಿ ಎನ್ನುವುದು ಗೊತ್ತಾಗುತ್ತದೆ ಎಂದು ಹೇಳಿದರು.

ನೆರೆ ಸಂತ್ರಸ್ತರೊಂದಿಗೆ ಕಾಲ ಕಳೆದ ಕುಮಾರಸ್ವಾಮಿ

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ದೀಪಾವಳಿ ಹಬ್ಬದ ಸಮಯವನ್ನು ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ಸಮಸ್ಯೆ ಆಲಿಸಿ, ಧೈರ್ಯ ತುಂಬುವ ಮೂಲಕ ಕಳೆದರು.

ದೀಪಾವಳಿ ಹಬ್ಬದ ಮುನ್ನಾ ದಿನವಾದ ಶನಿವಾರ ರಾತ್ರಿ ಬೆಳಗಾವಿಗೆ ತೆರಳಿದ್ದ ಅವರು ಚಿಕ್ಕೋಡಿ, ಕಾಗವಾಡದಲ್ಲಿ ಭಾನುವಾರ ನೆರೆ ಸಂತ್ರಸ್ತರ ಸಮಸ್ಯೆ ಆಲಿಸಿದರು. ಖಾಸಗಿ ಸಂಸ್ಥೆಯೊಂದು ನೀಡಿದ ದೀಪಾವಳಿ ಕಿಟ್‌ಗಳನ್ನು ಸಂತ್ರಸ್ತರಿಗೆ ವಿತರಿಸಿದರು. ನಂತರ ಗದಗ, ಹಾವೇರಿಗೆ ತೆರಳಿ ಸಂತ್ರಸ್ತರಿಗೆ ಧೈರ್ಯ ತುಂಬಿದರು.

ಈ ವೇಳೆ ವಿವಿಧೆಡೆ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದ ಜನರ ಬದುಕಿನ ಜೊತೆ ಪ್ರಕೃತಿ ಚೆಲ್ಲಾಟವಾಡುತ್ತಿದೆ. ಇಂಥ ಸಂಕಷ್ಟದ ಪರಿಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ದೀಪಾವಳಿ ಆಚರಿಸಲು ಮನಸ್ಸು ಒಪ್ಪದಿದ್ದಾಗ ನಿಮ್ಮ ಬಳಿಗೆ ಬಂದಿರುವುದಾಗಿ ಹೇಳಿದರು.

ಜತೆಗೆ, ಕೊಡಗಿನಲ್ಲಿ ಮನೆ ಕಳೆದುಕೊಂಡವರಿಗೆ ತಾತ್ಕಾಲಿಕ ಪರಿಹಾರವಾಗಿ .50 ಸಾವಿರ, ಮನೆ ಬಿದ್ದವರಿಗೆ .1 ಲಕ್ಷ ನೀಡುವ ಜೊತೆಗೆ ಸರ್ಕಾರದಿಂದಲೇ .9.85 ಲಕ್ಷ ವೆಚ್ಚದ ಸುಸಜ್ಜಿತ ಮನೆಗಳನ್ನು ನಿರ್ಮಿಸಿ ಕೊಡಲಾಗಿದೆ. ಅದೇ ಮಾದರಿಯಲ್ಲಿ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೂ ಸುಸಜ್ಜಿತ ಮನೆಗಳನ್ನು ಕಟ್ಟಿಸಿ ಕೊಡಲು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಭರವಸೆ ನೀಡಿದರು.

ದೇವಾಲಯವನ್ನೇ ದಾನವಾಗಿ ನೀಡಿದ ಕುಮಾರಸ್ವಾಮಿ

ನೆರೆ ಪೀಡಿತ ಪ್ರದೇಶಗಳಿಗೆ ಈಗಾಗಲೇ ಭೇಟಿ ನೀಡಿ ಬಂದಿದ್ದೇನೆ. ಪ್ರವಾಹ ಪರಿಸ್ಥಿತಿ ನಿಭಾಯಿಸುವ ವಿಷಯದಲ್ಲಿ ಸರ್ಕಾರ ಯಾವ ರೀತಿ ಕೆಲಸ ಮಾಡಬೇಕು ಎಂಬ ಸಲಹೆ ನೀಡಲು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸುತ್ತೇನೆ. ಮುಂದಿನ ವಾರ ಅವರ ಸಮಯ ಕೇಳಿಕೊಂಡು ಹೋಗಿ ಭೇಟಿಯಾಗಿ ಚರ್ಚಿಸುತ್ತೇನೆ ಎಂದು ಇದೇ ವೇಳೆ ತಿಳಿಸಿದರು.

ನೀರಲ್ಲಿ ಕೊಚ್ಚಿಹೋದ ಬಾಲಕನ ಮನೆಗೆ ಭೇಟಿ

ಈ ಸಂದರ್ಭದಲ್ಲಿ ಹಾವೇರಿ ಜಿಲ್ಲೆಯ ಹಿರೇಕೆರೂರು ಪಟ್ಟಣದ ಸುಣ್ಣದ ಕಾಲುವೆಯಲ್ಲಿ ಅ.21 ರಂದು ಕೊಚ್ಚಿ ಹೋಗಿದ್ದ ಬಾಲಕನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.

ಸಿದ್ದು ಕನಸು: ಸುಪ್ರೀಂ ಕೋರ್ಟ್‌ನ ತೀರ್ಪಿನ ಮೇಲೆ ಉಪ ಚುನಾವಣೆ ನಿಂತಿದೆ. ಉಪ ಚುನಾವಣೆ ನಡೆಯುತ್ತೋ ಇಲ್ವೋ ಗೊತ್ತಿಲ್ಲ. ಆದರೆ ಉಪಚುನಾವಣೆ ಬಳಿಕ ಯಡಿಯೂರಪ್ಪ ರಾಜೀನಾಮೆ ಕೊಡುತ್ತಾರೆ. ಸರ್ಕಾರ ಬಿದ್ದು ಹೋಗುತ್ತೆ. ಮತ್ತೆ ಮಾರ್ಚ್, ಏಪ್ರಿಲ್‌ನಲ್ಲಿ ಮಧ್ಯಂತರ ಚುನಾವಣೆ ಬರುತ್ತದೆ ಎಂದು ಸಿದ್ದರಾಮಯ್ಯ ಕನಸು ಕಾಣುತ್ತಿದ್ದಾರೆ. ಇದಕ್ಕಾಗಿ ವೇದಿಕೆಯೂ ಸಜ್ಜಾಗಿದೆ. ಆದರೆ ಸದ್ಯ ನೆರೆ ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹಾಲಿ ಸರ್ಕಾರ ಇರಬೇಕು. ಮಧ್ಯಂತರ ಚುನಾವಣೆ ಹೋಗುವುದು ಸರಿಯಲ್ಲ ಎಂದರು.

ಮತ್ತೆ ಚುನಾವಣೆಗೆ ಹೋದರೆ ರಾಜ್ಯದ ಜನತೆಗೆ ಹೊರೆಯಾಗುತ್ತದೆ. ಅಲ್ಲದೆ, ನೆರೆ ಸಂತ್ರಸ್ತರ ಸಂಕಷ್ಟಕೇಳುವವರು ಯಾರು? ನಾವೆಲ್ಲ ರಾಜಕಾರಣಿಗಳು ಮತ್ತೆ ಅಧಿಕಾರ ಹಿಡಿಯಬೇಕು. ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಓಡಾಡುತ್ತೇವೆಯೇ ಹೊರತು ನೆರೆ ಸಂತ್ರಸ್ತರ ಗೋಳು ಕೇಳಲ್ಲ. ನೆರೆ ಸಂತ್ರಸ್ತರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ನಾನು ಸರ್ಕಾರಕ್ಕೆ ಸಲಹೆ ಕೊಡುತ್ತೇನೆ ಎಂದ ಅವರು, ಬಿಜೆಪಿ ಸರ್ಕಾರಕ್ಕೆ ಬೆಂಬಲ ಕೊಡುತ್ತೇನೆ ಎಂದು ಎಲ್ಲೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.

ಒಂದು ವೇಳೆ ಸರ್ಕಾರ ಬೀಳುವ ಪರಿಸ್ಥಿತಿ ಎದುರಾದರೆ ಬೆಂಬಲ ಕೊಡುವ ಬಗ್ಗೆ ನಿರ್ಧರಿಸುತ್ತೇನೆ. ಯಾರು ನೆರೆ ಸಂತ್ರಸ್ತರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಾರೋ ಅವರಿಗೆ ನನ್ನ ಬೆಂಬಲ ಎಂದು ಹೇಳಿದರು.

ಬಿಜೆಪಿ ಮೇಲೆ ಎಚ್ಡಿಕೆ ಮೃದು ಧೋರಣೆ

"

Follow Us:
Download App:
  • android
  • ios