ಬೆಂಗಳೂರು, (ಜ.07): ಅಧಿಕಾರದಲ್ಲಿ ಇದ್ದಾಗ ನಮ್ಮ ನಾಯಕರಿಗೆ ಕಾರ್ಯಕರ್ತರು  ನೆನಪಾಗಲಿಲ್ಲ. ಈಗ ಕಾರ್ಯಕರ್ತರ ನೆನಪಾಗಿದೆ ಎಂದು ಮಾಜಿ ಶಾಸಕ ಶಿವಶಂಕರ್ ಅವರು ತಮ್ಮ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಜೆಡಿಎಸ್​ ವರಿಷ್ಠ ಎಚ್​.ಡಿ.ದೇವೇಗೌಡ ನೇತೃತ್ವದಲ್ಲಿ ಗುರುವಾರ ನಡೆದ ಪಕ್ಷ ಸಂಘಟನಾ ಸಭೆಯಲ್ಲಿ ಮಾತನಾಡಿದ ಶಿವಶಂಕರ್​, ಹದಿನಾಲ್ಕು ತಿಂಗಳ ಅಧಿಕಾರಾವಧಿಯಲ್ಲಿ ನಾನು ಕೇವಲ ಮೂರು ಸಲ ವಿಧಾನಸೌಧಕ್ಕೆ ಬಂದಿದ್ದೆ. ಸಾಮಾನ್ಯ ಕಾರ್ಯಕರ್ತನ ತರ ಯಾವುದೋ ಕೆಲಸಕ್ಕೆ ಬಂದಿದ್ದೆ. ಆದರೆ ನನ್ನ ಕೆಲಸ ಮಾಡಿಕೊಳ್ಳಲು ಆಗಲೇ ಇಲ್ಲ. ಪಾಪ ಕುಮಾರಸ್ವಾಮಿಗೆ ಪುರುಸೊತ್ತಿರಲಿಲ್ಲ ಎಂದು ನೇರವಾಗಿ ಕುಮಾರಸ್ವಾಮಿ ಮೇಲೆ ಆಕ್ರೋಶ ಹೊರ ಹಾಕಿದರು. ಶಿವಶಂಕರ್ ಅವರ ಈ ಮಾತಿಗೆ ಇತರೆ ಕಾರ್ಯಕರ್ತರು ಚಪ್ಪಾಳೆ ತಟ್ಟಿ ಸಹಮತ ವ್ಯಕ್ತಪಡಿಸಿದರು. 

ತಮ್ಮ ನಾಯಕರ ವಿರುದ್ಧವೇ ಸಿಡಿದೆದ್ದ JDS ಶಾಸಕ: ಪಕ್ಷ ತೊರೆಯುವ ಪರೋಕ್ಷ ಎಚ್ಚರಿಕೆ

'ಸಾಕಷ್ಟು ಆಫರ್​ ಬಂದಿತ್ತು' 
ನನಗೂ ಸಾಕಷ್ಟು ಆಫರ್ ಬಂದಿತ್ತು. ಲಿಂಗಾಯತ ಸಮುದಾಯದ ನಿಮ್ಮ ಸಮಸ್ಯೆಯನ್ನು ಜೆಡಿಎಸ್​ನಲ್ಲಿ ಯಾರೂ ಕೇಳಲ್ಲ, ನಮ್ಮ ಪಕ್ಷಕ್ಕೆ ಬನ್ನಿ ಎಂದು ಸಾಕಷ್ಟು ಮಂದಿ ನನ್ನನ್ನು ಕರೆದರು. ಆದರೆ ನಾನು ಹೋಗಲಿಲ್ಲ ಎಂದು ಶಿವಶಂಕರ್ ಹೇಳಿದರು.

 ನಾನು ಲಿಂಗಾಯತ ಸಮುದಾಯದವ ಎಂಬ ಕಾರಣಕ್ಕೆ ನನ್ನ ಕೆಲಸ ಮಾಡಬೇಡಿ ಎಂದು ಕೆಲವರು ನಮ್ಮಲ್ಲೇ ಪಿತೂರಿ ಮಾಡಿದ್ದರು. ಹೀಗಾಗಿ ನನ್ನ ಸಮಸ್ಯೆಯನ್ನು ಯಾರೂ ಆಲಿಸಲಿಲ್ಲ. ಇನ್ಮುಂದಾದರು ನಿಷ್ಠಾವಂತ ಕಾರ್ಯಕರ್ತರು ಮತ್ತು ಮುಖಂಡರನ್ನು ಗುರುತಿಸಬೇಕು. ಇಲ್ಲದಿದ್ದರೆ ಮುಖಂಡರು ತಮಗೆ ಯಾವ ಪಕ್ಷದಲ್ಲಿ ಅನುಕೂಲ ಆಗುತ್ತೊ ಅಲ್ಲಿಗೆ ಹೋಗ್ತಾರೆ ಎನ್ನುವ ಮೂಲಕ ಜೆಡಿಎಸ್ ವರಿಷ್ಠರನ್ನು ಎಚ್ಚರಿಸಿದರು.