ನಿಮ್ಮ ಪಕ್ಷದ ಶಾಸಕರು ಮಾರಾಟಕ್ಕಿದ್ದಾರಾ ಅಥವಾ ಶಾಸಕರು ಮಾರಾಟಕ್ಕೆ ಇದ್ದಾರೆ ಎಂಬುದಾಗಿ ನೀವೇ ಹೇಳುತ್ತಿದ್ದೀರಾ ಎಂದು ಬಿಜೆಪಿ ನಾಯಕ ಹಾಗೂ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ತಿರುಗೇಟು ನೀಡಿದ್ದಾರೆ. 

ಬೆಂಗಳೂರು (ಅ.31): ನಿಮ್ಮ ಪಕ್ಷದ ಶಾಸಕರು ಮಾರಾಟಕ್ಕಿದ್ದಾರಾ ಅಥವಾ ಶಾಸಕರು ಮಾರಾಟಕ್ಕೆ ಇದ್ದಾರೆ ಎಂಬುದಾಗಿ ನೀವೇ ಹೇಳುತ್ತಿದ್ದೀರಾ ಎಂದು ಬಿಜೆಪಿ ನಾಯಕ ಹಾಗೂ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ತಿರುಗೇಟು ನೀಡಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷದವರು ಅಂದರೆ ಕೆಲಸ ಇಲ್ಲದವರು ಅಂತ ಅಂದುಕೊಂಡಿದ್ದೀರಾ? ನಿಮ್ಮ ಶಾಸಕರಿಗೆ ಇಷ್ಟು ಅಂತ ಬೆಲೆ ಕಟ್ಟುತ್ತಿದ್ದೀರಾ? ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆಡಳಿತ ನಡೆಸಲು ವಿಫಲ ವಿಫಲ ಆಗಿದ್ದನ್ನು ಮರೆ ಮಾಚಲು ನಮ್ಮ ಮೇಲೆ ಆರೋಪ‌ ಮಾಡುತ್ತಿದ್ದೀರಾ ಎಂದು ಖಾರವಾಗಿ ಪ್ರಶ್ನಿಸಿದರು. ನಾವು ನಿಮ್ಮ ಸರ್ಕಾರವನ್ನು ಯಾವ ರೀತಿ ಉರುಳಿಸುತ್ತೇವೆ ಅಂತ ಹೇಳಿ. ನಮ್ಮ ಬಳಿ‌ ಇರುವುದೇ 66 ಶಾಸಕರು. ಹೇಗೆ ಸರ್ಕಾರ ಬೀಳಿಸಲು ಸಾಧ್ಯ ಎಂದು ಹರಿಹಾಯ್ದರು.

ಕುಮಾರಸ್ವಾಮಿ ಸತ್ಯಾಗ್ರಹಕ್ಕೆ ಅಶ್ವತ್ಥ್‌ ಬೆಂಬಲ: ರಾಮನಗರ ಜಿಲ್ಲೆಯ ಹೆಸರು ಬದಲಾವಣೆಗೆ ಸರ್ಕಾರ ಮುಂದಾಗಿರುವುದು ಖಂಡನೀಯ. ಜಿಲ್ಲೆಯ ಅಭಿವೃದ್ಧಿಗೆ ಏನೂ ಕೊಡುಗೆ ನೀಡದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ವಾರ್ಥಕ್ಕಾಗಿ ಜಿಲ್ಲೆಯ ಹೆಸರು ಬದಲಾವಣೆಗೆ ಮುಂದಾಗಿದ್ದಾರೆ ಎಂದು ಮಾಜಿ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಹೆಸರು ಬದಲಾವಣೆಗೆ ಮುಂದಾದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದು, ಇದಕ್ಕೆ ನಮ್ಮ ಬೆಂಬಲ ಇದೆ ಎಂದರು.

ಡಿ.ಕೆ.ಶಿವಕುಮಾರ್, ರಾಮನಗರ ಜಿಲ್ಲೆಯನ್ನೇ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡಬೇಕು ಎಂದಿದ್ದಾರೆ. ಕನಕಪುರವನ್ನು ಡಿ.ಕೆ.ಶಿವಕುಮಾರ್ 8 ಬಾರಿ ಪ್ರತಿನಿಧಿಸಿದರೂ ಅದು ಹಿಂದುಳಿದ ಕ್ಷೇತ್ರವಾಗಿದೆ. ರಾಮನಗರ ಅಂತ ನಾಮಕರಣ ಮಾಡಿದವರು ಕೆಂಗಲ್ ಹನುಮಂತಯ್ಯ. ಡಿ.ಕೆ.ಶಿವಕುಮಾರ್‌ ಏನಾದರೂ ಒಂದೇ ಒಂದು ಕಲ್ಲನ್ನು ಇಟ್ಟಿದ್ದರಾ? ತಮ್ಮ ಲಾಭಕ್ಕೆ ಇಡೀ ಜಿಲ್ಲೆಯಲ್ಲಿನ ಖನಿಜ ಸಂಪನ್ಮೂಲಗಳನ್ನು ಲೂಟಿ ಮಾಡಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.

ಸರ್ಕಾರಗಳ ಎಡವಟ್ಟುಗಳಿಂದ ಕಾವೇರಿ ಸಮಸ್ಯೆ ಜೀವಂತ: ಎಚ್.ವಿಶ್ವನಾಥ್

ಕನಕಪುರದ ಹೆಮ್ಮೆಯ ಮಗ ಎಂದು ಹೇಳಿಕೊಂಡು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾಗದೆ ಬೆಂಗಳೂರಿಗೆ ಓಡಿ ಬಂದಿದ್ದಾರೆ. ಅವರಂತೂ ಜನರಿಗೆ ಒಳ್ಳೆಯದು ಮಾಡಲ್ಲ, ಆದರೆ ಕೆಟ್ಟದ್ದನ್ನಂತೂ ಮಾಡಬಾರದು. ಸಾತನೂರು ತಾಲೂಕು ಆಗಬೇಕು ಎನ್ನುವ ಬೇಡಿಕೆ ಇದೆ, ಅದನ್ನೇ ಅವರ ಕೈಯಲ್ಲಿ ಮಾಡೋಕೆ ಆಗಿಲ್ಲ. ಈಗ ಜಿಲ್ಲೆಯ ಹೆಸರು ಬದಲಾವಣೆಗೆ ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದರು.