ಬೆಂಗಳೂರು[ನ.26]: ಪ್ರಸಕ್ತ ಉಪಚುನಾವಣೆ ನಂತರ ರಾಜ್ಯದಲ್ಲೂ ರಾಜಕೀಯ ಧ್ರುವೀಕರಣ ನಡೆಯಲಿದ್ದು, ಬಿಜೆಪಿಗೆ ಸೇರಲು ಜೆಡಿಎಸ್‌ನ ಹಲವು ಶಾಸಕರು ಉತ್ಸುಕರಾಗಿದ್ದಾರೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಹಿರಿಯ ಶಾಸಕ ಅರವಿಂದ ಲಿಂಬಾವಳಿ ಹೊಸ ‘ಬಾಂಬ್‌’ ಸಿಡಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಸೇರಿದಂತೆ ದೇಶಾದ್ಯಂತ ರಾಜಕೀಯದಲ್ಲಿ ಬದಲಾವಣೆಗಳು ನಡೆದಿವೆ. ಬಿಜೆಪಿ ಸೇರ್ಪಡೆಗೆ ದೇಶಾದ್ಯಂತ ವಿವಿಧ ಪಕ್ಷಗಳ ಹಲವು ನಾಯಕರು ಅಪೇಕ್ಷೆ ಹೊಂದಿದ್ದಾರೆ. ಅಂತೆಯೇ ರಾಜ್ಯ ರಾಜಕಾರಣದಲ್ಲೂ ರಾಜಕೀಯ ಧ್ರುವೀಕರಣ ನಡೆಯಲಿದೆ. ಬಿಜೆಪಿಗೆ ಬರಲು ಜೆಡಿಎಸ್‌ ಶಾಸಕರು ಸಹ ಚಿಂತಿಸಿದ್ದಾರೆ. ಈ ಕಾರಣಕ್ಕಾಗಿಯೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಉಪ ಚುನಾವಣೆ ಬಳಿಕ ಬಿಜೆಪಿ ಬೆಂಬಲಿಸುವ ಮಾತುಗಳನ್ನಾಡುತ್ತಿದ್ದಾರೆ. ಇದು ಅವರ ರಾಜಕೀಯ ಭದ್ರತೆಯನ್ನು ತೋರಿಸುತ್ತದೆ ಎಂದು ವ್ಯಂಗ್ಯವಾಡಿದರು.

ನಮ್ಮ ಸಂಪರ್ಕದಲ್ಲಿ ಜೆಡಿಎಸ್‌ ಪಕ್ಷದ ಹಲವು ಶಾಸಕರು ಇದ್ದಾರೆ. ಆದರೆ ಈಗಲೇ ಏನೂ ಹೇಳುವುದಿಲ್ಲ. ಉಪ ಚುನಾವಣೆ ಮುಗಿದ ಬಳಿಕ ಎಲ್ಲವೂ ಗೊತ್ತಾಗಲಿದೆ ಎನ್ನುವ ಮೂಲಕ ಲಿಂಬಾವಳಿ ಕೌತುಕ ಮೂಡಿಸಿದರು.

ಉಪ ಚುನಾವಣೆ ನಡೆಯುವ ಎಲ್ಲ 15 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ. ರಾಜ್ಯದಲ್ಲಿ ಸ್ಥಿರ ಮತ್ತು ಸುಭದ್ರವಾದ ಸರ್ಕಾರ ಮುಂದುವರೆಸಲು ಜನರು ಕೂಡಾ ನಿರ್ಧರಿಸಿದ್ದಾರೆ. ವಿರೋಧ ಪಕ್ಷಗಳು ಏನೇ ಆರೋಪ ಮಾಡಿದರೂ ಬಿಜೆಪಿಗೆ ಜನ ಮತ ಹಾಕಲಿದ್ದಾರೆ. ಕುಮಾರಸ್ವಾಮಿ ಅವರು ಆರೋಪ ಮಾಡುವುದರಲ್ಲಿ ನಿಸ್ಸೀಮರು. ಚುನಾವಣೆ ಸಂದರ್ಭದಲ್ಲಿ ಮಾತ್ರವಲ್ಲ. ಸರ್ಕಾರ ರಚಿಸಿದಾಗಿನಿಂದ ನಿರಂತರವಾಗಿ ದೂಷಣೆಯಲ್ಲಿ ಅವರು ತೊಡಗಿದ್ದಾರೆ. ಇದಕ್ಕೆಲ್ಲಾ ಚುನಾವಣೆಯಲ್ಲಿ ಜನರು ಉತ್ತರ ನೀಡಲಿದ್ದಾರೆ ಎಂದು ಲಿಂಬಾವಳಿ ಹೇಳಿದರು.

ಹೋಟೆಲ್‌ನಲ್ಲಿ ಯಾರಿದ್ದರು ಅಂತ ಗೊತ್ತಿದೆ:

ಹೋಟೆಲ್‌ನಲ್ಲಿ ಯಾರಿದ್ದರು, ನೈಟ್‌ ಕ್ಲಬ್‌ನಲ್ಲಿ ಯಾರಿದ್ದರು, ಅಲ್ಲಿ ಏನೆಲ್ಲಾ ಚಟುವಟಿಕೆಗಳು ನಡೆದಿದ್ದವು ಎಂಬುದೆಲ್ಲ ಜನರಿಗೆ ಗೊತ್ತಿದೆ. ಹದಿನಾಲ್ಕು ತಿಂಗಳ ಆಡಳಿತದಲ್ಲಿ ನಡೆದ ಅವಾಂತರಗಳು ಜನರ ಅರಿವಿಗೆ ಬಂದಿವೆ ಎಂದು ಹೆಸರು ಪ್ರಸ್ತಾಪಿಸದೆ ಪರೋಕ್ಷವಾಗಿ ಕುಮಾರಸ್ವಾಮಿ ವಿರುದ್ಧ ಲಿಂಬಾವಳಿ ವಾಗ್ದಾಳಿ ನಡೆಸಿದರು.

ನಮ್ಮದು ಹಣ ಮಾಡುವ ಸಂಸ್ಕೃತಿಯಲ್ಲ. ನಮ್ಮದು ಜನ ಸೇವೆ ಮಾಡುವ ಸಂಸ್ಕೃತಿ. ಹದಿನಾಲ್ಕು ತಿಂಗಳ ಆಡಳಿತದಲ್ಲಿ ಏನೆಲ್ಲಾ ಮಾಡಿದ್ದಾರೆ ಎಂಬುದು ಸಹ ಜನರಿಗೆ ಗೊತ್ತಿದೆ. ನಮಗೆ ಹೋಟೆಲ್‌-ಕ್ಲಬ್‌ನಲ್ಲಿ ಯಾರಿದ್ದರು ಎಂಬುದು ಮುಖ್ಯವಲ್ಲ. ನಮಗೆ ರಾಜ್ಯದ ಅಭಿವೃದ್ಧಿ ಮುಖ್ಯವಾಗಿದೆ ಎಂದು ಹೇಳಿದರು.

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.