ಕಾಂಗ್ರೆಸ್‌ ಸರ್ಕಾರದ ಲಂಚಾವತಾರದ ನಾಟಕಗಳ ಒಂದೊಂದೇ ಅಂಕ ತೆರೆದುಕೊಳ್ಳುತ್ತಿದ್ದು, ಸೀಸನ್‌ 1, ಸೀಸನ್‌ 2ಎನ್ನುವ ರೀತಿಯಲ್ಲಿ ಎಲ್ಲವೂ ಬಯಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು(ಆ.16): ಕಾಂಗ್ರೆಸ್‌ ಸರ್ಕಾರದ ಲಂಚಾವತಾರದ ನಾಟಕಗಳ ಒಂದೊಂದೇ ಅಂಕ ತೆರೆದುಕೊಳ್ಳುತ್ತಿದ್ದು, ಸೀಸನ್‌ 1, ಸೀಸನ್‌ 2ಎನ್ನುವ ರೀತಿಯಲ್ಲಿ ಎಲ್ಲವೂ ಬಯಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಮಂಗಳವಾರ ಜೆಡಿಎಸ್‌ ಕಚೇರಿ ಜೆ.ಪಿ.ಭವನದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಇತ್ತೀಚೆಗೆ ಸಿನಿಮಾಗಳು ಭಾಗ-1, ಭಾಗ-2 ಎಂದೆಲ್ಲಾ ಬರುತ್ತಿರುವಂತೆ ಸರ್ಕಾರದ ಭ್ರಷ್ಟಾಚಾರದ ಹಗರಣಗಳು ಬರುತ್ತಿದೆ. ಸಿನಿಮಾ ಎಂದ ಮೇಲೆ ಕೊನೆ ಇರಲೇಬೇಕು. 

ಅಂತೆಯೇ ನಾಟಕ ಎಂದರೆ ಅಂತಿಮ ತೆರೆ ಎಳೆಯಲೇಬೇಕು. ಸರ್ಕಾರದ ಲಂಚಾವತಾರಕ್ಕೂ ಅಂತಿಮ ತೆರೆ ಬೀಳುವ ದಿನ ದೂರವಿಲ್ಲ ಎಂದು ಕಿಡಿಕಾರಿದರು. ನನಗೆ ಬುದ್ಧಿಭ್ರಮಣೆಯಾಗಿದೆ ಎಂದು ಕಾಂಗ್ರೆಸ್‌ ನಾಯಕರೊಬ್ಬರು ತಿಳಿಸಿದ್ದು, ನನ್ನ ಬಗ್ಗೆ ಚಿಂತಿಸುವುದು ಬೇಡ. ನಮ್ಮ ಕುಟುಂಬದಲ್ಲಿಯೇ ಸಾಕಷ್ಟು ವೈದ್ಯರಿದ್ದಾರೆ. ಇನ್ನೊಬ್ಬರಿಂದ ನಾನು ಸರ್ಟಿಫಿಕೇಟ್‌ ತೆಗೆದುಕೊಳ್ಳಬೇಕಾಗಿಲ್ಲ. ನನಗೆ ಬುದ್ಧಿಭ್ರಮಣೆಯಾಗಿದ್ದರೆ ನಾನು ತಪಾಸಣೆ ಮಾಡಿಸಿಕೊಳ್ಳುತ್ತೇನೆ. ಆದರೆ, ಮತ ಹಾಕದ ಮತದಾರರ ಪ್ರಭುಗಳ ಬುದ್ಧಿಗೆ ಮಣ್ಣೆರಚುವ ರೀತಿಯಲ್ಲಿ ಭ್ರಷ್ಟಾಚಾರ ಮಾಡುತ್ತಿದ್ದು, ಇಂತಹ ಕೆಟ್ಟ ಸರ್ಕಾರ ಹಿಂದೆ ಇರಲಿಲ್ಲ.

ಪಾಪದ ಹಣದಲ್ಲಿ ವಿದೇಶ ಪ್ರವಾಸ ಅಗತ್ಯವಿಲ್ಲ: ಚಲುವರಾಯಸ್ವಾಮಿಗೆ ಎಚ್‌ಡಿಕೆ ತಿರುಗೇಟು

ಮುಂದೆಯೂ ಬರಲ್ಲ ಎಂದು ಹೇಳಿದ ಅವರು, ಸೋಮವಾರ ಕಾಂಗ್ರೆಸ್‌ ಕಚೇರಿಯಲ್ಲಿ ಸಭೆಯೊಂದು ನಡೆದಿದ್ದು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಇಬ್ಬರೂ ವೀರಾವೇಶದಲ್ಲಿ ಮಾತನಾಡಿದ್ದಾರೆ. ಮುಖ್ಯಮಂತ್ರಿಗಳು ಪೆನ್‌ಡ್ರೈವ್‌ಗೆ ಪ್ರತಿಯಾಗಿ ಪೆನ್‌ ತೆಗೆದು ತೋರಿಸಿ ಅಭಿನಯ ಮಾಡಿದ್ದಾರೆ. ಅವರ ಅಭಿನಯಕ್ಕೆ ಉತ್ತರ ಕೊಡದೇ ಇರಲಾರೆ. ನಾನು ಇಡುವ ಸಾಕ್ಷ್ಯಕ್ಕೆ ಪ್ರತಿಯಾಗಿ ಆರೋಪಿತ ವ್ಯಕ್ತಿಯ ಮೇಲೆ ಕ್ರಮ ಜರುಗಿಸುವ ಎದೆಗಾರಿಕೆ ಮುಖ್ಯಮಂತ್ರಿಗಳಿಗೆ ಇದೆಯಾ? ಇದ್ದರೆ ಹೇಳಲಿ ಎಂದು ಸವಾಲು ಹಾಕಿದರು.

ಉಪ ಮುಖ್ಯಮಂತ್ರಿ ಅವರು ನಮ್ಮ ಅಜ್ಜಯ್ಯನ ಕಥೆ ಇವರಿಗೆ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ. ನಮಗೆ ಅಜ್ಜಯ್ಯನ ರಕ್ಷಣೆ ಇಲ್ಲ, ಅವರೊಬ್ಬರಿಗೆ ಮಾತ್ರ ಅಜ್ಜಯ್ಯನ ರಕ್ಷಣೆ ಇರುವುದು. ಹಾಗಿದ್ದರೆ, ನಮ್ಮ ರಕ್ಷಣೆ ಮಾಡುವವರು ಯಾರು? ನಾಡಿನ ಜನರನ್ನು ರಕ್ಷಣೆ ಮಾಡುವವರು ಯಾರು? ಈ ಬಗ್ಗೆ ಅವರು ಹೇಳಬೇಕಲ್ಲವೇ? ಎಂದು ವಾಗ್ದಾಳಿ ನಡೆಸಿದರು.

ದ್ವೇಷದಿಂದ ಅಭಿವೃದ್ಧಿ ಅಸಾಧ್ಯ, ದುಷ್ಟರ ಆಟ ಇನ್ನು ನಡೆಯಲ್ಲ: ಸಿದ್ದರಾಮಯ್ಯ ಭವಿಷ್ಯ

ಬಿಜೆಪಿಗೆ ನಾನೇನು ಅಡಿಯಾಳಲ್ಲ: ಬಿಜೆಪಿ ಪರವಾಗಿ ಮಾತನಾಡುವುದಕ್ಕೆ ನಾನೇನು ಅವರ ಅಡಿಯಾಳಲ್ಲ. ವಿರೋಧ ಪಕ್ಷದ ಸಾಮಾನ್ಯ ಶಾಸಕನಾಗಿ ನನ್ನ ಕೆಲಸ ಮಾಡುತ್ತಿದ್ದೇನೆ ಅಷ್ಟೇ. ನಾನು ಮಾಡಿರುವ ಆರೋಪದಿಂದ ಹಿಟ್‌ ಆಂಡ್‌ ರನ್‌ ಆಗಿಲ್ಲ. ದಾಖಲೆಗಳನ್ನು ಇಟ್ಟೇ ಮಾತನಾಡುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಪಕ್ಷ ನಾಯಕರಾಗಿದ್ದ ವೇಳೆ ಎಷ್ಟು ದಾಖಲೆ ಬಿಡುಗಡೆ ಮಾಡಿದ್ದರು. ಇವರ ಯೋಗ್ಯತೆಗೆ ಒಂದೇ ಒಂದು ದಾಖಲೆಯನ್ನೂ ಬಿಡುಗಡೆ ಮಾಡಿರಲಿಲ್ಲ. ಇಂತಹವರು ಇನ್ನೊಬ್ಬರ ಯೋಗ್ಯತೆ ಬಗ್ಗೆ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.