ಬೆಂಗಳೂರು, (ಡಿ.21): ಸಿಎಂ ಬಿಎಸ್ ಯಡಿಯೂರಪ್ಪನವರ ಸಂಪುಟದ ಸಚಿವರೊಬ್ಬರ ಮೇಲೆ ಭ್ರಷ್ಟಾಚಾರ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಪ್ರಧಾನಮಂತ್ರಿ ಕಚೇರಿಗೆ ದೂರು ನೀಡಲಾಗಿದೆ.

ಹೌದು...ಅಬಕಾರಿ ಸಚಿವ ಹೆಚ್.ನಾಗೇಶ್  ಅವರು 1 ಕೋಟಿ ಲಂಚ ಕೇಳಿದ್ದಾರೆ ಎಂದು ಆರೋಪಿಸಿ ಅಬಕಾರಿ ಅಧಿಕಾರಿಯೊಬ್ಬರ ಪುತ್ರಿ ಪ್ರಧಾನಿ ಮೋದಿ ಕಚೇರಿಗೆ ದೂರು ನೀಡಿದ್ದಾರೆ.

ಹೊಸ ವರ್ಷಕ್ಕೆ ಹೊಸ ರೂಲ್ಸ್, BSY ಸರ್ಕಾರಕ್ಕೆ ಹೈಕೋರ್ಟ್ ಶಾಕ್; ಡಿ.21ರ ಟಾಪ್ 10 ಸುದ್ದಿ!

ಹೊಸಪೇಟೆ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಬಕಾರಿ ಅಧಿಕಾರಿಯೊಬ್ಬರು ಅನಾರೋಗ್ಯ ಹಿನ್ನೆಲೆಯಿಂದ ಬೆಂಗಳೂರಲ್ಲಿ ಖಾಲಿ ಇರುವ ಜಂಟಿ ಆಯುಕ್ತರ ಹುದ್ದೆಗೆ ನಿಯೋಜಿಸಲು ಸಚಿವರ ಬಳಿ ಮನವಿ ಮಾಡಿದ್ದಾರೆ. ಇದಕ್ಕೆ ಅಬಕಾರಿ ಸಚಿವ ನಾಗೇಶ್ ವರ್ಗಾವಣೆ ಮಾಡಲು ಒಂದು ಕೋಟಿ ರೂಪಾಯಿ ಲಂಚ ಕೇಳಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.

ಅಲ್ಲದೆ ಅಬಕಾರಿ ಇಲಾಖೆಯಲ್ಲಿ ದಲ್ಲಾಳಿಗಳನ್ನು ಇರಿಸಿ ವರ್ಗಾವಣೆಯಲ್ಲಿ ಲಂಚ ವಸೂಲಿ ಮಾಡುತ್ತಿದ್ದಾರೆ ಎಂದು ಅಧಿಕಾರಿಯ ಪುತ್ರಿ ದೂರಿನಲ್ಲಿ ಆರೋಪ ಮಾಡಿದ್ದಾಳೆ. ಈ ಬಗ್ಗೆ ಪ್ರಧಾನಿ ಕಚೇರಿಯಲ್ಲಿ POWPU/E/2020/0655623 ಸಂಖ್ಯೆಯಲ್ಲಿ ದೂರು ದಾಖಲಾಗಿದೆ.

ರಾಜ್ಯ ಸರ್ಕಾರದ ಇ-ಜನ ಸ್ಪಂದನ ಮನವಿಯು 51868298 ಈ ಸಂಖ್ಯೆಯಲ್ಲಿ ದಾಖಲಾಗಿದೆ. ಅಧಿಕಾರಿಯ ಪುತ್ರಿಯ ಈ ಕಾರ್ಯದಿಂದಾಗಿ ಭ್ರಷ್ಟಚಾರ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಇದು ಮುಂದಿನ ದಿನಗಳಲ್ಲಿ ಯಾವ ಹಂತ ಪಡೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.