ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಅವ್ಯವಹಾರಗಳ ಸಂಬಂಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎಸ್‌. ಸುರೇಶ್‌ (ಬೈರತಿ) ತಿಳಿಸಿದರು. 

ವಿಧಾನ ಪರಿಷತ್‌ (ಜು.25): ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಅವ್ಯವಹಾರಗಳ ಸಂಬಂಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎಸ್‌. ಸುರೇಶ್‌ (ಬೈರತಿ) ತಿಳಿಸಿದರು. ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಅವ್ಯವಹಾರದಿಂದ ಆಗಿರುವ ನಷ್ಟವನ್ನು ಭರಿಸಲು ಪ್ರಾಧಿಕಾರದ ಹಿಂದಿನ ಅಧ್ಯಕ್ಷರ ವಿರುದ್ಧ ಸಿವಿಲ್‌ ಪ್ರಕರಣ ದಾಖಲಿಸಿ ವಸೂಲು ಮಾಡಲಾಗುವುದು ಜೊತೆಗೆ ಕರ್ತವ್ಯ ಲೋಪ ಎಸಗಿರುವುದಕ್ಕೆ ಐಪಿಸಿ 409 ಅಡಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಬೀದರ್‌ ಎಸ್‌ಪಿ ಅವರಿಗೆ ಕೋರಲಾಗಿದೆ ಎಂದರು.

ಪ್ರಾಧಿಕಾರದಲ್ಲಿನ ಅವ್ಯವಹಾರದ ಬಗ್ಗೆ ಸಾಕಷ್ಟು ದೂರುಗಳು ಬಂದ ನಂತರ ಕಲಬುರಗಿಯ ಪ್ರಾದೇಶಿಕ ಆಯುಕ್ತರು ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ತನಿಖಾ ತಂಡವನ್ನು ಸರ್ಕಾರ ರಚಿಸಿತು. ಈ ಸಮಿತಿ ಸಲ್ಲಿಸಿದ ತನಿಖಾ ವರದಿಯಲ್ಲಿ ಪ್ರಾಧಿಕಾರದ ಆಯುಕ್ತರು ಹಾಗೂ ಅಧ್ಯಕ್ಷರು ನಿಯಮ ಉಲ್ಲಂಘಿಸಿ ಬೀದರ್‌ ನಗರದ ಚಿದ್ರ ಮತ್ತು ನೌಬಾದ್‌ನಲ್ಲಿ ನಿವೇಶನ ಹಂಚಿಕೆ ಮಾಡುವಲ್ಲಿ ನಿಯಮ ಉಲ್ಲಂಘಿಸಿದ್ದಾರೆ. ಇದರಿಂದ ಪ್ರಾಧಿಕಾರಕ್ಕೆ ಆರ್ಥಿಕ ನಷ್ಟ ಉಂಟಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಉಲ್ಲೇಖಿಸಲಾಗಿದೆ ಎಂದು ಸಚಿವರು ವಿವರಿಸಿದರು.

ಹು-ಧಾದ ಅನಧಿಕೃತ ಬಡಾವಣೆ ತೆರವಿಗೆ ಕ್ರಮ: ಹುಬ್ಬಳ್ಳಿ-ಧಾರವಾಡದಲ್ಲಿ ತಲೆ ಎತ್ತಿರುವ ಅನಧಿಕೃತ ಬಡಾವಣೆಗಳ ಬಗ್ಗೆ ನಗರಾಭಿವೃದ್ಧಿ ಪ್ರಾಧಿಕಾರದ ಗಮನಕ್ಕೆ ಬಂದ ನಂತರ ಆಯಾ ಜಮೀನಿನ ಮಾಲೀಕರಿಗೆ ತಹಶೀಲ್ದಾರ್‌ ಮೂಲಕ ನೋಟಿಸಿ ಜಾರಿ ಮಾಡಿ ಅಂತಹ ಬಡಾವಣೆಗಳ ತೆರವಿಗೆ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ 15 ದಿನದಲ್ಲಿ ಖುದ್ದಾಗಿ ಸಭೆ ಕರೆದು ಪರಿಶೀಲಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬಿ.ಎಸ್‌. ಸುರೇಶ್‌ (ಬೈರತಿ) ತಿಳಿಸಿದರು. ಬಿಜೆಪಿಯ ಪ್ರದೀಪ್‌ ಶೆಟ್ಟರ್‌ ಅವರ ಪ್ರಶ್ನೆಗೆ ಉತ್ತರಿಸಿದರು.

ನಂದಿನಿ ಹಾಲಿನ ದರ ಏರಿಕೆಗೆ ಹೈಕೋರ್ಟ್‌ ಅಸ್ತು: ತಜ್ಞರ ಅನಿಸಿಕೆ, ನಿರ್ದಿಷ್ಟ ನೀತಿಯಂತೆ ಏರಿಕೆ

ಕಳೆದ 2023-24ನೇ ಸಾಲಿನಲ್ಲಿ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಿಂದ 122 ಖಾಸಗಿ ಬಡಾವಣೆಗಳನ್ನು ನಿರ್ಮಾಣ ಮಾಡಲು ಅನುಮೋದನೆ ನೀಡಲಾಗಿದೆ ಎಂದರು. ಇದಕ್ಕೂ ಮುನ್ನ ಮಾತನಾಡಿದ ಪ್ರದೀಪ್ ಶೆಟ್ಟರ್‌, ಕಳೆದ 14 ತಿಂಗಳ ಅವಧಿಯಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ ಸಿಕ್ಕಾಪಟ್ಟೆ ಅನಧಿಕೃತ ಬಡಾವಣೆಗಳು ಆರಂಭವಾಗಿವೆ. ಇಂತಹ ಬಡಾವಣೆಗಳ ವಿರುದ್ಧ ಕೇವಲ ನೋಟಿಸ್ ನೀಡಿದರೆ ಸಾಕಾಗುವುದಿಲ್ಲ. ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.