ಬಿಜೆಪಿಗೂ ಕರ್ನಾಟಕ ರಾಜ್ಯ ಎಟಿಎಂ: ಅಮಿತ್ ಶಾಗೆ ಎಚ್‌ಡಿಕೆ ತಿರುಗೇಟು
ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಗೆಲುವು ಸಾಧಿಸಿದರೆ ಕುಟುಂಬಕ್ಕೆ ಎಟಿಎಂ ಆಗಲಿದೆ ಎಂದು ಟೀಕಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿ ಬರೀ ಬೂಟಾಟಿಕೆ ಪಾರ್ಟಿ ಎಂದು ಟೀಕಿಸಿದ್ದಾರೆ.
ಬೆಂಗಳೂರು (ಡಿ.31): ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಗೆಲುವು ಸಾಧಿಸಿದರೆ ಕುಟುಂಬಕ್ಕೆ ಎಟಿಎಂ ಆಗಲಿದೆ ಎಂದು ಟೀಕಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿ ಬರೀ ಬೂಟಾಟಿಕೆ ಪಾರ್ಟಿ ಎಂದು ಟೀಕಿಸಿದ್ದಾರೆ. ಈ ಕುರಿತು ಶನಿವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಬರೀ ಬೂಟಾಟಿಕೆ ಪಾರ್ಟಿ (ಬಿಜೆಪಿ) ಸುಳ್ಳುಕೋರರ ಸಂತೆ ಎನ್ನುವುದಕ್ಕೆ ಮಂಡ್ಯದಲ್ಲಿ ಸುಖಾಸುಮ್ಮನೆ ಅವಲತ್ತುಕೊಂಡ ನಿಮ್ಮ ಅಸತ್ಯದ ಹಾಹಾಕಾರದ ವರಸೆಯೇ ಸಾಕ್ಷಿ. ಸ್ಥಳಕ್ಕೊಂದು ವೇಷ, ಕ್ಷಣಕ್ಕೊಂದು ಸುಳ್ಳು. ಇದು ನಿಮ್ಮ ಪಕ್ಷದ ನಿಜ ಸ್ವರೂಪ. ನೀವು ಸರ್ವಾಧಿಕಾರಿ ಹಿಟ್ಲರ್‌ನ ಸಂಪುಟದ ಗೊಬೆಲ್ಲನ ಹೊಸ ಅವತಾರ. ಸುಳ್ಳು ಹೇಳಿ ಪ್ರಚಾರ ಗಿಟ್ಟಿಸಿಕೊಳ್ಳಬೇಕಾದ ಕರ್ಮ ನಿಮಗೇಕೆ ಬಂತು ಅಮಿತ್ ಶಾ ಅವರೇ?’ ಎಂದು ನೇರವಾಗಿ ಟಾಂಗ್ ನೀಡಿದ್ದಾರೆ.
‘ಶೇ.40ರಷ್ಟುಕಮಿಷನ್, ಪಿಎಸ್‌ಐ ಹಗರಣ, ಪ್ರಶ್ನೆ ಪತ್ರಿಕೆ ಸೋರಿಕೆ, ಸಹ ಪ್ರಾಧ್ಯಾಪಕರ ನೇಮಕ ಹಗರಣ, ವೈದ್ಯ ಪ್ರಾಧ್ಯಾಪಕರ ನೇಮಕ ಹಗರಣ, ಕೋವಿಡ್‌ನಲ್ಲಿ ಕೊಳ್ಳೆ, ಕಾಸಿಗಾಗಿ ಪೋಸ್ಟಿಂಗ್, ಗಂಗಾಕಲ್ಯಾಣ ಕರ್ಮಕಾಂಡ, ಚಿಲುಮೆ ಹಗರಣ. ಇದು ಅಪೂರ್ಣಪಟ್ಟಿ. ಅದು ಸಹ ದೊಡ್ಡದಿದೆ. ಬೇಕಾ ಅಮಿತ್ ಶಾ ಅವರೇ? ಬಿಜೆಪಿ ಸರ್ಕಾರ ಕೇವಲ 40 ಪರ್ಸೆಂಟ್ ಸರ್ಕಾರವಲ್ಲ, ಅದು 55-60 ಪರ್ಸೆಂಟ್ ಸರ್ಕಾರ. ನಿಮಗೂ ಮಾಹಿತಿ ಇರುತ್ತದೆ. ಕರ್ನಾಟಕ ನಿಮ್ಮ ಪಕ್ಷಕ್ಕೂ ಎಟಿಎಂ ಹೌದಲ್ಲವೇ? ಈ ಸತ್ಯ ಯಾಕೆ ಮರೆ ಮಾಚಿದಿರಿ? ಮಂಡ್ಯ ಜನರ ಮುಂದೆ ನಿಮ್ಮ ದಮ್ಮು ತಾಕತ್ತು ನಡೆಯಲ್ಲ, ಅರಿತುಕೊಳ್ಳಿ’ ಎಂದು ಲೇವಡಿ ಮಾಡಿದ್ದಾರೆ.
ಸಮುದಾಯವನ್ನು ಮಂಗ ಮಾಡಲು ಬಿಜೆಪಿ ಸರ್ಕಾರ ಹೊರಟಿದೆ: ಎಚ್.ಡಿ.ಕುಮಾರಸ್ವಾಮಿ
ನಿಮ್ಮ ಮಗ ಯಾವ ಸೀಮೆ ಪಂಡಿತ?: ‘ಇನ್ನು, ಕುಟುಂಬದ ವಿಷಯ. ನಿಮ ಪಕ್ಷದ ಕುಟುಂಬ ರಾಜಕಾರಣದ ಲೆಕ್ಕ ಗೊತ್ತಿಲ್ಲವೇ? ನಿಮ್ಮ ಸುಪುತ್ರ ಜಯ್ ಶಾ ಯಾವ ಸೀಮೆ ಕ್ರಿಕೆಟ್ ಪಂಡಿತರು ಎಂದು ಬಿಸಿಸಿಐನಲ್ಲಿ ಕೂತಿದ್ದಾರೆ? ಬಿಸಿಸಿಐನಲ್ಲಿ ಯಾರು ಇರಬೇಕು, ಇರಬಾರದು ಎಂದು ಸುಪ್ರೀಂಕೋರ್ಟ್‌ನ ಸ್ಪಷ್ಟಆದೇಶ ಇದೆ. ಆ ಆದೇಶಕ್ಕೆ ನಿಮ್ಮ ಮಗ ಅತೀತರೇ? ಈಗ ಹೇಳಿ, ಬಿಸಿಸಿಐ ಯಾರ ಪಾಲಿನ ಎಟಿಎಂ?’ ಎಂದು ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದ್ದಾರೆ. ‘ಪಂಚರತ್ನ ರಥಯಾತ್ರೆ ನಿಮ್ಮ ಕಣ್ಣು ಕುಕ್ಕಿದೆ. ಸಾಲಮನ್ನಾ ನಿಮ್ಮ ನಿದ್ದೆಗೆಡಿಸಿದೆ. ಎಷ್ಟೇ ಆದರೂ ಕೇಂದ್ರದ ಸಹಕಾರ ಸಚಿವರಾದ ನಿಮಗೆ ಸಾಲಮನ್ನಾ ದುಃಸ್ವಪ್ನದಂತೆ ಕಾಡುತ್ತಿದೆ ಎನ್ನುವುದು ಗೊತ್ತು. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ನನ್ನ ಸಾಧನೆಗಳು ನಿಮ್ಮ ಚಿಂತೆ ಹೆಚ್ಚಿಸಿವೆ. ಇನ್ನಾದರೂ ಸುಳ್ಳಿನ ಜಾಗಟೆ ಬಾರಿಸುವುದು ನಿಲ್ಲಿಸಿ’ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.
ಜೆಡಿಎಸ್‌ನಿಂದ ರೈತರ ಸಮಸ್ಯೆಗೆ ಪರಿಹಾರ: ಎಚ್.ಡಿ.ಕುಮಾರಸ್ವಾಮಿ
ಸರ್ಕಾರದಿಂದ ಪಂಚಮಸಾಲಿ, ಒಕ್ಕಲಿಗರ ಮಂಗ ಮಾಡಲೆತ್ನ: ಲಿಂಗಾಯತ ಪಂಚಮಸಾಲಿ ಹಾಗೂ ಒಕ್ಕಲಿಗ ಸಮುದಾಯಕ್ಕೆ ಪ್ರತ್ಯೇಕ ಪ್ರವರ್ಗ ರಚಿಸಲು ನಿರ್ಧಾರ ಕೈಗೊಳ್ಳುವ ಮೂಲಕ ಬಿಜೆಪಿ ಸರ್ಕಾರ ಈ ಎರಡು ಸಮುದಾಯವನ್ನು ಮಂಗ ಮಾಡಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು. 3ಎ ಮತ್ತು 3ಬಿ ಪ್ರವರ್ಗಗಳನ್ನು ಸುಮ್ಮನಾಗಿಸಿದ್ದಾರೆ. ಈ ಸಮುದಾಯಗಳಿಗೆ ಮೀಸಲಾತಿ ಕೊಡುವಷ್ಟರಲ್ಲಿ ಈ ಸರ್ಕಾರವೇ ಇರುವುದಿಲ್ಲ. ಉತ್ತರ ಪ್ರದೇಶದಲ್ಲಿ ಮೀಸಲಾತಿಯನ್ನೇ ಹೈಕೋರ್ಚ್ ತೆಗೆದು ಹಾಕಿದೆ. ಮುಂದೆ ಕರ್ನಾಟಕದಲ್ಲೂ ಅದೇ ಪರಿಸ್ಥಿತಿ ಬರಬಹುದು ಎಂದರು. ಬಿಜೆಪಿಯವರು ಚುನಾವಣೆ ಗಿಮಿಕ್‌ಗಾಗಿ ಈ ರೀತಿ ಮಾಡುತ್ತಿದ್ದಾರೆ. ಪಂಚಮಸಾಲಿಗಳು 2ಎಗೆ ಸೇರಿಸಿ ಎಂದು ಬೇಡಿಕೆ ಇಟ್ಟಿದ್ದರು. ಆದರೆ 2ಡಿ ಮಾಡಿದ್ದಾರೆ. ಸರ್ಕಾರದ ತೀರ್ಮಾನ ನಾಡಿನ ಜನತೆಗೆ ಮಾಡಿದ ದ್ರೋಹ. ಮೀಸಲಾತಿ ಎಂಬುದು ಧ್ವನಿ ಇಲ್ಲದ ವರ್ಗಕ್ಕೆ ಅನುಕೂಲವಾಗಬೇಕು ಎಂದರು.