ಮೋದಿ ಭೇಟಿ ಖರ್ಚಿನಲ್ಲಿ ಒಂದು ಗ್ರಾಮ ಉದ್ಧಾರವಾಗ್ತಿತ್ತು: ಕುಮಾರಸ್ವಾಮಿ
* ಬಸವರಾಜ ಬೊಮ್ಮಾಯಿ ರಿಮೋಟ್ ಕಂಟ್ರೋಲ್ ಸಿಎಂ
* ಬೊಮ್ಮಾಯಿ ಬಗ್ಗೆ ನನಗೆ ಕನಿಕರವಿದೆ
* ಮೋದಿ ರಾಜ್ಯಕ್ಕೆ ಬಂದು ಹೋಗಲು 32 ಕೋಟಿ ರು. ಖರ್ಚು ಮಾಡ್ತಾರೆ
ಹಾಸನ(ಜೂ.23): ಪ್ರಧಾನಿ ಮೋದಿ ರಾಜ್ಯಕ್ಕೆ ಬಂದು ಹೋಗಲು 32 ಕೋಟಿ ರು. ಖರ್ಚು ಮಾಡ್ತಾರೆ. ಅದೇ ಹಣದಲ್ಲಿ ಒಂದು ಗ್ರಾಮ ಉದ್ಧಾರ ಮಾಡಲು ಆಗುತ್ತಿರಲಿಲ್ವಾ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಕೊಮ್ಮಘಟ್ಟ ಸಭೆಯಲ್ಲಿ ಮಾತನಾಡುತ್ತಾ ಹಿಂದಿನ ಯಾವ ಸರ್ಕಾರವೂ ಏನು ಮಾಡಿಲ್ಲ ಎಂದಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ನಾಡಿಗೆ ಕೊಡುಗೆ ಕೊಟ್ಟಿದ್ದನ್ನು ಸ್ಮರಿಸುವ ಬದಲು ಎಲ್ಲವನ್ನೂ ತಾವೇ ಮಾಡಿದ್ದು ಎನ್ನುವ ರೀತಿ ಮಾತನಾಡಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಮೊನ್ನೆ ಬೆಂಗಳೂರಿನಲ್ಲಿ 33 ಸಾವಿರ ಕೋಟಿ ಅನುದಾನದ ಕರ್ಯಕ್ರಮಕ್ಕೆ ಶಂಕುಸ್ಥಾಪನೆ ಮಾಡಿದ್ದೇವೆ ಎಂದು ಭಾಷಣ ಮಾಡಿದ್ದಾರೆ. ಇದರಲ್ಲಿ ಕೇವಲ ಮೋದಿಯವರ ಕೊಡುಗೆ ಮಾತ್ರ ಇದೆಯಾ? ಹಿಂದೆ ಇದ್ದ ಸರ್ಕಾರಗಳು ಹಾಕಿದ್ದ ಅಡಿಪಾಯಕ್ಕೆ ಮೋದಿ ಇಂದು ಶಂಕುಸ್ಥಾಪನೆ ಮಾಡಿದ್ದಾರೆ. ಇದರ ನಿಜವಾದ ಚಿಂತಕರು ದೇವೇಗೌಡರು ಎಂದರು. ಅವರು ಪ್ರಧಾನಿ ಆಗಿದ್ದಾಗಲೆ ಈ ಯೋಜನೆ ಬಗ್ಗೆ ಕನಸು ಕಂಡಿದ್ದರು ಎಂದು ತಿಳಿಸಿದರು.
ಮುಂಬರುವ ಎಲೆಕ್ಷನ್‌ನಲ್ಲಿ ಕುಮಾರಸ್ವಾಮಿ ಯಾವ ಕ್ಷೇತ್ರದಿಂದ ಸ್ಪರ್ಧೆ?: ಎಚ್‌ಡಿಕೆ ಹೇಳಿದ್ದಿಷ್ಟು
ನನ್ನ ಸರ್ಕಾರದ ಅವಧಿಯಲ್ಲಿ ಇದಕ್ಕೆ ಮರು ಚಾಲನೆ ನೀಡಲಾಗಿತ್ತು. ನಾನು ಮುಖ್ಯಮಂತ್ರಿ ಆದಾಗ ಪಿಯೂಷ್ ಗೋಯಲ್ ಕೃಷ್ಣಾದಲ್ಲಿ ಈ ಬಗ್ಗೆ ನನ್ನ ಜೊತೆ ಸಭೆ ಕೂಡ ಮಾಡಿದ್ದರು. ಅಂದು ಅವರು ನನಗೆ ಮುಂದಿನ ಬಜೆಟ್‌ನಲ್ಲಿ ಹಣ ಇಟ್ಟು ಮೋದಿ ಕರೆಸಿ ಉದ್ಘಾಟನೆ ಮಾಡುವ ಭರವಸೆ ನೀಡಿದ್ದರು. ಆದರೂ ಮೂರು ವರ್ಷ ನೆನೆಗುದಿಗೆ ಬಿದ್ದಿತ್ತು. ಇಂದು ಚಾಲನೆ ನೀಡಿದ್ದಾರೆ ಅಷ್ಟೆ ಎಂದು ವ್ಯಂಗ್ಯವಾಡಿದರು.
ರಿಮೋಟ್ ಕಂಟ್ರೋಲ್ ಸಿಎಂ:
ಇದೇ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಿಮೋಟ್ ಕಂಟ್ರೋಲ್ ಸಿಎಂ ಆಗಿದ್ದು ಎಲ್ಲವೂ ಕೇಶವಕೃಪದಲ್ಲೇ ತೀರ್ಮಾನವಾಗುತ್ತದೆ. ಬೊಮ್ಮಾಯಿ ಬಗ್ಗೆ ನನಗೆ ಕನಿಕರವಿದೆ ಮೂದಲಿಸಿದರು.