ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಕ್ಕೆ ಸಂಬಂಧಿಸಿದಂತೆ ಫೈಟ್ ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜೆಡಿಎಸ್‌ನ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಡುವೆ ವಾಕ್ಸಮರ
ಬೆಂಗಳೂರು (ಅ.03): ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ (Karnataka By Election) ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಜೆಡಿಎಸ್‌ನ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (HD Kumaraswamy) ನಡುವೆ ವಾಕ್ಸಮರ ನಡೆದಿದೆ.
‘ಬಿಜೆಪಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ಜೆಡಿಎಸ್ ಪಕ್ಷ ಈ ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ’ ಎಂದು ಸಿದ್ದರಾಮಯ್ಯ (Siddaramaiah) ಹರಿಹಾಯ್ದಿದ್ದಾರೆ.
ಇದಕ್ಕೆ ಪ್ರತ್ಯುತ್ತರ ನೀಡಿರುವ ಕುಮಾರಸ್ವಾಮಿ, ‘ನನಗೆ ಆರ್ಡರ್ ಮಾಡಲು ಮತ್ತು ಕಮೆಂಟ್ ಮಾಡಲು ಸಿದ್ದರಾಮಯ್ಯ ಯಾರು? ಎಲ್ಲಿ ಯಾವ ಅಭ್ಯರ್ಥಿಯನ್ನು ಹಾಕಬೇಕು ಎಂದು ನಾವು ಅವರನ್ನು ಕೇಳಬೇಕಾ? ಇವರ ಮುಂದೆ ಅರ್ಜಿ ಹಿಡಿದುಕೊಂಡು ನಿಲ್ಲಬೇಕಾ? ನಮ್ಮ ಪಕ್ಷದ ವಿಚಾರ ಡಿಕ್ಟೇಟ್ ಮಾಡುವುದಕ್ಕೆ ಸಿದ್ದರಾಮಯ್ಯ ಯಾರು?’ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಾಗಿಲು ತಟ್ಟಿದ್ದು ಕಾಂಗ್ರೆಸ್, ದೊಣ್ಣೆ ನಾಯಕನ ಕೇಳಿ ಅಭ್ಯರ್ಥಿ ಹಾಕ್ಬೇಕಾ? ಸಿದ್ದು ವಿರುದ್ಧ HDK ವಾಗ್ದಾಳಿ!
ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಜೆಡಿಎಸ್ ಪಕ್ಷದವರು ಬಸವಕಲ್ಯಾಣದಲ್ಲೂ ಇದೇ ರೀತಿ ಮಾಡಿದ್ದರು. ಈಗಲೂ ಬಿಜೆಪಿಗೆ (BJP) ಅನುಕೂಲ ಮಾಡಿಕೊಡಲೆಂದೇ ಮುಸ್ಲಿಂ ಸಮುದಾಯದವರಿಗೆ ಟಿಕೆಟ್ ನೀಡಿದ್ದಾರೆ. ಮುಸ್ಲಿಂ ಸಮುದಾಯದ ಬಗ್ಗೆ ಕಾಳಜಿ ಇದ್ದರೆ ಸಂಪುಟದಲ್ಲಿ ಏಕೆ ಯಾರಿಗೂ ಅವಕಾಶ ನೀಡಲಿಲ್ಲ. ಮಂಡ್ಯ, ಮೈಸೂರಿನಲ್ಲಿ ಅಲ್ಪಸಂಖ್ಯಾತರಿಗೆ ಏಕೆ ಟಿಕೆಟ್ ನೀಡಲಿಲ್ಲ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರ ಈ ಹೇಳಿಕೆಗೆ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಉಪಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿ (Muslim Candidate) ಕಣಕ್ಕಿಳಿಸಿದರೆ ಬಿಜೆಪಿಗೆ ಅನುಕೂಲವಾಗಲಿದೆ ಎಂದು ಹಾಕಿದ್ದೇನೆ ಎನ್ನುತ್ತಾರೆ. ಹಿಂದುಳಿದ ವರ್ಗದವರನ್ನು ಹಾಕಿದರೆ ಕಾಂಗ್ರೆಸ್ ಮುಗಿಸುವುದಕ್ಕೆ ಎನ್ನುತ್ತಾರೆ. ಏನೇ ಮಾಡಿದರೂ ಮಾತನಾಡುತ್ತಾರೆ. ನನಗೆ ಆರ್ಡರ್ ಮಾಡಲು, ಕಮೆಂಟ್ ಮಾಡಲು ಅವರಾರಯರು? ಅವರನ್ನು ಕೇಳಿ ನಾವು ಅಭ್ಯರ್ಥಿಯನ್ನು ಹಾಕಬೇಕಾ ಎಂದು ಗರಂ ಆದರು.
ಎತ್ತಿನಹೊಳೆ ಯೋಜನೆಯಲ್ಲಿ (Ettinahalli) ಯಾರು ಕಿಸೆ ತುಂಬಿಸಿಕೊಂಡಿದ್ದಾರೆ ಮತ್ತು ಗುತ್ತಿಗೆದಾರರ ಜೇಬು ತುಂಬಿಸಿದ್ದಾರೆ ಗೊತ್ತಿದೆ. ರೈತರಿಗೆ ಪರಿಹಾರ ಕೊಡಲು ಅವರ ಕೈಯಲ್ಲಿ ಆಗಿಲ್ಲ. ನಾನು ನಾಡಿನ ಜನತೆಗೆ ದ್ರೋಹ ಮಾಡುವ ಕುಟುಂಬದಿಂದ ಬಂದಿಲ್ಲ. ಎತ್ತಿನಹೊಳೆ ಯೋಜನೆಯನ್ನು ಜಾರಿ ಮಾಡಲು ನನ್ನ ಬಿಟ್ಟರಾ? ರೈತರಿಗೆ ಹಣ ಕೊಡಲು ಖಜಾನೆಯಲ್ಲಿ ದುಡ್ಡು ಇಟ್ಟಿದ್ದೀರಾ ಎಂದು ರಮೇಶ್ ಕುಮಾರ್ ಕೇಳಿದ್ದರು. ಸಿದ್ದರಾಮಯ್ಯ ಅವರು ಚಿಕ್ಕಬಳ್ಳಾಪುರದಲ್ಲಿ (Chikkaballapura) ಎತ್ತಿನಹೊಳೆಗೆ ಬುನಾದಿ ಹಾಕಿದರು. ನಾವು ಅದಕ್ಕೆ ವಿರೋಧ ಮಾಡುತ್ತಿದ್ದೇವಾ? ಎಲ್ಲಿಂದಾದರೂ ನೀರು ಕೊಡಿ ಎಂದು ಕೇಳಿದ್ದೆವು. ಈಗ ಯೋಜನೆ ವೆಚ್ಚ 26 ಸಾವಿರ ಕೋಟಿ ರು.ಗೆ ಹೋಗಿದೆ. ನಾನು ಇದ್ದಾಗ ಖಜಾನೆ ತುಂಬಿ ತುಳುಕುತ್ತಿತ್ತಾ ಎಂದು ವಾಗ್ದಾಳಿ ನಡೆಸಿದರು.
ಐದು ವರ್ಷ ಆಡಳಿತ ಮಾಡಿದ್ದರಲ್ಲ. ಈಗ ಕಾಂಗ್ರೆಸ್ ನಡಿಗೆ ಕೃಷ್ಣಾ ಕಡೆಗೆ ಎನ್ನುತ್ತಿದ್ದಾರೆ. ಐದು ವರ್ಷಗಳ ಆಡಳಿತದಲ್ಲಿ ಏನು ಕೊಟ್ಟಿದ್ದಾರೆ. ಕಾಂಗ್ರೆಸ್‌ನವರ ದ್ವಿಮುಖ ನೀತಿ ಇದು. ಎರಡೂ ರಾಷ್ಟ್ರೀಯ ಪಕ್ಷಗಳು ಅಭಿವೃದ್ಧಿ ಗುತ್ತಿಗೆ ತೆಗೆದುಕೊಂಡಿಲ್ಲ, ಅವರ ಜೇಬು ತುಂಬಿಸಿಕೊಳ್ಳುವ ಗುತ್ತಿಗೆ ತೆಗೆದುಕೊಂಡಿದ್ದಾರೆ. ನಮ್ಮ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಅವರ ತೆವಲಿಗಾಗಿ ಪಕ್ಷ ಬಿಟ್ಟು ಹೋಗಿರಬಹುದು. ಅವರಿವರ ಬಾಗಿಲು ತಟ್ಟಿಕೊಂಡು ಬಂದಿರುವುದು ಅವರು. ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಾವು ಗೆದ್ದಿರುವುದು ನಾಲ್ಕೇ ಸ್ಥಾನ. ನಮ್ಮನ್ನು ಬೆಂಬಲಿಸಿ ಎಂದು ಬರುತ್ತಿರುವವರು ಯಾರು ಎಂದು ಕುಮಾರಸ್ವಾಮಿ ಕಿಡಿಕಾರಿದರು.
ಇಂಥ ಎಚ್ಚರಿಕೆ ಬಹಳ ನೋಡಿದ್ದೇನೆ- ಸಿದ್ದು:
ಕುಮಾರಸ್ವಾಮಿ ಅವರ ಸುದೀರ್ಘ ವಾಗ್ದಾಳಿ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಸಿದ್ದರಾಮಯ್ಯ, ಇಂತಹ ಎಚ್ಚರಿಕೆ ಬಹಳ ನೋಡಿದ್ದೇನೆ. ನಾನು ಕುಮಾರಸ್ವಾಮಿ ಹೇಳಿಕೆಗೆ ರಿಯಾಕ್ಟ್ ಮಾಡಬಾರದು ಎಂದು ಕೊಂಡಿದ್ದೇನೆ ಎಂದು ಹೇಳಿದರು.
