ಬೆಂಗಳೂರು, (ಜುಲೈ.17): ರಾಜ್ಯದಲ್ಲಿ ಕೋವಿಡ್-19 ಸೋಂಕು ಮತ್ತು ಲಾಕ್ ಡೌನ್ ಕಾರಣದಿಂದ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಬದುಕುವುದೇ ಕಷ್ಟವಾಗಿದೆ. ಇವರಿಗೆ ರಾಜ್ಯ ಸರ್ಕಾರ ನೆರವು ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಎಚ್‌ಡಿಕೆ, ಕೋವಿಡ್ ಸೋಂಕು ಹಬ್ಬಿದ ನಂತರ ಲಾಕ್‌ಡೌನ್ ಮತ್ತು ವಹಿವಾಟುಗಳಿಲ್ಲದೆ ವಿಶೇಷವಾಗಿ ಸಣ್ಣ, ಮಧ್ಯಮ ಕೈಗಾರಿಕೆಗಳು ಬದುಕುಳಿಯುವುದೇ ಕಷ್ಟವಾಗಿದೆ. ಈ ಕೈಗಾರಿಕೆಗಳು ಕೇಂದ್ರದ ಯಾವುದೇ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಮುಂಗಡ ಹಣ ಪಾವತಿ ಮಾಡಬೇಕಿಲ್ಲ. ಆದರೆ ರಾಜ್ಯ ಸರ್ಕಾರದಲ್ಲಿ ಮಾತ್ರ ಇಂತಹ ವಿನಾಯಿತಿ ಇಲ್ಲ. ರಾಜ್ಯ ಸರ್ಕಾರ ಈ ಸಣ್ಣ ಕೈಗಾರಿಕೆಗಳಿಗೆ ಕೇಂದ್ರ ಸರ್ಕಾರದ  ಮಾದರಿಯಲ್ಲಿ ವಿನಾಯಿತಿ ನೀಡಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ಕೊರೋನಾ ನಿಯಂತ್ರಿಸಲು ಸಂಪೂರ್ಣ ವಿಫಲ: ಬಿಬಿಎಂಪಿಗೆ ಹೈಕೋರ್ಟ್‌ ಹಿಗ್ಗಾಮುಗ್ಗ ತರಾಟೆ

ರಾಜ್ಯದಲ್ಲಿ ಸುಮಾರು 6 ಲಕ್ಷಕ್ಕೂ ಹೆಚ್ಚು ಮಂದಿ ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರು ನೋಂದಾಯಿಸಿಕೊಂಡಿದ್ದು, ಇದರಲ್ಲಿ ಶೇಕಡ ಅರ್ಧಕ್ಕಿಂತ ಹೆಚ್ಚು ಬೆಂಗಳೂರಿನ ಉದ್ಯಮಿಗಳು. ರಾಜ್ಯ ಸರ್ಕಾರದ ಬಿಡ್‌ನಲ್ಲಿ ಭಾಗವಹಿಸಲು ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರಿಗೆ ಮುಂಗಡ ಹಣ ಪಾವತಿ ಕಡ್ಡಾಯ ಮಾಡಿರುವುದನ್ನು ರದ್ದುಗೊಳಿಸಬೇಕು ಎಂದು ಎಚ್ ಡಿಕೆ ಒತ್ತಾಯಿಸಿದ್ದರೆ.

ಕೇಂದ್ರ ಸರ್ಕಾರದ ರೀತಿಯಲ್ಲಿ ರಾಜ್ಯ ಸರ್ಕಾರವು ಸಣ್ಣ, ಮಧ್ಯಮ ಉದ್ದಿಮೆದಾರರಿಗೆ ಸಹಾಯಹಸ್ತ ಚಾಚಿದರೆ  ಕಷ್ಟಕ್ಕೆ ಸಿಲುಕಿರುವ ಈ ಉದ್ದಿಮೆದಾರರು ತುಸು ಉಸಿರಾಡಲು ಸಾಧ್ಯವಾಗುತ್ತದೆ. ಇವರೊಂದಿಗೆ ಸುಮಾರು 40 ಲಕ್ಷಕ್ಕೂ ಹೆಚ್ಚು ಉದ್ಯೋಗಸ್ಥರಿದ್ದಾರೆ ರಾಜ್ಯ ಸರ್ಕಾರ ತಡಮಾಡದೆ ತಕ್ಷಣವೇ ಈ ಬಗ್ಗೆ ಅಧಿಕೃತ ಘೋಷಣೆ ಮಾಡಬೇಕು ಎಂದರು.