ರಾಜ್ಯದಲ್ಲಿ ಆಗಸ್ಟ್‌ವರೆಗೆ ವಾಡಿಕೆಗಿಂತ ಶೇ.60ರಷ್ಟು ಮಳೆಯ ಕೊರತೆ ಉಂಟಾಗಿದ್ದರೂ ಕುಡಿಯುವ ನೀರು ಸರಬರಾಜು ಮತ್ತು ಮೇವಿನ ಲಭ್ಯತೆ ಕಡೆಗೆ ಗಮನಹರಿಸದೆ ರಾಜ್ಯ ಸರ್ಕಾರ ವರ್ಗಾವಣೆ ಧಂದೆಯಲ್ಲಿ ನಿರತವಾಗಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದರು. 

ಬೀದರ್ (ಸೆ.04): ರಾಜ್ಯದಲ್ಲಿ ಆಗಸ್ಟ್‌ವರೆಗೆ ವಾಡಿಕೆಗಿಂತ ಶೇ.60ರಷ್ಟು ಮಳೆಯ ಕೊರತೆ ಉಂಟಾಗಿದ್ದರೂ ಕುಡಿಯುವ ನೀರು ಸರಬರಾಜು ಮತ್ತು ಮೇವಿನ ಲಭ್ಯತೆ ಕಡೆಗೆ ಗಮನಹರಿಸದೆ ರಾಜ್ಯ ಸರ್ಕಾರ ವರ್ಗಾವಣೆ ಧಂದೆಯಲ್ಲಿ ನಿರತವಾಗಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದರು. ಅವರು ಇಲ್ಲಿನ ಪಕ್ಷದ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 105 ಬರ ಪೀಡಿತ ತಾಲೂಕುಗಳು ಎಂದು ಘೋಷಿಸುತ್ತೇವೆ ಎಂದು ಈಗಾಗಲೇ ಸಿಎಂ ಹೇಳಿದ್ದಾರೆ. ಆದರೆ ಇದೀಗ ಘೋಷಣೆ ಕುರಿತಂತೆ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳುತ್ತೇವೆ ಎಂದು ಸಿಎಂ ಹಾಗೂ ಕಂದಾಯ ಸಚಿವರು ಹೇಳುತ್ತಿದ್ದಾರೆ ಇದು ದ್ವಂದ್ವವಾಗಿದೆ ಎಂದರು.

ಸರ್ಕಾರದ ಕೃಪಾಕಟಾಕ್ಷತೆಯಲ್ಲಿಯೇ ವರ್ಗಾವಣೆ ನಡೆಯುತ್ತಿದ್ದರು ಸಚಿವರು ನಮಗೆ ಗೊತ್ತಿಲ್ಲ ಎನ್ನುತ್ತಿದ್ದಾರೆ. ಈಗಾಗಲೇ 60 ಪಿಡಿಒಗಳ ವೆಟಿಂಗ್ ಲಿಸ್ಟ್‌ ತಯಾರಿದೆ. ಕೂಡಲೇ ಅವರಿಗೆ ಆದೇಶ ಪತ್ರ ನೀಡಿ ಅವರಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು ಎಂದರು. ಬಿಜೆಪಿಯಲ್ಲಿ ಸಧ್ಯದ 8 ಸಂಸದರಿಗೆ ಪಕ್ಷದ ಟಿಕೆಟ್ ಕೊಡುವ ಲಕ್ಷಣಗಳು ಕಾಣುತ್ತಿಲ್ಲ ಎಂದು ಪ್ರಶ್ನಿಸಿದಾಗ ಇದರ ಬಗ್ಗೆ ಪಕ್ಷದ ವರಿಷ್ಠರು ನಿರ್ಧಾರ ಕೈಗೊಳ್ಳುತ್ತಾರೆ. ಜಿಲ್ಲೆಯಲ್ಲಿ ಸಂಸದರು ಹಾಗೂ ಶಾಸಕರ ಮಧ್ಯ ನಡೆಯುತ್ತಿರುವ ವಿವಾದಕ್ಕೆ ಅಂತ್ಯ ಎಂದಾಗುತ್ತದೆ ಎಂಬ ಕುರಿತು ಪ್ರತಿಕ್ರಿಯಿಸಿ, ಪಕ್ಷದ ಆಂತರಿಕ ಶಿಸ್ತು ಸಮಿತಿ ಇದ್ದು ಆ ಸಮಿತಿ ಇಬ್ಬರನ್ನು ಸಂಧಾನ ಮಾಡುವ ಭರವಸೆ ನನಗಿದೆ ಎಂದರು.

ಕಾಂಗ್ರೆಸ್ ಸೇರುತ್ತೇನೆಂದು ಎಲ್ಲೂ ಹೇಳಿಲ್ಲ: ಮಾಜಿ ಸಚಿವ ರೇಣುಕಾಚಾರ್ಯ

ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದು ಮೂರು ತಿಂಗಳು ಕಳೆದರೂ ಅಭಿವೃದ್ಧಿ ಕೆಲಸಗಳಿಗಾಗಿ ಶಾಸಕರ ಅನುದಾನಕ್ಕೆ ಒಂದು ಪೈಸೆ ಕೂಡ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರಲ್ಲದೇ ರಾಜ್ಯದಲ್ಲಿನ ಎಸ್‌ಸಿ/ಎಸ್‌ಟಿ ಜನರ ಕಲ್ಯಾಣಕ್ಕಾಗಿ ಮೀಸಲಾಗಿರಿಸಿದ್ದ ಹಣವನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿನಿಯೋಗಿಸುತ್ತಲಿದೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವಾನಂದ ಮಂಠಾಳಕರ್, ಪಕ್ಷದ ವಿಭಾಗೀಯ ಪ್ರಮುಖ ಈಶ್ವರಸಿಂಗ್ ಠಾಕೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ವಿಜಯಕುಮಾರ ಪಾಟೀಲ್ ಗಾದಗಿ, ಅರಹಂತ ಸಾವಳೆ, ಅನೀಲ ಭೂಸಾರೆ, ಶ್ರೀನಿವಾಸ ಚೌದರಿ ಇದ್ದರು.