ಕೋಲಾರ, (ಜ.13): ಅಬಕಾರಿ ಸಚಿವ ಸ್ಥಾನಕ್ಕೆ ಎಚ್​. ನಾಗೇಶ್ ರಾಜೀನಾಮೆ ಕೊಡುತ್ತಿದ್ದಂತೆ ಅವರ ಸ್ವಕ್ಷೇತ್ರದಲ್ಲೇ ಕೆಲವರು ಪಟಾಕಿ ಸಿಡಿಸಿ ತೆಂಗಿನ ಕಾಯಿ ಹೊಡೆಯುವ ಮೂಲಕ ಸಂಭ್ರಮಿಸಿದರು.

ಬಿಎಸ್​ವೈ ನೇತೃತ್ವದ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೆಲವೇ ಕ್ಷಣಗಳು ಬಾಕಿ ಇರುವಾಗಲೇ ಮುಳಬಾಗಿಲು ಕ್ಷೇತ್ರದ ಶಾಸಕ ಎಚ್.ನಾಗೇಶ್ ಅವರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆಯಲಾಯಿತು.

ಅಬಕಾರಿ ಸಚಿವ ಸ್ಥಾನಕ್ಕೆ ನಾಗೇಶ್​ ರಾಜೀನಾಮೆ ನೀಡುತ್ತಿದ್ದಂತೆಯೇ ಇತ್ತೆ ಮಾಜಿ ಶಾಸಕ‌ ಕೊತ್ತೂರು ಮಂಜುನಾಥ್ ಅವರ ಬೆಂಬಲಿಗರು ಕೋಲಾರ ಜಿಲ್ಲೆಯ ಮುಳಬಾಗಿಲು ಕ್ಷೇತ್ರದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ಯಾಕೆ? ಸ್ಪಷ್ಟನೆ ಕೊಟ್ಟ ಎಚ್‌. ನಾಗೇಶ್

ಕಾರಣ ಇಲ್ಲಿದೆ
ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಜಾತಿ ಪ್ರಮಾಣ ಪತ್ರ ಅನೂರ್ಜಿತವಾದ ಹಿನ್ನಲೆ ಕೊತ್ತೂರು ಮಂಜುನಾಥ್​ರಿಗೆ ಚುನಾವಣೆಯಲ್ಲಿ ಸ್ಫರ್ಧಿಸಲು ಸಾಧ್ಯವಾಗಿರಲಿಲ್ಲ. 

ಹೀಗಾಗಿ ಮಂಜುನಾಥ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಚ್.ನಾಗೇಶ್​ರನ್ನು ಬೆಂಬಲಿಸಿದ್ದರು. ಆದರೆ ನಾಗೇಶ್ ಸಚಿವರಾದ ನಂತರ ಇವರ ನಡುವಿನ ಸ್ನೇಹದಲ್ಲಿ ಬಿರುಕು ಮೂಡಿತ್ತು ಎನ್ನಲಾಗಿದೆ.  ಈ ಹಿನ್ನೆಲೆ ಕೊತ್ತೂರು ಮಂಜುನಾಥ್ ಬೆಂಬಲಿಗರು ಮುಳಬಾಗಿಲು ಬಸ್ ನಿಲ್ದಾಣದ ಬಳಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.