ಬೆಂಗಳೂರು(ಅ.19):  ದಿನಕ್ಕೆ ಮೂರು ನಾಲ್ಕು ಬಾರಿ ಡ್ರೆಸ್‌ (ಉಡುಪು) ಬದಲಾಯಿಸಿ ಚೆನ್ನಾಗಿ ಕಾಣುವುದೇ ಪ್ರಧಾನಿ ಮೋದಿ ಅವರ ಸಾಧನೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಭಾನುವಾರ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಗ್ಗೆರೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಪರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮೋದಿ ಅವರು ದಿನಕ್ಕೆ ಎಷ್ಟುಡ್ರೆಸ್‌ ಬದಲಾಯಿಸುತ್ತಾರೆ? ಆ ಡ್ರೆಸ್‌ಗೆ ಎಷ್ಟುಲಕ್ಷ ರುಪಾಯಿಯೋ ಗೊತ್ತಿಲ್ಲ. ದಿನಕ್ಕೆ ಮೂರು-ನಾಲ್ಕು ಡ್ರೆಸ್‌ ಹಾಕುತ್ತಾರೆ. ಹಾಗಾಗಿ ಚೆನ್ನಾಗಿ ಕಾಣುತ್ತಾರೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೆಗೌಡರು ದಿನ ಬೆಳಗ್ಗೆಯಿಂದ ರಾತ್ರಿ ತನಕ ಒಂದೇ ಪಂಚೆ ಹಾಕಿರುತ್ತಾರೆ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ. 

ಶಿರಾ ಉಪಚುನಾವಣೆ ರಣರಂಗದಲ್ಲಿ ಕುಮಾರಸ್ವಾಮಿ ಫೋನ್ ಸಂಭಾಷಣೆ ಲೀಕ್..!

ಪ್ರಧಾನಿಯಾಗಿ ಮೋದಿ ಅವರು ಕಳೆದ ಆರು ವರ್ಷಗಳಲ್ಲಿ ಏನು ಮಾಡಿದ್ದಾರೆ? ಚೀನಾ ವಿರುದ್ಧ ಸ್ಪರ್ಧೆ ಇರಲಿ, ಮೋದಿ ಅವರು ಬಾಂಗ್ಲಾ ದೇಶದ ಜೊತೆ ಸ್ಪರ್ಧೆ ಮಾಡಬೇಕಿದೆ. ಆ ರೀತಿ ಆಗಿದೆ ನಮ್ಮ ದೇಶ ಎಂದು ತಿಳಿಸಿದರು.
ನಮ್ಮ ರಾಜ್ಯದ ದುರ್ಗತಿ ಎಲ್ಲಿಗೆ ಬಂದಿದೆ ಎಂದರೆ ಪ್ರಧಾನಿ ಮೋದಿ ಅವರು ದೂರವಾಣಿ ಮೂಲಕವೂ ಮಾತನಾಡುವುದಕ್ಕೆ ಮುಖ್ಯಮಂತ್ರಿಗಳಿಗೆ ಅವಕಾಶ ನೀಡಲ್ಲ. ನಾನು ಮುಖ್ಯಮಂತ್ರಿ ಆಗಿದ್ದಾಗ ಇದೇ ಪ್ರಧಾನಿ ಜೊತೆ ಎಂಟು ಬಾರಿ ಭೇಟಿ ಆಗಿದ್ದೆ. ಕೇಳಿದ ಐದು ನಿಮಿಷಕ್ಕೆ ಸಮಯ ನೀಡುತ್ತಿದ್ದರು. ಆದರೆ, ಹಾಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮೋದಿ ಅವಕಾಶ ನೀಡುತ್ತಿಲ್ಲ ಎಂದು ಆಪಾದಿಸಿದರು.

ನಾವು ಅಧಿಕಾರ ಇದ್ದಾಗ ಅಹಂನಿಂದ ಮೆರೆದಿಲ್ಲ. ಕುಟುಂಬದ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ. ಡಿ.ಕೆ.ಶಿವಕುಮಾರ್‌ ಕುಟುಂಬದಲ್ಲಿ ನಾಲ್ಕು ಜನ, ಜಾರಕಿಹೊಳಿ ಕುಟುಂಬದಲ್ಲಿ ನಾಲ್ಕು ಮಂದಿ, ಯಡಿಯೂರಪ್ಪ ಕುಟುಂಬದಲ್ಲಿ ಮೂರು ಜನ, ಸಿದ್ದರಾಮಯ್ಯ ಮಗ ಕೂಡ ರಾಜಕಾರಣಕ್ಕೆ ಬಂದಿದ್ದಾರೆ. ಆದರೆ, ನಮ್ಮ ಕುಟುಂಬ ಮಾತ್ರ ತಪ್ಪು ಮಾಡಿದೆಯೇ ಎಂದು ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದರು.