ಕಾಂಗ್ರೆಸ್‌ನವರಿಗೆ ಮತ ಕೇಳುವ ಯಾವ ನೈತಿಕ ಹಕ್ಕಿಲ್ಲ: ಬಿ.ಎಸ್‌.ಯಡಿಯೂರಪ್ಪ

ಇಡೀ ದೇಶವನ್ನು ಅವನತಿ ಹಾದಿಗೆ ನೂಕಿದ ಕಾಂಗ್ರೆಸ್‌ ನವರು ಮತ ಕೇಳಲು ಬಂದ್ರೆ ಮನೆ ಬಾಗಿಲಿಗೆ ಬಿಟ್ಟುಕೊಳ್ಳಬೇಡಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು. 

Former CM BS Yediyurappa Outraged Against On Congress At Chitradurga gvd

ಚಿತ್ರದುರ್ಗ (ಮಾ.21): ಇಡೀ ದೇಶವನ್ನು ಅವನತಿ ಹಾದಿಗೆ ನೂಕಿದ ಕಾಂಗ್ರೆಸ್‌ ನವರು ಮತ ಕೇಳಲು ಬಂದ್ರೆ ಮನೆ ಬಾಗಿಲಿಗೆ ಬಿಟ್ಟುಕೊಳ್ಳಬೇಡಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು. ಜನ ಸಂಕಲ್ಪ ಯಾತ್ರೆ ಅಂಗವಾಗಿ ಇಲ್ಲಿನ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಸೋಮವಾರ ಆಯೋಜಿಸಲಾದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಐವತ್ತು ವರ್ಷ ತೊಗಲಕ್‌ ದರ್ಬಾರ್‌ ರೀತಿ ಆಡಳಿತ ನಡೆಸಿದ ಕಾಂಗ್ರೆಸ್‌ನವರು ದೇಶವ ಸರ್ವ ನಾಶ ಮಾಡಿದ್ದಾರೆ. ಅವರಿಗೆ ಮತ ಕೇಳುವ ಯಾವ ನೈತಿಕ ಹಕ್ಕಿಲ್ಲವೆಂದರು. ತಾವು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಭಾಗ್ಯಲಕ್ಷ್ಮಿ ಯೋಜನೆ ಹೆಚ್ಚು ಮಂದಿ ಅಲ್ಪ ಸಂಖ್ಯಾತ ಮಹಿಳೆಯರಿಗೆ ಅನುಕೂಲವಾಗಿದೆ. ಇಂತಹ ಯಾವ ಕೆಲಸವನ್ನು ಕಾಂಗ್ರೆಸ್ಸಿಗರು ಮಾಡಿಲ್ಲ. ಬದಲಾಗಿ ಜಾತಿ ವಿಷ ಬೀಜ ಬಿತ್ತುತ್ತ ಶಾಂತಿ ಕದಡುತ್ತಿದ್ದಾರೆ ಎಂದರು.

ಸಮಗ್ರ ಅಭಿವೃದ್ಧಿಗೆ ಒತ್ತು: ಬಿಜೆಪಿ ಅಧಿಕಾರದಲ್ಲಿ ಹಾಲು ಉತ್ಪಾದಕರಿಗೆ ಪ್ರೋತ್ಸಾಹ, ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನೀಡಿ ಅನ್ನದಾತರು ಸ್ವಾಭಿಮಾನದಿಂದ ಬದುಕುವಂತ ಕೆಲಸ ಮಾಡಿದ್ದೇವೆ. ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದ ನೀರಾವರಿ ಯೋಜನೆ ಜಾರಿಗೆ ತಂದಿದ್ದೇನೆ. ಇಂತಹ ಜನಪರ ಕಾರ್ಯಗಳ ನೀವೇಕೆ ಮಾಡಲಿಲ್ಲವೆಂದು ಪರೋಕ್ಷವಾಗಿ ಕಾಂಗ್ರೆಸ್ಸಿಗರನ್ನು ಪ್ರಶ್ನಿಸಿದರು. ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆ ಘೋಷಣೆ ಆಗುತ್ತಿದ್ದು, ಕೇಂದ್ರಸರ್ಕಾರ 5300 ಕೋಟಿ ರು.ನೆರವು ಘೋಷಿಸಿದೆ. ಕಳಸಾ ಬಂಡೂರಿಗೆ ರಾಜ್ಯ ಸರ್ಕಾರ ಸಾವಿರ ಕೋಟಿ ರು, ಕೃಷ್ಣ ಮೇಲ್ದಂಡೆಗೆ ಮೇಲ್ದಂಡೆಗೆ ಐದು ಸಾವಿರ ಕೋಟಿ ರು.ಅನುದಾನ ಕಾಯ್ದರಿಸಿದೆ. 

ದೊಡ್ಡ ರಾಜ್ಯಗಳಲ್ಲೇ ಕಾಂಗ್ರೆಸ್‌ಗೆ ಅಡ್ರೆಸ್ ಇಲ್ಲ, ಅವರಿಗೆ ನಾಚಿಕೆ ಆಗಬೇಕು: ಬಿ.ಎಸ್.ಯಡಿಯೂರಪ್ಪ

ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ನಾಡಿನ ಸಮಗ್ರ ಅಭಿವೃದ್ಧಿಗೆ ಡಬಲ್‌ ಇಂಜಿನ್‌ ಸರ್ಕಾರ ಸಿದ್ಧವಿದೆ. ಯೋಜನೆಗಳ ಮನೆ ಮನೆಗೆ ತಲುಪಿಸುವ ಕೆಲಸವ ಮಹಿಳೆಯರು ಮಾಡಬೇಕೆಂದು ಯಡಿಯೂರಪ್ಪ ವಿನಂತಿಸಿದರು. ಕಾಂಗ್ರೆಸ್‌ ಪಕ್ಷ ಮುಳುಗುತ್ತಿರುವ ಹಡಗು. ಅಲ್ಲಿನ ನಾಯಕರು ಅಧಿಕಾರಕ್ಕೆ ಬರುವ ತಿರುಕನ ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್‌ ಈ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿತ್ತು. ಶಾಪದ ಫಲವಾಗಿ ಸರ್ವ ನಾಶವಾಗುತ್ತಿದೆ. ದೊಡ್ಡ ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಅಡ್ರೆಸ್‌ ಇಲ್ಲ. ಕಾಂಗ್ರೆಸ್‌ ಮುಕ್ತ ಭಾರತ ಆಗುವ ಕಾಲ ಸನ್ನಿಹಿತವಾಗಿದೆ ಎಂದರು.

ತಿಪ್ಪಾರೆಡ್ಡಿಗೆ ಪ್ರಚಾರದ ಅಗತ್ಯವಿಲ್ಲ: ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ ಗೆಲ್ಲಿಸಲು ಪ್ರಚಾರದ ಅಗತ್ಯವಿಲ್ಲ. ಅವರೀಗಾಗಲೇ 50 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ. ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಲು ಅವರು ಜವಾಬ್ದಾರಿ ತೆಗೆದುಕೊಳ್ಳಬೇಕೆಂದು ಯಡಿಯೂರಪ್ಪ ಹೇಳಿದರು. ಮಾದರಿ ಶಾಸಕರಾಗಿ ತಿಪ್ಪಾರೆಡ್ಡಿ ರಾಜ್ಯದಲಿ ಕೆಲಸ ಮಾಡಿದ್ದಾರೆ. ಅವರ ಅಭಿವೃದ್ದಿ ಕೆಲಸಗಳು ಬೇರೆಯವರಿಗೆ ಪ್ರೇರಣೆ. ನನಗೆ 80 ವರ್ಷ ವಯಸ್ಸಾಗಿದ್ದು ಮನೆಯಲ್ಲಿ ಕೂರುವ ಪ್ರಶ್ನೆಯೇ ಇಲ್ಲ. ಬಿಜೆಪಿ ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದ್ದೇನೆ. ನಾನೀಗೆ ಬೆಂಗಳೂರಿಗೆ ಹೋಗಿ ನಾಳೆ ಮತ್ತೆ ತುಮಕೂರಿಗೆ ವಾಪಾಸ್ಸಾಗಿ ಜನ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ಯಡಿಯೂರಪ್ಪ ಹೇಳಿದರು.

ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಫಲಾನುಭವಿಗಳ ಸಮಾವೇಶಕ್ಕೆ 50 ಸಾವಿರ ಜನ ಸೇರುತ್ತಿದ್ದಾರೆ. ವಿಜಯ ಸಂಕಲ್ಪ ಯಾತ್ರೆಗೆ ಪ್ರತಿ ಕ್ಷೇತ್ರದಲ್ಲಿ 20ಸಾವಿರ ಜನ ಜಮಾವಣೆಯಾಗುತ್ತಿದ್ದಾರೆ. ಜನರ ವಿಶ್ವಾಸ ಗಳಿಸಿದ ಜನನಾಯಕ ಜನರ ಮುಂದೆ ಬರುತ್ತಾನೆ ಎಂದರು. ಕೋವಿಡ್‌ ಎದುರಿಸುವ ಶಕ್ತಿ ಭಾರತಕ್ಕಿದೆ ಎಂದು ಮೋದಿ ತೋರಿಸಿದದರು. ಸಂಕಷ್ಟಕಾಲದಲ್ಲಿ ಉಚಿತ ವ್ಯಾಕ್ಸಿನ್‌, ಅಕ್ಕಿ ಸೌಲಭ್ಯ, ಪ್ರತಿ ನಾಗರಿಕರಿಗೆ ಆಯುಷ್ಮಾನ್‌ ಭಾರತ್‌ ಯೋಜನೆ ಜಾರಿಗೆ ತಂದರು. ಗ್ಯಾರಂಟಿ ಕಾರ್ಡ್‌ ಕೊಟ್ಟು ನಾವು ಚುನಾವಣೆಗೆ ಬಂದಿಲ್ಲ. ಭದ್ರಾ ಮೇಲ್ದಂಡೆ ಯೋಜನೆ ಮೂಲಕ ನೀರು ಕೊಟ್ಟಿದ್ದೇವೆ. ಕೇಂದ್ರ ಸರ್ಕಾರದಿಂದ 5.300ಕೋಟಿ ರು ಕೊಟ್ಟಿದ್ದೇವೆ. ನೇರ ರೈಲು ಮಾರ್ಗ ಯೋಜನೆ ಜಾರಿಗೆ ತಂದಿದ್ದೇವೆ ಎಂದರು.

ಚುನಾವಣೆಗೂ ಮುನ್ನವೇ ಬೆಟ್ಟಿಂಗ್‌: ಬೆಳ್ಳಿ ಪ್ರಕಾಶ್ ಗೆಲ್ಲುತ್ತಾರೆಂದು ತನ್ನ ಇಡೀ ಆಸ್ತಿಯನ್ನೇ ಬಾಜಿಗಿಟ್ಟ ವ್ಯಕ್ತಿ!

ಪ್ರಾಸ್ತಾವಿಕ ಮಾತುಗಳನ್ನಾಡಿದ ಶಾಸಕ ತಿಪ್ಪಾರೆಡ್ಡಿ, ಪ್ರಧಾನಿ ನರೇಂದ್ರ ಮೋದಿ ಅವರಿಂದಾಗಿ ಭಾರತ ವಿಶ್ವಮಾನ್ಯ ಪಡೆದಿದೆ. ಭಾರತೀಯರು ಎದೆಯುಬ್ಬಿಸಿಕೊಂಡು ವಿದೇಶಗಳಲ್ಲಿ ಓಡಾಡುವಂತಾಗಿದೆ. ಚಿತ್ರದುರ್ಗ ವಿಧಾನಸಭೆ ಕ್ಷೇತ್ರಕ್ಕೆ ಸಾವಿರಾರು ಕೋಟಿ ರುಪಾಯಿ ಅನುದಾನ ತಂದು ಅಭಿವೃದ್ಧಿಪಡಿಸಲಾಗಿದೆ. ಇನ್ನೊಂದಿಷ್ಟುಅಲ್ಪ ಸ್ವಲ್ಪ ಕೆಲಸ ಮಾತ್ರ ಬಾಕಿ ಇವೆ. ಈ ಬಾರಿಯ ಚುನಾವಣೆಯಲ್ಲಿ ಮತ್ತೆ ಗೆಲ್ಲಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರ ಕೈ ಬಲ ಪಡಿಸುವಂತೆ ಮನವಿ ಮಾಡಿದರು. ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌, ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ, ಯವ ಮುಖಂಡ ಅನಿತ್‌ ಕುಮಾರ್‌, ಮಲ್ಲಿಕಾರ್ಜುನ, ಓಬಿಸಿ ಅಧ್ಯಕ್ಷ ಸಂಪತ್‌. ಡಾ.ಸಿದ್ದಾರ್ಥ ಗುಂಡಾರ್ಪಿ, ಸಿದ್ದೇಶ್‌ ಯಾದವ್‌ ಇದ್ದರು.

Latest Videos
Follow Us:
Download App:
  • android
  • ios