ದೇಶದಲ್ಲಿ ದಿವಾಳಿ ಅಂಚಿಗೆ ಬಂದಿರುವ ಕಾಂಗ್ರೆಸ್‌ನ ಸೋನಿಯಾ ಗಾಂಧಿ ಅವರನ್ನು ನಿಮ್ಮದು ಯಾವ ಪಕ್ಷ ಎಂದು ಕೇಳಿವ ಪರಿಸ್ಥಿತಿ ಬಂದಿದೆ: ಬಿಎಸ್‌ವೈ

ಹೂವಿನಹಡಗಲಿ(ಅ.14):  ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ, ಆಸೆ ಈಡೇರಲು ಸಾಧ್ಯವಿಲ್ಲ, ಅದು ತಿರುಕನ ಕನಸು ಅಷ್ಟೇ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆರೋಪಿಸಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಜನಸಂಕಲ್ಪ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದಲ್ಲಿ ದಿವಾಳಿ ಅಂಚಿಗೆ ಬಂದಿರುವ ಕಾಂಗ್ರೆಸ್‌ನ ಸೋನಿಯಾ ಗಾಂಧಿ ಅವರನ್ನು ನಿಮ್ಮದು ಯಾವ ಪಕ್ಷ ಎಂದು ಕೇಳಿವ ಪರಿಸ್ಥಿತಿ ಬಂದಿದೆ. ದೇಶದಲ್ಲಿ ಕಾಂಗ್ರೆಸ್‌ ನೂರು ಪಾದಯಾತ್ರೆ ಮಾಡಿದರೂ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ, ಈ ಬಾರಿ ರಾಜ್ಯದಲ್ಲಿ ಬಿಜೆಪಿ 150 ಸ್ಥಾನಗಳನ್ನು ಗೆಲ್ಲುತ್ತದೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗುಡುಗಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ದೇಶ ಹಾಗೂ ರಾಜ್ಯದಲ್ಲಿ ಪಕ್ಷದ ಸ್ಥಿತಿಗತಿ ಕುರಿತು ಸರ್ವೇ ನಡೆಯಲಿದೆ. ಸರ್ವೇ ವರದಿಯಂತೆ ಟಿಕೆಟ್‌ ಹಂಚಿಕೆಯಾಗಲಿದೆ. ಆದರಿಂದ ಎಲ್ಲರೂ ಒಗ್ಗಟ್ಟಾಗಿದ್ದು ಪಕ್ಷ ಸಂಘಟನೆ ಕಡೆಗೆ ಹೆಚ್ಚು ಒತ್ತು ನೀಡಬೇಕು. ಕೇಂದ್ರ, ರಾಜ್ಯ ಸರ್ಕಾರಗಳ ಸಾಧನೆಗಳನ್ನು ಜನರಿಗೆ ತಿಳಿಸುವ ಮೂಲಕ ಪಕ್ಷವನ್ನು ಬಲಾಢ್ಯಗೊಳಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಕಾಂಗ್ರೆಸ್‌ 85 ಪರ್ಸೆಂಟ್‌ ಕಮಿಷನ್‌ ಹೊಡೀತಿತ್ತು: ರಾಜೀವ್‌ ಗಾಂಧಿ ಹೇಳಿಕೆ ಪ್ರಸ್ತಾಪಿಸಿದ ಸಿಎಂ

ಎಸ್ಸಿ ಎಸ್ಟಿ ಜನಾಂಗದ ಬಗ್ಗೆ ಕಾಂಗ್ರೆಸ್‌ಗೆ ಈಗ ಕಾಳಜಿ ಬಂದಿದೆ, ನಿಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಏನು ಮಾಡಿದ್ದೀರಿ? ಮೀಸಲಾತಿ ಹೆಚ್ಚಳ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲ, ಇದೊಂದು ನೀಚ ಪಕ್ಷ, ಜನಪರ ಕಾಳಜಿಯೇ ಇಲ್ಲದಂತಾಗಿದೆ. ಈ ಹಿಂದೆ ರಾಜ್ಯವನ್ನೇ ಲೂಟಿ ಮಾಡಿದ್ದ ಕಾಂಗ್ರೆಸ್‌ಗೆ ಮತ್ತೆ ಅವಕಾಶ ಕೊಡಬೇಡಿ, ಮುಂಬರುವ ಚುನಾವಣೆ ಬಹಳ ಮಹತ್ವದಾಗಿದೆ. ಆದರಿಂದ ಎಲ್ಲರೂ ಪ್ರತಿ ಬೂತ್‌ನಲ್ಲಿ ಕೆಲಸ ಮಾಡಬೇಕೆಂದು ಹೇಳಿದರು.

ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್‌ ಈ ಹಿಂದೆ ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ .12 ಲಕ್ಷ ಕೋಟಿ ಹಗರಣ ಮಾಡಿದೆ, ಆದರಿಂದ ಹಗರಣಗಳ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಂದು ಕಾಂಗ್ರೆಸ್‌ಗೆ ಎದುರೇಟು ನೀಡಿದರು.

ಸಚಿವ ಗೋವಿಂದ ಕಾರಜೋಳ ಮಾತನಾಡಿ, ಕಾಂಗ್ರೆಸ್‌ ಮುಳುಗುವ ಹಡಗು. 75 ವರ್ಷದಲ್ಲಿ ಬಡವರಿಗೆ ಅಗತ್ಯವಿರುವ ಯಾವ ಯೋಜನೆ ತಂದಿದ್ದಾರೆಂದು ಹೇಳಲಿ? ಎಂದು ಸವಾಲು ಹಾಕಿದ ಸಚಿವರು, ಕಾಂಗ್ರೆಸ್‌ ಜಾತಿ ಜಾತಿ ಮಧ್ಯೆ ವಿಷಬೀಜ ಬಿತ್ತುವ ಮೂಲಕ ಭಯದ ವಾತಾವರಣ ಸೃಷ್ಟಿಸಿದ್ದಾರೆ. ಅವರು ಬರಿ ಬೊಗಳೆ ಬಿಡುತ್ತಿದ್ದಾರೆಂದು ಆರೋಪಿಸಿದರು.

ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಬಿಜೆಪಿ ಸರ್ಕಾರ ನುಡಿದಂತೆ ನಡೆದುಕೊಂಡಿದೆ. ಕೊಟ್ಟಮಾತನ್ನು ಉಳಿಸಿಕೊಂಡಿದ್ದೇವೆ. ವಿಜಯನಗರ ಜಿಲ್ಲೆಯ 5 ಸ್ಥಾನಗಳನ್ನು ಬಿಜೆಪಿ ಅಭ್ಯರ್ಥಿಗಳೇ ಗೆಲ್ಲುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ಸಚಿವ ಶ್ರೀರಾಮುಲು ಮಾತನಾಡಿ, ಹಡಗಲಿಯಲ್ಲಿ ಕಳೆದ ಬಾರಿ ನಮ್ಮ ತಪ್ಪಿನಿಂದ ಕಾಂಗ್ರೆಸ್‌ ಗೆದ್ದಿದೆ. ಆದರೆ ಈಗ ನಾವೆಲ್ಲ ಒಂದಾಗಿದ್ದೇವೆ, ಕಮಲ ಅರಳಿಸಿ ವಿಧಾನಸೌಧದ ಮೂರನೇ ಮಹಡಿಯಲ್ಲಿ ಮತ್ತೆ ಬಿಜೆಪಿ ಸರ್ಕಾರ ತರುತ್ತೇವೆ ಎಂದು ಹೇಳಿದರು.

Bharath Jodo Yatra: ರೇಷ್ಮೆ ಸೀರೆ ನೆಲದಲ್ಲಿ ರಾಹುಲ್‌ ನಡಿಗೆ: ಪಾದಯಾತ್ರೆ ಇಂದು ಆಂಧ್ರ ಪ್ರವೇಶ

ಸಚಿವ ಆನಂದ್‌ಸಿಂಗ್‌, ಶಾಸಕ ಕೆ. ಕರುಣಾಕರೆಡ್ಡಿ, ವಿಧಾನ ಪರಿಷತ್‌ ಸದಸ್ಯ ರವಿಕುಮಾರ, ವಿಧಾನ ಪರಿಷತ್‌ ಮಾಜಿ ಸದಸ್ಯ ಶಶಿಲ್‌ ನಮೋಶಿ, ಮಾಜಿ ಶಾಸಕ ಚಂದ್ರನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್‌, ಮಂಡಲ ಅಧ್ಯಕ್ಷ ಎಸ್‌. ಸಂಜೀವರೆಡ್ಡಿ, ಓದೋ ಗಂಗಪ್ಪ, ರಾಮನಾಯ್ಕ, ಎಂ.ಬಿ. ಬಸವರಾಜ, ಮಧುನಾಯ್ಕ, ದೂದಾನಾಯ್ಕ, ರವಿಕುಮಾರ ನಾಯ್ಕ, ಶಿವಪುರ ಸುರೇಶ ಇತರರಿದ್ದರು.

ಮೂರು ಮುಖ ಜೋಡಿಸುವ ಜೋಡೋ ಯಾತ್ರೆ!

ರಾಜ್ಯದಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ ಜೋಡೋ ಯಾತ್ರೆಗೆ ಮಹತ್ವ ಇಲ್ಲ. ಕಾಂಗ್ರೆಸ್‌ನ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಹಾಗೂ ಮಲ್ಲಿಕಾರ್ಜುನ ಖರ್ಗೆ, ಈ ಮೂರು ಮುಖಗಳನ್ನು ಜೋಡಿಸುವ ಜೋಡೋ ಯಾತ್ರೆಯಾಗಿದೆ ಎಂದು ಸಚಿವ ಗೋವಿಂದ ಕಾರಜೋಳ ಟೀಕಿಸಿದರು.

ಸಿಎಂ ವೆಲ್‌ಕಮ್‌ ಬೋರ್ಡ್‌ಗೆ ಯಡಿಯೂರಪ್ಪ ಆಕ್ಷೇಪ!

ಬಿಜೆಪಿ ಟಿಕೆಟ್‌ ನೀಡಿದವರನ್ನು ಬೆಂಬಲಿಸಬೇಕೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವೇದಿಕೆಯಲ್ಲಿ ಹೇಳುತ್ತಿದಂತೆಯೇ ಜನಸಂಕಲ್ಪ ಯಾತ್ರೆಯಲ್ಲಿದ್ದ ಕಾರ್ಯಕರ್ತರು ತಮ್ಮ ನಾಯಕರ ಪರವಾಗಿ ಸಿಎಂ ವೆಲ್‌ಕಮ್‌ ಬೋರ್ಡ್‌ ಎತ್ತಿ ಹಿಡಿದು ಕೇಕೆ ಹಾಕುತ್ತಿದಂತೆಯೇ ಸಿಟ್ಟಿಗೆದ್ದ ಬಿಎಸ್‌ವೈ ಎಯ್‌ ಸುಮ್ಮನೇ ಕುಳಿತುಕೊಳ್ಳಿ, ಇವೆಲ್ಲಾ ನಡೆಯುವುದಿಲ್ಲವೆಂದು ಗದರಿಸಿದ ಪ್ರಸಂಗ ನಡೆಯಿತು.